ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಕೀಯಕ್ಕೂ ಹಾಗೂ ಚಿತ್ರರಂಗಕ್ಕೂ ಒಂದಲ್ಲ ಒಂದು ರೀತಿಯ ನಂಟು. ಚಿತ್ರರಂಗದಲ್ಲಿ ಮಿಂಚಿದವರು ರಾಜಕೀಯಕ್ಕೆ, ರಾಜಕೀಯ ಗಣ್ಯರು ಚಿತ್ರರಂಗದಲ್ಲಿ ಬಣ್ಣ ಹಚ್ಚುವುದು ಸಹಜ. ಅದೇ ರೀತಿ ಇದೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರದಿ.
ಹೌದು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕನ್ನಡದ ಸಿನಿಮಾ ಒಂದರಲ್ಲಿ ಅಭಿನಯಿಸಿದ್ದಾರೆ. ತನುಜಾ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರೀಕರಣದಲ್ಲಿ ಕೂಡ ಭಾಗವಹಿಸಿದ್ದಾರೆ.
ಈ ಚಿತ್ರ ನಿಜಜೀವನಾಧಾರಿತ ಕಥೆಯಾಗಿದ್ದು, ಕೋವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು 350 ಕಿ.ಮೀ ದೂರ ಪ್ರಯಾಣಿಸಿ ಗಮನ ಸೆಳೆದಿದ್ದ ಹುಡುಗಿಯ ಕಥೆ. ಹರೀಶ್ ಎಂ.ಡಿ. ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಯಡಿಯೂರಪ್ಪ ನಟಿಸುತ್ತಿದ್ದಾರೆ.
ತನುಜಾ ಎಂಬ ಯುವತಿ ಕೊರೊನಾ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ಅಸಹಾಯಕತೆ ವ್ಯಕ್ತಪಡಿಸಿದ್ದಳು. ಈ ವೇಳೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಸುದ್ದಿಯಾಗಿತ್ತು.
ಆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದರು. ಈ ಒನ್ ಲೈನ್ ಸ್ಟೋರಿಯ ಎಳೆ ಹಿಡಿದು ಸಾಮಾಜಿಕ ಕಳಕಳಿಯುಳ್ಳ ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿಯವರು ಚಿತ್ರಕ್ಕೆ ಆಕ್ಷನ್ -ಕಟ್ ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಕೂಡ ಯಡಿಯೂರಪ್ಪ ಮುಖ್ಯಮಂತ್ರಿಯ ಪಾತ್ರ ಮಾಡುತ್ತಿರುವುದು ವಿಶೇಷ. ವಿಶ್ವೇಶ್ವರ ಭಟ್ ಕೂಡ ಅಭಿನಯಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ