Film & EntertainmentKannada NewsKarnataka NewsLatest

*ಬಿ.ಸರೋಜಾ ದೇವಿ ವಿಧಿವಶ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ, ಸರೋಜಾದೇವಿ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸರೋಜಾದೇವಿ ಅವರು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು. ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ. ಬಿ.ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿ. ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಹೆಸರುವಾಸಿಯಾಗಿದ್ದರು. ಅವರು 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

Home add -Advt

ಸರೋಜಾದೇವಿ ಅವರು ಕನ್ನಡ ಚಲನಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಟಿ. ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಿ.ಸರೋಜಾದೇವಿ ದಕ್ಷಿಣ ಭಾರತದ ಧೀಮಂತ ಅಭಿನೇತ್ರಿ. ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಸರೋಜಾ ದೇವಿ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಸರೋಜಾದೇವಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.

ಮೇರು ನಟರಾದ ರಾಜ್​ಕುಮಾರ್, ಕಲ್ಯಾಣ್​ ಕುಮಾರ್ ಮೊದಲಾದವರ ಜೊತೆ ಸರೋಜಾ ದೇವಿ ತೆರೆ ಹಂಚಿಕೊಂಡರು. ‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ಭಾಗ್ಯವಂತರು, ‘ಬಬ್ರುವಾಹನ’ ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನಲ್ಲಿ ‘ಪಾಟ್ಟಾಲಿ ಮುತ್ತು’, ‘ಪಡಿಕಥ ಮೇಥೈ’, ‘ಕಲ್ಯಾಣ ಪರಿಸು’, ತೆಲುಗಿನಲ್ಲಿ ‘ಪಂಡರಿ ಭಕ್ತಲು’, ‘ದಕ್ಷಯಜ್ಞಂ’, ಹಿಂದಿಯಲ್ಲಿ ‘ಆಶಾ’, ‘ಮೆಹಂದಿ ಲಗಾ ಕೆ ರಖನಾ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು.

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಕ ವ್ಯಕ್ತಪಡಿಸಿದ್ದರು.

ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ‌ ಮೂಲಕ ಹಲವು ದಶಕಗಳ‌ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. 

ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ಅವರ ನಿಧನದ ಸುದ್ದಿ ಕೇಳಿ‌ ಮನಸ್ಸಿಗೆ ನೋವಾಯಿತು. ಕನ್ನಡ ಹಾಗೂ ವಿವಿಧ ಭಾಷೆಗಳಲ್ಲಿ ಹಲವು ದಶಕಗಳ ಕಾಲ ನಟಿಸಿ, ತಮ್ಮ ಅಭಿನಯದ ಮೂಲಕ ಮನೆ ಮಾತಾಗಿದ್ದರು. ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ನೀಡಲಿ, ಅಪಾರ ಅಭಿಮಾನಿಗಳಿಗೆ, ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಸಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಹ ಸರೋಜಾದೇವಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿ ಸರೋಜಾದೇವಿ ರವರಿಗೆ ಸಂದ ರಾಷ್ಟ್ರೀಯ ಪ್ರಶಸ್ತಿಗಳು

▪️ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರದಿಂದ 2008 ರ ಜೀವಮಾನ ಸಾಧನೆ ಪ್ರಶಸ್ತಿ .
▪️೧೯೯೨ ಪದ್ಮಭೂಷಣ
▪️೧೯೬೯ ಪದ್ಮಶ್ರೀ
ರಾಜ್ಯ ಪ್ರಶಸ್ತಿಗಳು

▪️೨೦೦೯ – ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿ
▪️೨೦೦೯ – ಕರ್ನಾಟಕ ಸರ್ಕಾರದಿಂದ ಡಾ . ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
▪️೨೦೦೯ – ೨೦೦೯ನೇ ವರ್ಷಕ್ಕೆ ಆಂಧ್ರ ಪ್ರದೇಶ ಸರ್ಕಾರದಿಂದ ಎರಡನೇ ಬಾರಿಗೆ NTR ರಾಷ್ಟ್ರೀಯ ಪ್ರಶಸ್ತಿ
▪️೨೦೦೧ – ೨೦೦೧ ರ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
▪️೧೯೯೩ – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
▪️1988 – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
▪️1980 – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
▪️1969 – ಕುಲ ವಿಲಕ್ಕು ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
▪️1965 – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ
ಇತರ ಪ್ರಶಸ್ತಿಗಳು

▪️2024 – ಪ್ರಜಾವಾಣಿ ಸಿನಿ ಸಮ್ಮಾನದಿಂದ ಜೀವಮಾನ ಸಾಧನೆ ಪ್ರಶಸ್ತಿ
▪️2009 – ನಾಟ್ಯ ಕಲಾಧರ್ ಪ್ರಶಸ್ತಿ— ತಮಿಳು ಸಿನಿಮಾ, ಭರತ್ ಕಲಾಚಾರ್ ಚೆನ್ನೈ ಅವರಿಂದ
▪️೨೦೦೭ – ಕರ್ನಾಟಕ ತೆಲುಗು ಅಕಾಡೆಮಿಯಿಂದ ಗಮನಾರ್ಹ ಸಾಧನೆಗಾಗಿ NTR ಪ್ರಶಸ್ತಿ
▪️೨೦೦೭-ಚಾರಿಟೇಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಆಫ್ ಚೆನ್ನೈ ಅವರಿಂದ ರೋಟರಿ ಶಿವಾಜಿ ಪ್ರಶಸ್ತಿ
▪️೨೦೦೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
▪️ತಮಿಳು ಸಿನಿಮಾಗೆ ನೀಡಿದ ಕೊಡುಗೆಗಾಗಿ 2006 ರ ವಿಜಯ್ ಪ್ರಶಸ್ತಿ
▪️೨೦೦೩ ರ ಸರ್ವತೋಮುಖ ಸಾಧನೆಗಾಗಿ ದಿನಕರನ್ ಪ್ರಶಸ್ತಿ
▪️ಚೆನ್ನೈನಲ್ಲಿ ಸಿನಿಮಾ ಎಕ್ಸ್‌ಪ್ರೆಸ್‌ನಿಂದ 1997 ರ ಜೀವಮಾನ ಸಾಧನೆ ಪ್ರಶಸ್ತಿಗಳು
▪️೧೯೯೪ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ – ದಕ್ಷಿಣ.

Related Articles

Back to top button