![](https://pragativahini.com/wp-content/uploads/2025/02/Vijayendra2.jpg)
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು. ಈ ತಿಂಗಳ 20ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರಿಗೆ ಅನುಭವದ ಕೊರತೆ ಇದೆ ಎನ್ನುವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದ ಅಧ್ಯಕ್ಷನಾಗಿ ನನಗೆ ಅನುಭವದ ಕೊರತೆ ಇರಬಹುದು. ಆದರೆ ಪಕ್ಷದ ಕಾರ್ಯಕರ್ತನಾಗಿ ನನ್ನದೇ ಆದ ಅನುಭವ ಇದೆ. ಕಾರ್ಯದರ್ಶಿಯಾಗಿ, ಉಪಾಧ್ಯಕ್ಷನಾಗಿ, ಕಾರ್ಯಕರ್ತನಾಗಿ ಕೆಲಸ ಮಾಡಿ ಅನುಭವ ಇದೆ. ರಾಜ್ಯದ ಲಕ್ಷಾಂತರ ಕಾರ್ಯಕರ್ತರು ನನ್ನನ್ನು ಪ್ರೀತಿಸುತ್ತಾರೆ. ನಿರಂತರ ಹೋರಾಟ ಮಾಡಿಕೊಂಡು ಬಂದಿರುವುದಕ್ಕೆ ಕಾರ್ಯಕರ್ತರಿಗೆ ತೃಪ್ತಿ, ನನ್ನ ಬಗ್ಗೆ ಸಂತೋಷ ಇದೆ ಎಂದು ತಿರುಗೇಟು ನೀಡಿದರು.
![](https://pragativahini.com/wp-content/uploads/2025/02/Vijayendra1.jpg)
ನಾಯಕರ ಅಭಿಪ್ರಾಯ ಕೇಳಿ ಅಧ್ಯಕ್ಷನನ್ನು ಮಾಡಬೇಕೆಂದಿಲ್ಲ. ಕಾರ್ಯಕರ್ತರ ಅಭಿಪ್ರಾಯ ಕೇಳಿ ಮಾಡಬಹುದು. ನನ್ನ ಬಗ್ಗೆ ಯಾರು ಏನೇ ಹೇಳಿದರೂ ನಾನು ಸಹಿಸಿಕೊಳ್ಳುತ್ತೇನೆ. ಆದರೆ ಯಡಿಯೂರಪ್ಪನವರ ಕುರಿತು ಕೀಳು ಮಟ್ಟದ ಭಾಷೆ ಬಳಸುವ. ತೇಜೋವಧೆ ಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಆದರೆ ಯಡಿಯೂರಪ್ಪನವರ ಬಗ್ಗೆ ಇಷ್ಟೊಂದು ಹೇಳುತ್ತಿದ್ದರೂ ಯಾರೂ ಹಾಗೆ ಮಾತನಾಡಬೇಡಿ ಎಂದು ಹೇಳುತ್ತಿಲ್ಲ ಎಂದು ತಟಸ್ಥ ಬಣದ ನಾಯಕರ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಿರಿಯರಿಗೆ ಅವಮಾನವಾಗುವ ರೀತಿಯಲ್ಲಿ ನಾನು ಯಾವತ್ತೂ ನಡೆದುಕೊಂಡಿಲ್ಲ. ಕಾರ್ಯಕರ್ತರಿಗೆ ನನ್ನ ಬಗ್ಗೆ ತೃಪ್ತಿ ಇದೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ಬದಲು ನಮ್ಮ ನಮ್ಮಲ್ಲೇ ಈ ರೀತಿ ಮಾಡುವುದು ಸರಿಯಲ್ಲ, ಕಾರ್ಯಕರ್ತರಿಗೆ ಅವಮಾನ ಮಾಡುವ ಅಧಿಕಾರ ಯಾರಿಗೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ಬಳಿ ಹೇಳಿಕೊಳ್ಳಲಿ. ಈ ರೀತಿ ಮಾತನಾಡುವುದರಿಂದ ಕಾರ್ಯಕರ್ತರು ತಲೆ ತಗ್ಗಿಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಇದನ್ನು ತಡೆಯುವ ಕೆಲಸ ಮಾಡಲಿ ಎಂದು ಪಕ್ಷದ ಹಿರಿಯ ನಾಯಕರಿಗೆ ಪರೋಕ್ಷವಾಗಿ ತಿವಿದರು.
ಕಳೆದ ಒಂದು ವರ್ಷದಿಂದ ಯಡಿಯೂರಪ್ಪನವರಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದನ್ನು ತಡೆಯುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಹೈಕಮಾಂಡ್ ಬೆಂಬಲ ಕೊಡುತ್ತಿದೆ ಎನ್ನುವುದು ಸುಳ್ಳು. ದೆಹಲಿ ಮಟ್ಟದ ಯಾವ ನಾಯಕರೂ ಇದನ್ನು ಬೆಂಬಲಿಸುವುದಿಲ್ಲ. ಇನ್ನು 8 -10 ದಿನದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಹೇಳಿದರು.
ರಾಜ್ಯಕೀಯ ಭಿನ್ನಾಭಿಪ್ರಾಯ ಇರುತ್ತದೆ. ಆದರೆ ಇಷ್ಟಿರುತ್ತದೆ ಎಂದು ಗೊತ್ತಿರಲಿಲ್ಲ. ತಟಸ್ಥ ಬಣದ ಕುರಿತೂ ಗೊತ್ತಿದೆ. ಯಡಿಯೂರಪ್ಪನವರನ್ನು ಬಯ್ದರೂ ಕೇಂದ್ರದ ನಾಯಕರು ಬಂದು ನಿಲ್ಲಿಸಬೇಕಾ? ಯಡಿಯೂರಪ್ಪನವರನ್ನು ಅವಮಾನ ಮಾಡುವುದನ್ನೂ ನೀವು ಸಹಿಸಿಕೊಳ್ಳುತ್ತೀರಿ ಎಂದರೆ ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲವನ್ನೂ ಚರ್ಚೆ ಮಾಡಿಯೇ ನನ್ನ ನೇಮಕ ಮಾಡಿದ್ದಾರೆ. ಅಡ್ರೆಸ್ ಇಲ್ಲದವರನ್ನೂ ಯಡಿಯೂರಪ್ಪ ಎತ್ತರಕ್ಕೆ ಬೆಳೆಸಿದ್ದಾರೆ. ನಾನೇ ಏನೋ ಅಪರಾಧ ಮಾಡಿದ್ದೇನೆ ಎನ್ನುವ ರೀತಿಯಲ್ಲಿ ಬಿಂಬಿಸುವುದನ್ನು ಸಹಿಸುವುದಿಲ್ಲ. ಇದನ್ನು ಕೇಂದ್ರದ ನಾಯಕರ ಗಮನಕ್ಕೂ ತಂದಿದ್ದೇನೆ. ಹೊಂದಾಣಿಕೆ ರಾಜಕೀಯ ಮಾಡುವುದಾದರೆ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದೆವಾ? ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಒಂಟಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದೇವೆ. ಸಾಕಷ್ಟು ಹೋರಾಟ ಮಾಡಿದ್ದೇವೆ. ಲೋಕಸಬಾ ಚುನಾವಣೆ ಯಶಸ್ವಿಯಾಗಿ ಮಾಡಿದ್ದೇವೆ. ಸದಸ್ಯತ್ವ ನೊಂದಾವಣಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಸಂಘಟನೆ, ಹೋರಾಟದಲ್ಲಿ ನಾವು ಹಿಂದೆ ಬಿದ್ದಿಲ್ಲ. ನನ್ನ ಮೇಲಿನ ಆಪಾಧನೆಗಳು ಸರಿಯಲ್ಲ. ಕಾರ್ಯಕರ್ತರು ಸಂತೃಪ್ತಿಯಿಂದ ಇದ್ದಾರೆ ಎಂದು ಟಾಂಗ್ ನೀಡಿದರು.
ಎಲ್ಲರೂ ಒಪ್ಪುವಂತಹ ಅಧ್ಯಕ್ಷರನ್ನು ಮಾಡಬೇಕೆಂದು ಆರ್.ಅಶೋಕ ಹೇಳಿದ ಕುರಿತು ಪ್ರಶ್ನಿಸಿದಾಗ, ಬೆಂಗಳೂರು ನಗರ ಶಾಸಕರ ಸಭೆ ಕರೆದು ಇದಕ್ಕೆ ಉತ್ತರ ಕೊಡುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ