LatestUncategorized

*ಉಚಿತ ಕೊಡುಗೆ ಭರದಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯ ನಿಲ್ಲಿಸಬಾರದು: ಮಾಜಿ ಸಿಎಂ ಬೊಮ್ಮಾಯಿ ಸಲಹೆ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಉಚಿತ ಕೊಡುಗೆಗಳ ಭರದಲ್ಲಿ ಸರ್ಕಾರ ಶಾಲಾ‌ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕಡಿತ ಮಾಡಬಾರದು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಗೆ ಅನುದಾನ ಪಡಿತವಾಗುವ ಸಾಧ್ಯತೆ ಇದೆ. ಸರ್ಕಾರ ಅದು ಆಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಶಿಗ್ಗಾವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎರಡು ಶಾಲಾ ಕೊಠಡಿಗಳ ಉದ್ಘಾಟನೆಗೆ ಬಂದಿದ್ದಾರೆ ಎಂದು ನಿಮಗೆ ಆಶ್ಚರ್ಯ ಆಗಬಹುದು. ನಾನು ರಾಜ್ಯದ ಭವಿಷ್ಯ ಬರೆಯುವ ದೇಗುಲಗಳ ಉದ್ಘಾಟನೆ ಮಾಡಿದ್ದೇನೆ‌ ಎಂದರು.


ಒಂದು ಗ್ರಾಮಕ್ಕೆ ಕುಡಿಯುವ ನೀರು ಆರೋಗ್ಯದ ಜೊತೆಗೆ ಶಾಲಾ ಕೊಠಡಿಗಳು ಮುಖ್ಯವಾಗಿದೆ. ಅದಕ್ಕಾಗಿ ನಾನು ಶಾಲಾ ಕೊಠಡಿ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ವಿವೇಕ ಯೋಜನೆ ಅಡಿಯಲ್ಲಿ ಸುಮಾರು 9235 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಆದೇಶ ಮಾಡಿದ್ದೇವೆ ಎಂದರು.


ರೈತನ ಭೂಮಿ ಎಷ್ಟಿದೆ ಅಷ್ಟೇ ಇದೆ. ಆದರೆ, ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶಿಕ್ಷಣ ಅತ್ಯಂತ ಮುಖ್ಯ ಆದ್ದರಿಂದ ನಾನು ಶಿಕ್ಷಣಕ್ಕೆ 13% ಅನುದಾನ ನೀಡಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ 12% ಅನುದಾನ ನೀಡಿದ್ದೇನೆ. ನಮ್ಮ ಅವಧಿಯಲ್ಲಿ 15000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಉಂಟಾದರೆ ನಮ್ಮ ಸ್ವಂತ ಟ್ರಸ್ಟ್‌ ನಿಂದ ಶಿಕ್ಷಕರ ನೀಡಲಾಗುವುದು ಎಂದು ಹೇಳಿದರು.


ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ನೀಡಿದ್ದೇನೆ. ಪದವಿ ವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಬಸ್ ನಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಆಗಿರುವುದರಿಂದ ಎಲ್ಲ ವಿದ್ಯಾರ್ಥಿನಿಯರಿಗೂ ಅನುಕೂಲ ಆಗಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button