*ಸಮಾಜಕ್ಕಾಗಿ ಕೆಲಸ ಮಾಡಿದವರು ಮಹಾತ್ಮರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
ಪ್ರಗತಿವಾಹಿನಿ ಸುದ್ದಿ; ಬೈಲಹೊಂಗಲ: ಮಾತನಾಡುವುದು ಸಾಧನೆಯಲ್ಲ, ನಮ್ಮ ಸಾಧನೆಯನ್ನು ಜನರು ಮಾತನಾಡಬೇಕು. ಆ ರೀತಿಯಲ್ಲಿ ಸಮಾಜಕ್ಕಾಗಿ ಕೆಲಸ ಮಾಡಿದವರು ಮಹಾತ್ಮರೆನಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಮಾಜಿ ಶಾಸಕರು, ಸಾಮಾಜಿಕ ಮುಂದಾಳುಗಳು ಆಗಿದ್ದ ದಿ.ಬಾಬುರಾವ್ ಬೋಳಶೆಟ್ಟಿ ಅವರ 18 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುವಾರ ಸಚಿವರು ಮಾತನಾಡಿದರು.
ಅವಕಾಶ ಸಿಕ್ಕಿದಾಗ ಇತಿಹಾಸ ಸೃಷ್ಟಿ ಮಾಡಬೇಕು. ನಮ್ಮ ದೇಶ, ಸ್ವಾತಂತ್ರ್ಯ ಪಡೆದ ಕಳೆದ 77 ವರ್ಷದಲ್ಲಿ ಮಾಡಿದ ಸಾಧನೆಗೆ ಹಳ್ಳಿ ಹಳ್ಳಿಗಳಲ್ಲಿ ಬೋಳಶೆಟ್ಟಿಯವರಂತಹ ಮಹಾತ್ಮರ ಕೆಲಸಗಳು ಕಾರಣೀಭೂತವಾಗಿವೆ. ಇಂತಹ ಮಹಾತ್ಮರು ಬೆಳೆಸಿದ ಸಂಸ್ಥೆಗಳು ಲಕ್ಷಾಂತರ ಜನರಿಗೆ ಬದುಕನ್ನು ಕಟ್ಟಿಕೊಟ್ಟಿವೆ. ಇಂತವರ ಆದರ್ಶಗಳನ್ನು ಪಾಲಿಸೋಣ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಅವರ ಕನಸನ್ನು ನನಸು ಮಾಡೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಮಾತನಾಡಿ, ಬೋಳಶಟ್ಟಿಯಂತವರು ನಮ್ಮಂತ ಯುವಕರಿಗೆ ಆದರ್ಶಪ್ರಾಯ, ಪ್ರೇರಕ ಶಕ್ತಿ. ಅವರು ಕಟ್ಟಿದ ಸಂಸ್ಥೆಗಳು ಹೆಮ್ಮರವಾಗಿ ಬೆಳೆದಿವೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ ಮುಂದಿನ ಪೀಳಿಗೆ ನೆನೆಯುವಂತಹ ಕೆಲಸ ಮಾಡೋಣ ಎಂದರು.
ದೊಡವಾಡ ಹಿರೇಮಠ್ ದ ಶ್ರೀ ಷ.ಬ್ರ.ಶಿವಾಚಾರ್ಯ ಜಡಿಸಿದ್ಧೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸದೆ ಮಂಗಲಾ ಅಂಗಡಿ, ಶಾಸಕ ಮಹಾಂತೇಶ ಕೌಜಲಗಿ, ಶಾಸಕ ಬಾಬಾ ಸಾಹೇಬ ಪಾಟೀಲ್, ಮಾಜಿ ಶಾಸಕ ಜಗದೀಶ್ ಮೆಟಗುಡ್, ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ್, ರಾ.ವಿ.ಮಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಜು ಬಿ. ಬೋಳಶೆಟ್ಟಿ, ಸವದತ್ತಿ ಶಾಸಕರಾದ ವಿಶ್ವಾಸ್ ವೈದ್ಯ, ಕವಯಿತ್ರಿ ಡಾ. ನಿರ್ಮಲ ಬಟ್ಟಲ, ಚನ್ನಪ್ಪ ಅಂಗಡಿ ಹಾಗೂ ಉಡಿಕೇರಿ ಗ್ರಾಮದ ಗುರುಹಿರಿಯರು ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ನಾಗೇಶ್ ನಾಯಕ್ ಬರೆದ ದಿ.ಬಾಬುರಾವ್ ಬೋಳಶೆಟ್ಟಿಯವರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಿರ್ಮಲಾ ಬಟ್ಟಲ ಪುಸ್ತಕ ಪರಿಚಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ