ಪ್ರಗತಿವಾಹಿನಿ ಸುದ್ದಿ, ಸ್ಲೋವಾಕಿಯಾ – ಆಮೆಯ ಚಿಪ್ಪು ಎಷ್ಟು ಗಟ್ಟಿ ಎಂಬುದು ಜನಜನಿತ, ಈ ಚಿಪ್ಪಿನೊಳಗೆ ಆಮೆ ಹೊಕ್ಕಿಂಡರೆ, ಅದರ ಮೇಲೊಂದು ಲಾರಿ ದಾಟಿದರೂ ಮುರಿಯುವುದಿಲ್ಲ. ಆದರೆ ಮನುಷ್ಯನಿಗೆ ಇಷ್ಟು ಗಟ್ಟಿ ಚರ್ಮವಿದ್ದರೆ ಏನಾದೀತು ?
ಇದು ಕೇವಲ ಊಹೆಯ ಮಾತಾಗಿ ಉಳಿದಿಲ್ಲ. ಸ್ಲೋವಾಕಿಯಾದಲ್ಲಿ ೨೦೨೦ರಲ್ಲಿ ಜನಿಸಿದ ಮಗುವಿನ ಚರ್ಮ ವಾಸ್ತವದಲ್ಲಿ ಇಷ್ಟೇ ಗಟ್ಟಿಯಾಗಿ ಬೆಳೆಯುತ್ತಿದೆ. ಎಲಿಜಬೆತ್ ಕ್ಯಾಡ್ಲಿಕ್ ಹೆಸರಿನ ಮಗು ೨೦೨೦ರಲ್ಲಿ ಜನಿಸಿದೆ. ಅತ್ಯಂತ ಸಂಕೀರ್ಣ ಜಿನೆಟಿಕ್ ಕಂಡೀಷನ್ ಹೊಂದಿರುವ ಹಿನ್ನೆಲೆಯಲ್ಲಿ ಮಗುವಿನ ಚರ್ಮ ಬೆಳೆಯುತ್ತ ಬೆಳೆಯುತ್ತ ವಿಪರೀತ ಗಟ್ಟಿಯಾಗುತ್ತದೆ ಎಂದು ವೈದ್ಯರು ಊಹಿಸಿದ್ದು ಈಗ ನಿಜವಾಗುತ್ತಿದೆ. ಎರಡೇ ವರ್ಷದಲ್ಲಿ ಮಗುವಿನ ಚರ್ಮ ೮ ಮಿಮೀ ದಪ್ಪ ಬೆಳೆದಿದೆ. ಅಲ್ಲದೇ ಚಿಪ್ಪಿನಷ್ಟು ಗಟ್ಟಿಯಾಗುತ್ತಿದೆ.
ಹಾರ್ಲೆಕ್ವಿನ್ ಇಥಿಯೋಸಿಸ್ ಎಂದು ಕರೆಯಲಾಗುವ ಈ ಕಾಯಿಲೆ ವಿರಳಾತಿವಿರಳವಾಗಿದ್ದು ಒಂದು ಮಿಲಿಯನ್ ಜನರಲ್ಲಿ ಇಬ್ಬರಲ್ಲಿ ಕಂಡು ಬರುತ್ತದೆ ಎಂದು ಸ್ಲೋವಾಕಿಯಾದ ವೈದ್ಯರು ಹೇಳಿದ್ದಾರೆ.
ಚಿಕಿತ್ಸೆಯೂ ಕಷ್ಟ
ಮಗು ಜನಿಸಿದಾಗಲೇ ಅದರ ಚರ್ಮ ಸಾಕಷ್ಟು ದಪ್ಪವಾಗಿತ್ತು. ದಪ್ಪ ಚರ್ಮದ ಕಾರಣ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರಿಂದ ಕೂಡಲೇ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ದಿನಗಳೆದಂತೆ ಚರ್ಮ ದಪ್ಪವಾಗುತ್ತಲೇ ಇದ್ದು ಈ ಕಾಯಿಲೆಗೆ ಚಿಕಿತ್ಸೆ ಕಷ್ಟಸಾಧ್ಯ ಎಂದು ವೈದ್ಯರು ಹೇಳುತ್ತಾರೆ. ಜನಿಸಿದಾಗ ಈ ಮಗು ಬದುಕುಳಿಯುವುದು ಕಷ್ಟ ಎಂದು ವೈದ್ಯರು ಮಗುವಿನ ತಂದೆ ತಾಯಿಗೆ ಹೇಳಿದ್ದರು. ಆದರೆ ಅದೃಷ್ಟವೊ ದುರಾದೃಷ್ಟವೊ ಮಗು ಬದುಕುಳಿದಿದೆ. ಆದರೆ ಗಟ್ಟಿಯಾದ ಚರ್ಮ ಅದರ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಅಲ್ಲದೇ ಚರ್ಮ ಬೆಳೆದ ಕಾರಣ ಮಗು ಈಗಾಗಲೇ ದೃಷ್ಟಿ ಕಳೆದುಕೊಂಡಿದೆ. ಮತ್ತು ಕೈ, ಕಾಲಿನ ಬೆರಳುಗಳನ್ನು ಚಲಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಗುವಿಗೆ ಪ್ಲಾಸ್ಟಿಕ್ ಸರ್ಜರಿ ಮೂಲಕ ಚರ್ಮ ಬದಲಾಯಿಸಲು ಸಾಧ್ಯವೇ ಎಂದು ಮಗುವಿನ ತಂದೆ ಮಾರ್ಟಿನ್ ಮತ್ತು ತಾಯಿ ನತಾಲಿಯಾ ಚಿಂತಿಸುತ್ತಿದ್ದಾರೆ.
ಚಂದನವನದ ಹೊಸ ಕೋಲ್ಮಿಂಚು ಸುಶ್ಮಿತಾ ಊರ್ವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ