ದೇಶಕ್ಕೆ ದೊಡ್ಡ ದೊಡ್ಡ ನಾಯಕರನ್ನು ಕೊಡುಗೆ ನೀಡಿದ್ದು ಹಿಂದುಳಿದ ವರ್ಗ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು– ಹಿಂದುಳಿದ ವರ್ಗ ದೇಶಕ್ಕೆ ಹಲವಾರು ದೊಡ್ಡ ಮತ್ತು ಉತ್ತಮ ನಾಯಕರನ್ನು ನೀಡಿದೆ. ಅಂಥ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೇರು ಪಂಕ್ತಿಯಲ್ಲಿದ್ದು ಮುಕುಟಪ್ರಾಯ ಎನಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಕರ್ನಾಟಕದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯದ ಹಿಂದುಳಿದ ಸಚಿವರು, ಸಂಸದರು ಹಾಗೂ ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗದವರನ್ನು ಗುತ್ತಿಗೆ ತೆಗೆದುಕೊಂಡ ರೀತಿಯಲ್ಲಿ ಯಾವಾಗಲೂ ವರ್ತಿಸುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಆಗಮನದಿಂದ ಹಿಂದುಳಿದ ವರ್ಗದವರ ಕುರಿತಾಗಿದ್ದ ಸಾಮಾಜಿಕ ಹಾಗೂ ರಾಜಕೀಯ ಲೆಕ್ಕಾಚಾರ ಬದಲಾಗಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗದವರು ಸರ್ವ ಸ್ವತಂತ್ರವಾಗಿ ಚಿಂತನೆ ಮಾಡಬೇಕು, ಜಾಗೃತರಾಗಬೇಕು ಎಂದು ಅವರು ನುಡಿದರು.
ನಮಗೆ ಸಾಮಾಜಿಕ ನ್ಯಾಯ ಬೇಕು, ಸಮನಾದ ಅವಕಾಶ ಕೊಡಿ ಎಂದು ಕೇಳಿ, ನಾವು ನಮ್ಮದೇ ಹಂತದಲ್ಲಿ ಬೆಳೆಯುತ್ತೇವೆ. ಆಕಾಶಕ್ಕೂ ಏಣಿ ಹಾಕುತ್ತೇವೆ. ಭಾರತೀಯ ಜನತಾ ಪಕ್ಷ ನಿಮಗೆ ಅವಕಾಶ ಕೊಡುವುದರ ಮೂಲಕ ಹಿಂದುಳಿದ ವರ್ಗದವರಿಗೆ ನೈಜವಾಗಿ, ಸಾತ್ವಿಕವಾಗಿ, ಸಾರ್ಥಕತೆ ತುಂಬಿರುವಂತಹ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಎಲ್ಲಾ ಹಿಂದುಳಿದ ನಾಯಕರ ಜೊತೆಗೆ ಚರ್ಚೆ ಮಾಡಿ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಏನೆಲ್ಲ ಕೆಲಸ ಮಾಡಬೇಕೆಂಬ ಚಿಂತನೆಯೊಂದಿಗೆ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಸಿದ್ಧರಿದ್ದೇವೆ ಎಂದು ಹೇಳಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಯಾರಿಗೆ ನ್ಯಾಯ ಸಿಕ್ಕಿಲ್ಲವೋ ಅಂಥವರಿಗೆ ಸರ್ಕಾರದ ವ್ಯವಸ್ಥೆಯಲ್ಲಿ ನ್ಯಾಯ ಸಿಗಬೇಕು. ಸರ್ಕಾರದ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ವರ್ಗದವರಿಗೆ ನ್ಯಾಯ ದೊರಕುವುದಿಲ್ಲವೋ ಅಂತಹ ವರ್ಗ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತದೆ. ಆಡಳಿತಗಾರರಿಗೆ ಇದರ ಅರಿವು ಇರಬೇಕು ಎಂದು ಹೇಳಿದರು.
ಉತ್ತರಪ್ರದೇಶ, ಬಿಹಾರ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಪ್ರಾಬಲ್ಯತೆ ಹೆಚ್ಚಿದೆ. ಹಿಂದುಳಿದ ವರ್ಗದ ನಾಯಕತ್ವದ ಮುಕುಟಪ್ರಾಯರಾಗಿ ನರೇಂದ್ರ ಮೋದಿ ಇದ್ದಾರೆ. ನರೇಂದ್ರ ಮೋದಿಯವರು ಕೇವಲ ಹಿಂದುಳಿದ ವರ್ಗದವರೆಂದು ನಾಯಕರಾಗಿಲ್ಲ ಅವರು ನಡೆದುಬಂದ ದಾರಿ, ನಿರಂತರ ಸೇವೆ , ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿಕೊಡುವ ಪರಿ, ಅವರ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಯೋಜನೆಗಳು ಅವರನ್ನು ನಾಯಕರನ್ನಾಗಿಸಿವೆ ಎಂದರು.
ಎಜುಕೇಷನ್, ಎಂಪ್ಲಾಯ್ಮಂಟ್ ಹಾಗೂ ಎಂಪವರ್ಮೆಂಟ್ ಮೂರು “ಇ”ಗಳನ್ನು ಹಿಂದುಳಿದ ವರ್ಗದವರು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
*ಕಾರ್ಯಕರ್ತರಿಗೆ ಕರೆ*
ನಮ್ಮ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ಇಡೀ ಕರ್ನಾಟಕದ ಹಿಂದುಳಿದ ವರ್ಗದವರ ಧ್ವನಿಯಾಗಬೇಕು. ಆಗ ಆ ವರ್ಗದ ಎಲ್ಲರಿಗೂ ನ್ಯಾಯ ಸಿಗುತ್ತದೆ. ಪಕ್ಷಕ್ಕೂ ಸಹ ಬಲ ಬರುತ್ತದೆ. ಯಾವುದೇ ಸಂದರ್ಭದಲ್ಲಿ ಹಿಂದುಳಿದ ವರ್ಗದವರಿಗೆ ಎಲ್ಲಾದರೂ ತೊಂದರೆ ಆದರೆ ಬೇರೆಯವರಿಂದ ನಮಗೆ ಮಾಹಿತಿ ದೊರೆಯುವಂತಾಗಬಾರದು ಬದಲಾಗಿ ನಮ್ಮ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ನಮಗೆ ಮಾಹಿತಿ ತಲುಪುವಂತಾಗಬೇಕು ಮತ್ತು ಸಕಾಲದಲ್ಲಿ ಅದನ್ನು ಬಗೆಹರಿಸುವಂತಾಗಬೇಕು ಎಂದು ಬೊಮ್ಮಾಯಿ ಹೇಳಿದರು.
*ಭಾರತೀಯ ಜನತಾ ಪಕ್ಷದ* *ಹಿಂದುಳಿದ ವರ್ಗಗಳ ಮೋರ್ಚಾ* ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಚಿವರು, ಸಂಸದರು ಮತ್ತು ಶಾಸಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ *ಮುಖ್ಯಮಂತ್ರಿ* *ಬಸವರಾಜ ಬೊಮ್ಮಾಯಿ ಚಾಲನೆ* *ನೀಡಿ ಮಾತನಾಡಿದರು.* ಸಚಿವರಾದ ಕೆ ಎಸ್ ಈಶ್ವರಪ್ಪ, ಬೈರತಿ ಬಸವರಾಜ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟಿಲ್, ಸಂಸದ ಪಿ ಸಿ ಮೋಹನ್, ಶಾಸಕ ತಿಪ್ಪಾರೆಡ್ಡಿ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ