
ಪ್ರಗತಿವಾಹಿನಿ ಸುದ್ದಿ: ಮನೆಯ ಬಾಗಿಲ ಮುಂದೆ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ ಸಂಭವಿಸಿ ಮನೆ ಹಾಗೂ ವಾಹನಗಳು ಸುಟ್ತು ಕರಕಲಾಗಿದ್ದು, ಏಳು ಜನರು ಗಾಯಗೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿರುವ ಉಮೇಶ್ ಮೇಟಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಉಮೇಶ್ ಮೇಟಿ ಮನೆಯಲ್ಲಿ ಬಾಡಿಗೆಗೆ ಇದ್ದ ರಾಜೇಂದ್ರ ತಪಶೆಟ್ಟಿ ಕುಟುಂಬದವರು ಮನೆಯ ಮುಂದೆ ದೀಪ ಹಚ್ಚಿದ್ದರು. ದೀಪದ ಕಿಡಿ ಸ್ಥಳದಲ್ಲಿ ಚೆಲ್ಲಿದ್ದ ಆಯಿಲಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ವಾಹನಗಳು ಸುಟ್ತು ಕರಕಲಾಗಿವೆ.
ಇದೇ ವೇಳೆ ಮನೆಗೂ ಬೆಂಕಿ ವ್ಯಾಪಿಸಿದೆ. ಮನೆಯಲ್ಲಿದ್ದವರು ಹೊರಗೋಡಿಬಂದು ರಕ್ಷಿಸಿಕೊಂಡಿದ್ದಾರೆ. ಬೆಂಕಿಯಿಂದಾಗಿ 7 ಜನರು ಸುಟ್ಟು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿದ್ದ ವಸ್ತುಗಳು, ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ.