
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರ ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ಹಣ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಬೈಲಹೊಂಗಲ ಸಂಪೂರ್ಣ ಬಂದ್ ಮಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಚನ್ನಮ್ಮನ ಸಮಾಧಿ ಸ್ಥಳದಿಂದ ಆರಂಭವಾದ ರ್ಯಾಲಿ ಬಜಾರ ರಸ್ತೆ, ಮೇದಾರ ಗಲ್ಲಿ, ಮರಡಿ ಬಸವೇಶ್ವರ ದೇವಸ್ಥಾನ, ಧಾರವಾಡ ಬೈಯಪಾಸ್ ರಸ್ತೆ, ಚನ್ನಮ್ಮನ ವೃತ್ತ, ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ ಮಾರ್ಗವಾಗಿ ರಾಯಣ್ಣ ವೃತ್ತಕ್ಕೆ ಬಂದು ತಲುಪಿತು. ರಸ್ತೆಯುದ್ದಕ್ಕೂ ಹೋರಾಟಗಾರರು ಸಿಎಂ ವಿರುದ್ಧ ಘೋಷಣೆ ಕೂಗಿದರು.
ರಾಯಣ್ಣ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ವಕೀಲರಾದ ಶ್ರೀಶೈಲ ಬೋಳನ್ನವರ, ಎಫ್.ಎಸ್.ಸಿದ್ದನಗೌಡರ, ಮುರುಗೇಶ ಗುಂಡ್ಲೂರ, ಎಂ.ವೈ.ಸೋಮಣ್ಣವರ, ಎಂ.ಆರ್. ಮೆಳವಂಕಿ, ಶಂಕರ ಮಾಡಲಗಿ, ಉದ್ಯಮಿ ವಿಜಯ ಮೆಟಗುಡ್ಡ, ಕಿತ್ತೂರ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ನಾಡಿನ ರಾಜಕೀಯ ನಾಯಕರು, ಹೋರಾಟಗಾರರು, ಚನ್ನಮ್ಮನ ಅಭಿಮಾನಿಗಳು, ಕರವೇ, ಕಿತ್ತೂರ ಕರ್ನಾಟಕ ಸೇನೆ ಕಾರ್ಯಕರ್ತರು, ಎಲ್ಲ ವ್ಯಾಪಾರಸ್ಥರು, ಮಾಲಿಕರು, ಸಿಬ್ಬಂದಿ, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ತಮ್ಮ, ತಮ್ಮ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದರು.