Belagavi NewsBelgaum NewsEducationKarnataka NewsLatest

*ಮೂಡಲಗಿ ವಲಯ ಶೈಕ್ಷಣಿಕವಾಗಿ ಸುಧಾರಿಸುವಲ್ಲಿ ನಿರ್ಗಮಿತ ಬಿಇಓ ಅಜೀತ ಮನ್ನಿಕೇರಿ ಪಾತ್ರ ಗಣನೀಯ: ಶಾಸಕ ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಮೂಡಲಗಿ ವಲಯವು ಶೈಕ್ಷಣಿಕವಾಗಿ ಸುಧಾರಿಸುವಲ್ಲಿ ನಿರ್ಗಮಿತ ಬಿಇಓ ಅಜೀತ ಮನ್ನಿಕೇರಿ ಅವರ ಪಾತ್ರ ಗಣನೀಯವಾಗಿದ್ದು, ಈಗಿರುವ ಗುಣಮಟ್ಟದ ಶಿಕ್ಷಣವನ್ನು ಮುಂದುವರೆಸಿಕೊಂಡು ಹೋಗಲು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ನೂತನ ಬಿಇಓ ಅವರಿಗೆ ಸಲಹೆ ಮಾಡಿದರು.


ಶನಿವಾರದಂದು ತಾಲ್ಲೂಕಿನ ತಿಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಜರುಗಿದ ಮೂಡಲಗಿ ತಾಲ್ಲೂಕು ಮಟ್ಟದ ಗುರುಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟ ದರ್ಜೆಯ ಶಿಕ್ಷಣ ನೀಡುತ್ತಿರುವ ವಲಯದ ಸಾಧನೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮೊದಲು ಬರಡು ಭೂಮಿಯಂತಾಗಿದ್ದ ಶಿಕ್ಷಣವನ್ನು ನೀರಾವರಿ ಪ್ರದೇಶವನ್ನಾಗಿ ಮಾಡಿ ಉತ್ತಮ ಫಸಲು ಬರುವಂತೆ ಮಾಡಿರುವ ಕೀರ್ತಿ ಮನ್ನಿಕೇರಿ ಅವರಿಗೆ ಸಲ್ಲುತ್ತದೆ. ವಲಯದ ಫಲಿತಾಂಶಗಳು ರಾಜ್ಯದಲ್ಲೆಡೆ ಗುರುತಿಸುವಂತಾಗಿದೆ ಎಂದು ಹೇಳಿದರು.

ಬಿಇಓ ಆಗಿದ್ದ ಅಜೀತ ಮನ್ನಿಕೇರಿ ಅವರು ಮೂಡಲಗಿ ವಲಯವನ್ನು ಎತ್ತರಕ್ಕೆ ಬೆಳೆಸುವಲ್ಲಿ ಮಹತ್ಕಾರ್ಯ ಮಾಡಿದರು. ಒಂದೇಡೆ ಮನ್ನಿಕೇರಿ ಅವರು ಪದೋನ್ನತಿ ಹೊಂದಿ ಹೋಗುತ್ತಿರುವುದು ಸಂತೋಷಕ್ಕೆ ಕಾರಣವಾದರೆ, ಇನ್ನೊಂದೆಡೆ ಮೂಡಲಗಿ ವಲಯ ಬಿಟ್ಟು ನಿರ್ಗಮಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ ನಿಯೋಜಿತ ನೂತನ ಬಿಇಓ ಪಿ.ಬಿ. ಹಿರೇಮಠ ಅವರು ಕಾರ್ಯ ನಿರ್ವಹಿಸಲಿ. ವಲಯದ ಕೀರ್ತೀಯೂ ಇನ್ನೂ ಹೆಚ್ಚಿಸಲಿ ಎಂದರು.


ಸರ್ಕಾರಿ ಶಾಲೆಗಳೆಂದರೆ ಅಸೂಯೆ ಪಡುತ್ತಿರುವ ಇಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳಿಗಿಂತ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ವಲಯವು ಭಾಜನವಾಗಿರುವುದು ಖುಷಿ ತರುತ್ತಿದೆ. ಎರಡು ಬಾರಿ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಬಾಚಿಕೊಂಡಿರುವದರ ಹಿಂದೆ ಮನ್ನಿಕೇರಿ ಅವರ ಶ್ರಮವಿದೆ. ನಮ್ಮ ವಲಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ರಾಜ್ಯದಲ್ಲಿಯೇ 3 ನೇ ಸ್ಥಾನವನ್ನು ಅಲಂಕರಿಸಿದೆ. ಶಿಕ್ಷಕರ ಸಂಘಟಿತ ಕಲಿಕೆಯಿಂದ ಇವೆಲ್ಲವನ್ನೂ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ತಿಗಡಿ ಗ್ರಾಮಸ್ಥರ ಒಗ್ಗಟ್ಟಿನ ಶಕ್ತಿಯಿಂದಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಡಲು ಕಾರಣೀಕರ್ತರಾದವರನ್ನು ಅಭಿನಂದಿಸಿದ ಅವರು, ಶಿಕ್ಷಕರಿಗೆ ಗೌರವವನ್ನು ನೀಡಲು ಪ್ರತಿ ವರ್ಷವೂ ಶಿಕ್ಷಕರ ದಿನಾಚರಣೆಯನ್ನು ಅತೀ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

Home add -Advt


ಶಾಸಕನಾಗುವ ಪೂರ್ವದಲ್ಲಿ ಕೇವಲ 12 ಸರ್ಕಾರಿ ಪ್ರೌಢಶಾಲೆಗಳನ್ನು ಹೊಂದಿದ್ದ ವಲಯವು, ನಾನು ಈ ಭಾಗದ ಶಾಸಕನಾದ ನಂತರ ಹೊಸದಾಗಿ 28 ಸರ್ಕಾರಿ ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಇದರಿಂದ ಒಟ್ಟು 40 ಸರ್ಕಾರಿ ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ವಸತಿ ಶಾಲೆಗಳು ನಮ್ಮ ವಲಯದಲ್ಲಿವೆ. ಪ್ರತಿ ವರ್ಷವೂ ವಸತಿ ಶಾಲೆಗಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ದರ್ಜೆಯ ಫಲಿತಾಂಶವನ್ನು ನೀಡುವ ಮೂಲಕ ವಲಯಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.


ಹಳ್ಳೂರ, ತುಕ್ಕಾನಟ್ಟಿ ಮತ್ತು ಖಂಡ್ರಟ್ಟಿ ಗ್ರಾಮಗಳ ಸಾರ್ವಜನಿಕರ ಬೇಡಿಕೆಯಂತೆ ಪ್ರಸಕ್ತ ವರ್ಷದಿಂದ ಹೊಸದಾಗಿ ಸರ್ಕಾರಿ ಪ್ರೌಢಶಾಲೆಗಳನ್ನು ಆರಂಭಿಸಲಾಗಿದೆ. ಇದು ಷರತ್ತುಬದ್ಧವಾಗಿದ್ದು, ಇಲಾಖೆಯ ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡ ಬಳಿಕವೇ ಈ ಮೂರು ಗ್ರಾಮಗಳಿಗೆ ಪ್ರೌಢಶಾಲೆಗಳು ಮಂಜೂರಾಗಿವೆ. ಮೂರು ವರ್ಷಗಳ ಶಿಕ್ಷಕರ ವೇತನವೂ ಸೇರಿದಂತೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆಂದು ಶಾಲಾ ಶಿಕ್ಷಣ ಇಲಾಖೆಗೆ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.


ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ತಿಗಡಿ, ಹಳ್ಳೂರ ಮತ್ತು ಖಂಡ್ರಟ್ಟಿ ಗ್ರಾಮಗಳ ನಾಗರೀಕರು ಸತ್ಕರಿಸಿದರು.
ಸೇವೆಯಿಂದ ನಿವೃತ್ತರಾದ ಶಿಕ್ಷಕರು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ವಿವಿಧ ಪ್ರತಿಷ್ಟಾನಗಳಿಂದ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.


ಮೂಡಲಗಿ ಬಿಇಓ ಆಗಿ ಸೇವೆ ಸಲ್ಲಿಸಿ ಈಗ ಬಾಗಲಕೋಟೆ ಡಿಡಿಪಿಐ ಆಗಿ ಸೇವೆಗೆ ಪದೋನ್ನತಿ ಪಡೆದಿರುವ ಅಜೀತ ಮನ್ನಿಕೇರಿ ಅವರಿಗೆ ಶಾಸಕರು 2000 ಗ್ರಾಂ. (2 ಕಿಲೋ ) ತೂಕದ ಬೆಳ್ಳಿಯ ಆಕರ್ಷಕ ಗಣೇಶನ ವಿಗ್ರಹವನ್ನು ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.


ವೇದಿಕೆಯಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡಮೆ, ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೆ, ಚಿಕ್ಕೋಡಿ ಡಿಡಿಪಿಐ ಸೀತಾರಾಮ ಆರ್.ಎಸ್, ಮೂಡಲಗಿ ತಾ.ಪಂ.ಇಓ ಎಫ್.ಜಿ.ಚಿನ್ನನ್ನವರ, ಆರ್.ಎಂ. ಮಠದ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಆನಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ,ಎ.ಬಿ.ಮಲಬನ್ನವರ, ಸಿಡಿಪಿಓ ಯಲ್ಲಪ್ಪ ಗದಾಡಿ,ಅರಭಾವಿ ಕ್ಷೇತ್ರದ ಗಣ್ಯರು, ಮುಖಂಡರು, ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ತಿಗಡಿ ಗ್ರಾಮದ ಸಮಸ್ತ ಹಿರಿಯರು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕರ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button