ಸಧ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪಂಚಮಸಾಲಿ, ಉಪ್ಪಾರಗಳ ಮೀಸಲಾತಿ ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಮನವಿ ಮಾಡಿಕೊಳ್ಳುವೆ
-ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಉಪ್ಪಾರ ಸಮಾಜ ನಡೆಸುತ್ತಿರುವ ಹೋರಾಟಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಬೆಂಬಲ ಸೂಚಿಸಿದ್ದಾರೆ.
ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ಬಗ್ಗೆ ಹೇಳಿಕೆ ನೀಡಿ, ಉಪ್ಪಾರ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವುದಾಗಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು ೫೦ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಪ್ಪಾರ ಸಮುದಾಯವಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಮುದಾಯದ ಹಿತದೃಷ್ಟಿಯಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಉಪ್ಪಾರ ಸಮಾಜದವರ ಹೋರಾಟವನ್ನು ನಾವು ಬೆಂಬಲಿಸುತ್ತೇವೆ. ಕಳೆದ ಹಲವಾರು ವರ್ಷಗಳಿಂದ ಸಮಾಜ ಬಾಂಧವರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸುತ್ತಲೇ ಬರುತ್ತಿದ್ದಾರೆ. ಜೊತೆಗೆ ಅರಭಾವಿ ಮತಕ್ಷೇತ್ರದಲ್ಲಿಯೂ ಈ ಸಮುದಾಯ ಅಧಿಕ ಸಂಖ್ಯೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಇವರ ಜೊತೆಗೆ ಪರಿಶಿಷ್ಟ ಜಾತಿಯ ಮಾದಿಗ ಸಮಾಜದವರು ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆಯೂ ನಡೆಸುತ್ತಿರುವ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೀಘ್ರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪಂಚಮಸಾಲಿ, ಉಪ್ಪಾರ ಸಮಾಜಗಳ ಮೀಸಲಾತಿಗೆ ಹಾಗೂ ಮಾದಿಗ ಸಮಾಜದವರ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಪತ್ರ ರವಾನೆ
ರಾಜ್ಯದಲ್ಲಿ ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಉಪ್ಪಾರ ಸಮಾಜ ನಡೆಸುತ್ತಿರುವ ಹೋರಾಟದ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದು, ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರಾಜ್ಯದಾದ್ಯಂತ ಸುಮಾರು ೫೨ ಲಕ್ಷಕ್ಕೂ ಅಧಿಕ ಜನ ಉಪ್ಪಾರ ಜನಾಂಗದವರಿದ್ದು, ಇವರೆಲ್ಲ ಹಿಂದುಳಿದ ವರ್ಗದವರಾಗಿರುತ್ತಾರೆ. ಭೂಮಂಡಲಕ್ಕೆ ಗಂಗೆಯನ್ನು ಹರಿಸಿ ತಂದಿರುವ ಭಗೀರಥ ಮಹರ್ಷಿಗಳ ವಾರಸುದಾರರಾಗಿದ್ದಾರೆ. ಆದಿಕಾಲದಿಂದಲೂ ಉಪ್ಪು ತಯಾರಿಸುವ ವೃತ್ತಿಯಲ್ಲಿ ಇದ್ದು ಕಾಲಕ್ರಮೇಣ ಕಟ್ಟಡಗಳ ನಿರ್ಮಾಣದಲ್ಲಿ ವಿಶೇಷ ಪಾತ್ರ ವಹಿಸಿರುತ್ತಾರೆ. ಉಪ್ಪಾರ ಜನಾಂಗವನ್ನು ಪರಿಶಿ? ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಸಮಾಜದ ಜನತೆ ಒತ್ತಾಯಿಸುತ್ತಿದ್ದು ಅವರ ಬೇಡಿಕೆಯನ್ನು ಸಹಾನೂಭೂತಿಯಿಂದ ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದರು.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಈಗಾಗಲೇ ಹಿಂದುಳಿದ ಆಯೋಗಳಾದಂತಹ ನ್ಯಾ. ಹಾವನೂರ, ನ್ಯಾ. ವೆಂಕಟಸ್ವಾಮಿ ಹಾಗೂ ನ್ಯಾ, ಚಿನ್ನಪ್ಪ ರೆಡ್ಡಿ ಆಯೋಗಗಳು ವರದಿ ನೀಡಿ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಗಳ ರೀತಿಯಲ್ಲಿ ಹಿಂದುಳಿದಿರುವ ಉಪ್ಪಾರ ಸಮಾಜವನ್ನು ಮುಖ್ಯವಾಹಿನಿಗೆ ತರುವಂತೆ ವರದಿ ಸಲ್ಲಿಸಿವೆ. ಈ ಎಲ್ಲ ವದರಿಗಳ ಆಧಾರದ ಮೇಲೆ ಅಗತ್ಯಕ್ರಮ ಕೈಗೊಳ್ಳಬೇಕಾಗಿ ಸಂಸದ ಈರಣ್ಣ ಕಡಾಡಿ ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ