Kannada NewsLatestPoliticsWorld

*ಬಲೂಚಿಸ್ತಾನ ಬಂಡುಕೋರರ ದಾಳಿ: 80 ಕ್ಕೂ ಅಧಿಕ ಪಾಕಿಸ್ತಾನಿ ಸೈನಿಕರ ಸಾವು*

ಪ್ರಗತಿವಾಹಿನಿ ಸುದ್ದಿ: ಆಪರೇಷನ್ ಹೆರೋಫ್ ಫೇಸ್ ॥’ ಕಾರ್ಯಾಚರಣೆಯ ಅಡಿಯಲ್ಲಿ ಬಲೂಚಿಸ್ತಾನದಲ್ಲಿ ನಡೆಸಿದ ಸರಣಿ ದಾಳಿಗಳಲ್ಲಿ 80ಕ್ಕೂ ಹೆಚ್ಚು ಪಾಕಿಸ್ತಾನಿ ಭದ್ರತಾ ಪಡೆಗಳ ಸದಸ್ಯರು, ಪೊಲೀಸ್ ಮತ್ತು ಗುಪ್ತಚರ ಇಲಾಖೆಯ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೆ ಬಿಡುಗಡೆ ಮಾಡಿದೆ.

ಶುಕ್ರವಾರ ರಾತ್ರಿ ಆರಂಭವಾಗಿ ಶನಿವಾರದವರೆಗೆ ಮುಂದುವರಿದ ಈ ದಾಳಿಯಲ್ಲಿ ಭದ್ರತಾ ಪಡೆಗಳು, ಪೊಲೀಸ್ ಠಾಣೆಗಳು ಮತ್ತು ನಾಗರಿಕರನ್ನು ಸೇರಿದಂತೆ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದಕ್ಕೆ ಪ್ರತಿಯಾಗಿ ಸೇನೆ ಮತ್ತು ಕಾನೂನು ಜಾರಿ ಸಂಸ್ಥೆಗಳು ಪ್ರತಿದಾಳಿ ಕಾರ್ಯಾಚರಣೆಗಳನ್ನು ಆರಂಭಿಸಿವೆ ಎನ್ನಲಾಗಿದೆ.

ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ಗ್ವಾದರ್, ಮಕ್ರಾನ್, ಹಬ್, ಚಮನ್, ನಸೀರಾಬಾದ್ ಮತ್ತು ನುಷ್ಕ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ದಾಳಿ ನಡೆದಿದೆ ಎಂದು ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ.

ಉಗ್ರರು ಪೊಲೀಸ್ ಠಾಣೆಗಳು, ಭದ್ರತಾ ಚೆಕ್‌ಪೋಸ್ಟಗಳು ಹಾಗೂ ಸರ್ಕಾರಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಮತ್ತು ಸ್ಫೋಟಗಳನ್ನು ನಡೆಸಿದ್ದಾರೆ. ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರು ಸಾವಿಗೀಡಾಗಿದ್ದಾರೆ.

ದಾಳಿಯ ಬಳಿಕ ಸೇನೆ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದು ಹಲವು ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಘಟನೆಯ ಬಗ್ಗೆ ಫೆಡರಲ್ ಮಾಹಿತಿ ಸಚಿವ ಅತಾವುಲ್ಲಾ ತರಾ‌ರ್ ಪ್ರತಿಕ್ರಿಯಿಸಿದ್ದು, ಉಗ್ರರು ಪೊಲೀಸ್ ಠಾಣೆಗಳು ಮತ್ತು ಫ್ರಾಂಟಿಯರ್ ಕಾರ್ಡ್ಸ್ (ಎಫ್‌ಸಿ) ಸ್ಥಾನಗಳ ಮೇಲೆ ದಾಳಿ ಮಾಡಲು ಯತ್ನಿಸಿದರು. ಆದರೆ ಭದ್ರತಾ ಪಡೆಗಳು ಎಚ್ಚರಿಕೆಯಿಂದ ಇದ್ದುದರಿಂದ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದ್ದು, ಉಗ್ರರು ಹಿಮ್ಮೆಟ್ಟಬೇಕಾಯಿತು ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button