*ಬಾಟಲಿಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ: ಪೊಲೀಸ್ ಆಯುಕ್ತರ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಂಧನದ ಅಭಾವವಾಗುವ ವದಂತಿಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಸಂಗ್ರಹಣೆ (ಹೋರ್ಡಿಂಗ್) ತಡೆಯುವ ಉದ್ದೇಶದಿಂದ ಬೆಳಗಾವಿ ನಗರದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿಗಳು, ಕ್ಯಾನ್‌ಗಳು ಸೇರಿದಂತೆ ಯಾವುದೇ ಪಾತ್ರೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಗರದ ಕೆಲವು ಭಾಗಗಳಲ್ಲಿ ಇಂಧನ ಕೊರತೆ ಉಂಟಾಗುವ ವದಂತಿಯ ಹಿನ್ನೆಲೆಯಲ್ಲಿ ಜನರು ಬಾಟಲಿಗಳಲ್ಲಿ ಇಂಧನ ಸಂಗ್ರಹಿಸುವ ಪ್ರವೃತ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುವ ಜೊತೆಗೆ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಬೆಳಗಾವಿಯ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ವಾಹನ ಸವಾರರು ಸಹ ಸಹಕರಿಸಿ ಅನಗತ್ಯವಾಗಿ ಬಾಟಲಿಗಳಲ್ಲಿ ಇಂಧನ ಸಂಗ್ರಹಿಸಲು ಮುಂದಾಗಬಾರದು ಎಂದು ಮನವಿ ಮಾಡಲಾಗಿದೆ.
ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

