ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೈಬರ್ ಕ್ರೈಂ ಪ್ರಕರಣದ ತನಿಖೆಗೆ ತೆರಳಿದ್ದ ಬೆಂಗಳೂರಿನ ಸಿಇಎನ್ ಪೊಲೀಸರ ವಿರುದ್ಧ ಕೇರಳದಲ್ಲಿ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನ ಸಿಇಎನ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸೇರಿ ಮೂವರ ವಿರುದ್ಧ ಕೇರಳದಲ್ಲಿ ಎಫ್ ಐ ದಾಖಲಾಗಿದೆ.
ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಫ್ಟ್ ವೇರ್ ಇಂಜಿನಿಯರ್ ಓರ್ವರಿಂದ ಬರೋಬ್ಬರಿ 26 ಲಕ್ಷ ರೂಪಾಯಿ ಹಣವನ್ನು ಆನ್ ಲೈನ್ ಮೂಲಕ ಪಾವತಿಸಿಕೊಂಡು ದುಷ್ಕರ್ಮಿಗಳು ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ ಫೀಲ್ಡ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಸಿಇಎನ್ ಪೊಲೀಸರು ಪ್ರಕರಣದ ಆರೋಪಿ ಐಸಾಕ್ ಎಂಬಾತನ ಬಗ್ಗೆ ಮಡಿಕೇರಿಗೆ ತೆರಳಿ ಪರಿಶೀಲಿಸಿದ್ದರು. ಅಲ್ಲಿ ಹೋದಾಗ ಆತನ ಅಕೌಂಟ್ ಗೆ 2 ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ಗೊತ್ತಾಗಿದೆ.
ಈ ಪ್ರಕರಣದ ಬೆನ್ನು ಹತ್ತಿ ಪೊಲೀಸರು ಕೇರಳಕ್ಕೆ ತೆರಳಿದ್ದರು. ಇನ್ಸ್ ಪೆಕ್ಟರ್ ಶಿವಪ್ರಕಾಶ್ ಹಾಗೂ ತಂಡ ಕೇರಳದಲ್ಲಿ ಪರಿಶೀಲನೆ ನಡೆಸಿದೆ. ನೌಶಾದ್ ಎಂಬಾತನಿಂದ ಆನ್ ಲೈನ್ ವಂಚನೆ ಆಗಿರುವುದು ತಿಳಿದಿದೆ. ಆತನನ್ನು ಬಂಧಿಸಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಕೇಸ್ ಮುಚ್ಚಿ ಹಾಕಲು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 3.95 ಲಕ್ಷ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದು, ಬೆಂಗಳೂರು ಪೊಲೀಸರು ತಾವು ಪ್ರಕರಣವೊಂದರ ತನಿಖೆಗೆ ಬಂದಿದ್ದಾಗಿ ಹೇಳಿದ್ದಾರೆ. ಆದರೂ ಕೊಲ್ಲಂಚೇರಿ ಪೊಲೀಸರು ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರು ಸಿಬ್ಬಂದಿಗಳನ್ನುವಶಕ್ಕೆ ಪಡೆದು ಎಫ್ ಐ ಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ