ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಮೂವರ ದುರ್ಮರಣ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತರಗುಪೇಟೆಯಲ್ಲಿನ ಗೋದಾಮೊಂದರಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಗೋದಾಮಿನಲ್ಲಿದ್ದ ಇಬ್ಬರು ಹಾಗೂ ಪಂಚರ್ ಅಂಗಡಿಯ ಓರ್ವ ಸೇರಿ ಮೂವರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋದಾಮಿನ ಹೊರಗೆ ನಿಲ್ಲಿಸಿದ್ದ 10ಕ್ಕೂ ಹೆಚ್ಚು ಬೈಕ್ ಗಳು ಸುಟ್ಟುಕರಕಲಾಗಿವೆ.
ಸ್ಫೋಟದ ತೀವ್ರತೆಗೆ ಮನೋಹರ, ಅಸ್ಲಾಂ ಪಯಾಜ್ ಎಂಬ ಮೂವರ ದೇಹ ಛಿದ್ರ ಛಿದ್ರಗೊಂಡು ಮೂರು ಮೀಟರ್ ದೂರಕ್ಕೆ ಹಾರಿ ಬಿದ್ದಿದೆ. ಭಯಂಕರ ಶಬ್ಧಕ್ಕೆ ಸುತ್ತಮುತ್ತಲಿನ ಮನೆಯವರು ಹೊರಗೋಡಿ ಬಂದಿದ್ದಾರೆ. ಆದರೆ ಸ್ಫೋಟಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ.
ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಇದೊಂದು ಟ್ರಾನ್ಸ್ ಪೋರ್ಟ್ ಗೋದಾಮಿನಂತೆ ಕಂಡು ಬರುತ್ತಿದ್ದು, ಇದರಲ್ಲಿ 60 ಬಾಕ್ಸ್ ಪಟಾಕಿ ಸಂಗ್ರಹಿಸಿಡಲಾಗಿದೆ. ಆದರೆ ಪಟಾಕಿ ಬಾಕ್ಸ್ ಆಗಲಿ, ಸಿಲಿಂಡರ್ ಆಗಲಿ ಸ್ಫೋಟಗೊಂಡಿಲ್ಲ. ಪಟಾಕಿ ಬಾಕ್ಸ್ ನಡುವೆ ಇದ್ದ ಒಂದು ಬಾಕ್ಸ್ ಮಾತ್ರ ಸ್ಫೋಟಗೊಂಡಿರುವುದು ಸನುಮಾನಮೂಡಿಸಿದೆ. ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ತಿಳಿಸಿದರು.
ಘಟನಾ ಸ್ಥಾಳಕ್ಕೆ ಈಗಾಗಲೇ ಬಾಂಬ್ ಪತ್ತೆ ದಳ, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಫೋಟಕ್ಕೆ ಅಸಲಿ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.
ಮತ್ತೊಂದು ಘೋರ ದುರಂತ; ನಿಗೂಢ ಸ್ಫೋಟಕ್ಕೆ ಛಿದ್ರ ಛಿದ್ರಗೊಂಡ ಮೂವರ ದೇಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ