Latest

ಬೆಡ್ ಸಿಗದೇ, ಆಂಬ್ಯುಲೆನ್ಸ್ ಸಿಗದೇ ರಸ್ತೆಯಲ್ಲೇ ಪ್ರಾಣ ಬಿಡುತ್ತಿದ್ದಾರೆ ಕೊರೊನಾ ಸೋಂಕಿತರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ನಡುವೆ ಒಂದೆಡೆ ಆಸ್ಪತ್ರೆಗೆ ದಾಖಲು ಮಾಡಲು ರೋಗಿಗಳಿಗೆ ಆಂಬುಲೆನ್ಸ್ ಗಳು ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ಸಿಕ್ಕರೂ ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗುತ್ತಿಲ್ಲ. ಇದರಿಂದ ಕೊರೊನಾ ಸೋಂಕಿತರು ಮನೆಯಲ್ಲಿ, ನಡು ರಸ್ತೆಗಳಲ್ಲಿ ಸಾವನ್ನಪ್ಪುತ್ತಿರುವ ಕರುಣಾಜನಕ ಘಟನೆಗಳು ನಡೆಯುತ್ತಿವೆ.

52 ವರ್ಷದ ಬೆಂಗಳೂರಿನ ಚೋಳರಪಾಳ್ಯದ ವ್ಯಕ್ತಿ ಆಸ್ಪತ್ರೆಗೆ ಅಲೆದಾಡಿದರೂ ಬೆಡ್ ಸಿಗದೇ ಕೊನೆಗೆ ಮನೆಯಲ್ಲೇ ನರಳಿ ಪ್ರಾಣಬಿಟ್ಟಿದ್ದಾರೆ. ಇನ್ನೋರ್ವ 53 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೇ ಆಂಬುಲೆನ್ಸ್ ನಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಹಾಗೂ ವೆಂಟಿಲೇಟರ್ ಗಳು ಸಿಗದೇ ಈ ದುಸ್ಥಿತಿ ಎದುರಾಗಿದೆ.

ಇನ್ನು ಬೆಂಗಳೂರಿನ ನಾಗರಬಾವಿಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ ಆಂಬುಲೆನ್ಸ್ ಸಿಗದೇ ಪರದಾಡಿದ್ದಾರೆ. ಕೊನೆಗೂ ಆಂಬುಲೆನ್ಸ್ ಸಿಕ್ಕರೂ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರಿಗೆ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ಪತ್ತೆಯಾಗಿತ್ತಾದರೂ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೇ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲಿ 5000ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಅದ್ಮಿಟ್ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಬಹುತೇಕ ಕೊವಿಡ್ ಹಾಗೂ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿದ್ದು ಚಿಕಿತ್ಸೆ ನೀಡುವುದೇ ಕಷ್ಟವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button