ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರಾತ್ರಿ ಹಾಗೂ ಇಂದು ಮುಂಜಾನೆಯಿಂದ ಸುರಿಯುತ್ತಿರುವ ವರ್ಷಧಾರೆಗೆ ಜನರು ತತ್ತರಿಸಿದ್ದಾರೆ. ಬಹುತೇಕ ಪ್ರದೇಶಗಳು, ರಸ್ತೆಗಳು ಜಲಾವೃತಗೊಂಡಿದ್ದು, ವಾಹನಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.
ಮನೆ ಹಾಗೂ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಬೆಳಕಿಗೆ ಬಂದಿವೆ. ಶಿವಾಜಿನಗರದ ಓಲ್ಡ್ ಮಾರ್ಕೆಟ್ ರಸೆಯ ಪ್ಯಾಲೆಸ್ ಮಹಲ್ ಬಳಿ ಹಲವು ಬೈಕ್ ಗಳು ನೀರುಪಾಲಾಗಿವೆ.
ಬನಶಂಕರಿಯ ಪ್ರಗತಿಪುರ ಬಡಾವಣೆಗೆ ಚರಂಡಿ ನೀರು ನುಗ್ಗಿ ಹಲವು ನಿವಾಸಿಗಳು ಪರದಾಡುತ್ತಿದ್ದಾರೆ. ಮನೆಗಳಿಂದ ನೀರು ಹೊರಹಾಕಲಾಗದೇ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಶೇಷಾದ್ರಿಪುರಂ ಮೆಟ್ರೋ ಸುರಂಗದ ತಡೆಗೋಡೆ ಕುಸಿದು 7 ಕಾರು, 2 ಬೈಕು ಜಕಂ ಗೊಂಡಿವೆ. ಕಾರಿನಲ್ಲಿ ಕುಳಿತಿದ್ದ ನಾಗಭೂಷಣ್, ಆನಂದ್ ಎಂಬುವವರು ಅಪಾಯದಿಂದ ಪಾರಾಗಿದ್ದಾರೆ. ಕಳಪೆ ಕಾಮಗಾರಿ, ಮೆಟ್ರೋ ಅಧಿಕಾರಿಗಳ ನಿರ್ಲಕ್ಷವೇ ಘಟನೆ ಕಾರಣವಾಗಿದೆ.
ಮಳೆಯಿಂದಾಗಿ ಶಾಂತಿನಗರ, ವಿಲ್ಸನ್ ಗಾರ್ಡನ್ ಸಂಪೂರ್ಣ ಜಲಾವೃತಗೊಂಡಿವೆ. ಆರ್ ಆರ್ ನಗರದ ಹಲವು ರಸ್ತೆಗಳು ನೀರಿನಲ್ಲಿ ಮುಳುಗಿವೆ. ರಾಜಧಾನಿಯಾದ್ಯಂತ ಭಾರಿ ಮಳೆಗೆ ಅವಾಂತರಗಳು ಸೃಷ್ಟಿಯಾಗಿವೆ. ಹವಾಮಾನ ಇಲಾಖೆ ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಅವ್ಯಾಹತ ಮಳೆಗೆ ಕುಸಿದ ಕೋಟೆ ಗೋಡೆ; ಕುಸಿತದ ಸಂಭವವಿದ್ದರೂ ನಿರ್ಲಕ್ಷ್ಯದ ಪರಿಣಾಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ