Kannada NewsLatestWorld

*ನೈಟ್ ಕ್ಲಬ್ ನಲ್ಲಿ ಭೀಕರ ಬೆಂಕಿ ದುರಂತ: 27 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ನೈಟ್ ಕ್ಲಬ್ ವೊಂದರಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ 27 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

Home add -Advt

ಥೈಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಅತ್ಯಂತ ಜನಪ್ರಿಯ ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯ ಉತ್ತರ ಭಾಗದಲ್ಲಿರುವ ‘ನಾ ಲಾಡ್‌ಪ್ರಾವ್’ ಪಬ್‌ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಭಾರಿ ಬೆಂಕಿ ಮತ್ತು ವಿಷಕಾರಿ ಹೊಗೆಯಿಂದಾಗಿ 27 ಜನರು ಮೃತಪಟ್ಟಿದ್ದಾರೆ.

ನೈಟ್‌ಕ್ಲಬ್‌ನ ಮುಖ್ಯ ಬಾಗಿಲಿನಿಂದ ರಕ್ಕಸ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಮುಗಿಲೆತ್ತರದವರೆಗೆ ವ್ಯಾಪಿಸಿತ್ತು ಪ್ರಾಣ ಉಳಿಸಿಕೊಳ್ಳಲು ಯುವಕ-ಯುವತಿಯರು ದಿಕ್ಕಾಪಾಲಾಗಿ ಓಡಿದ್ದಾರೆ. ಸಾಅಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಉಸಿರುಗಟ್ಟಿಸುವ ದಟ್ಟ ಹೊಗೆಯಿಂದ ಪಾರಾಗಲು ದಾರಿ ತಿಳಿಯದ ಗ್ರಾಹಕರು, ಪ್ರಾಣ ಉಳಿಸಿಕೊಳ್ಳಲು ಪಬ್‌ನ ಹಿಂಭಾಗದಲ್ಲಿದ್ದ ಶೌಚಾಲಯ ಮತ್ತು ಸ್ನಾನಗೃಹಗಳ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ, ದುರಂತವೆಂದರೆ ಆ ಕಿರಿದಾದ ಜಾಗಕ್ಕೂ ವಿಷಕಾರಿ ಹೊಗೆ ತಲುಪಿದ್ದರಿಂದ, ಬಹುತೇಕ ಬಲಿಪಶುಗಳು ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಥಾಯ್ ಪ್ರಧಾನಿ ಅನುಟಿನ್ ಚಾರ್ನ್‌ವಿರಕುಲ್ ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಕೇವಲ 30 ನಿಮಿಷಗಳಲ್ಲೇ ಬೆಂಕಿಯನ್ನು ನಿಯಂತ್ರಣಕ್ಕೆ ತಂದರಾದರೂ, ಅಷ್ಟರಲ್ಲೇ ಇಡೀ ಪಬ್ ಸುಟ್ಟು ಕರಕಲಾಗಿತ್ತು. ಪಬ್‌ನಲ್ಲಿ ಲೈವ್ ಮ್ಯೂಸಿಕ್ ಪ್ರದರ್ಶನ ನೀಡುತ್ತಿದ್ದ ಗಾಯಕನೊಬ್ಬ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ವೇದಿಕೆಯ ಪಕ್ಕದಲ್ಲಿದ್ದ ಮೇನ್ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಸಣ್ಣದಾಗಿ ಹೊಗೆ ಬರುತ್ತಿರುವುದು ಕಂಡುಬಂದಿದೆ. ಮರುಕ್ಷಣದಲ್ಲೇ ಇಡೀ ಪಬ್‌ನ ವಿದ್ಯುತ್ ಸಂಪರ್ಕ ಕಡಿತಗೊಂಡು ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಇಡೀ ಜಾಗ ಕಪ್ಪು ಹೊಗೆಯಿಂದ ತುಂಬಿಹೋಗಿತ್ತು ಎಂದು ಆತ ಹೇಳಿದ್ದಾನೆ.

Related Articles

Back to top button