ಪ್ರಗತಿವಾಹಿನಿ ಸುದ್ದಿ; ಹಾವೇರಿ: ಒಳಮೀಸಲಾತಿ ವಿರೋಧಿಸಿ ಬಂಜಾರಾ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಸಿಎಂ ತವರು ಕ್ಷೇತ್ರ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಭುಗಿಲೆದ್ದಿದೆ. ಒಳಮೀಸಲಾತಿ ಘೋಷಣೆ ವಿರೋಧಿಸಿ ಬಂಜಾರಾ ಸಮುದಾಯದ ಸ್ವಾಮೀಜಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಶಿಗ್ಗಾವಿ ತಾಲೂಕು ಕಚೇರಿ ಬಳಿ ಬಂಜಾರಾ ಸಮುದಾಯದವರ ಪ್ರತಿಭಟನೆ ತೀವ್ರಗೊಂಡಿದ್ದು, ಈ ವೇಳೆ ಗುಂಡೂರು ಗ್ರಾಮದ ತಿಪ್ಪೇಸ್ವಾಮಿ ಎನ್ನುವ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದವರು ಸ್ವಾಮೀಜಿಯನ್ನು ರಕ್ಷಿಸಿದ್ದಾರೆ.
ಶಿಗ್ಗಾಂವ ತಹಶೀಲ್ಧಾರ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ವೇಳೆ ನೇಣು ಹಾಕಿಕೊಂಡು ಆ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಅಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಾಕಿರುವ ಮೆಟ್ಟಿಲುಗಳನ್ನು ಏರಿ ಅಲ್ಲಿಂದಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಸ್ವಾಮೀಜಿ ಅವರು ಅಂಬೇಡ್ಕರ್ ಪ್ರತಿಮೆ ಬಳಿ ಹೋದವರೇ ತಮ್ಮ ಕಾವಿ ವಸ್ತ್ರವನ್ನು ಮೆಟ್ಟಿಲುಗಳು ಇರುವ ಕಬ್ಬಿಣದ ಸರಳಿಗೆ ಕಟ್ಟಿ, ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಹಾಕಿಕೊಳ್ಳಲು ಕುಣಿಕೆ ಮಾಡಿಕೊಂಡಿದ್ದಾರೆ. ನಂತರ ಮೆಟ್ಟಿಲಿನಿಂದ ಕೆಳಗೆ ಹಾರಿದ್ದಾರೆ. ಅವರು ಹಾರುವುದನ್ನು ನೋಡಿದ ಪ್ರತಿಭಟನಾ ನಿರತರು ಕೂಡಲೇ ಸ್ವಾಮೀಜಿಯನ್ನು ಹಿಡಿದುಕೊಂಡು ರಕ್ಷಣೆ ಮಾಡಿದ್ದಾರೆ.
ಘಟನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ತಿಪ್ಪೇಸ್ವಾಮಿ ಸ್ವಾಮೀಜಿಯನ್ನು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಶಿಗ್ಗಾಂವ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸ್ವಾಮಿಜಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿಯನ್ನು ತಪಾಸಣೆ ಮಾಡಿದ ವೈದ್ಯರು ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ಚದುರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ