ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಹರಿಹರ ಪಂಚಮಸಾಲಿ ಪೀಠಕ್ಕಾದರೂ ಕರೆದುಕೊಂಡು ಹೋಗಲಿ ಎಲ್ಲಿಗಾದರೂ ಕರೆದುಕೊಂಡು ಹೋಗಲಿ. ನಮಗೇನಾಗುವುದಿದೆ? ಅಲ್ಲಿ ಹೋದರೆ ಏನು ಕ್ರಾಂತಿಯಾಗುತ್ತಾ? ಅದು ಪೇಮೆಂಟ್ ಮಠ ಎಂದು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರು, ಹರಿಹರ ಪಂಚಮಸಾಲಿ ಪೀಠದ ಅಧ್ಯಯನ ಮುಗಿದಿದೆ. ಅದರ ಹಿಂದಿರುವ ಸಚಿವರ ಕಥೆಯೂ ಮುಗಿದಿದೆ ಎಂದು ಹೇಳುವ ಮೂಲಕ ವಚನಾನಂದ ಸ್ವಾಮೀಜಿ ಹಾಗೂ ಸಚಿವ ಮುರುಗೇಶ ನಿರಾಣಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
2023ರ ವಿಧಾನಸಭೆಯ ಚುನಾವಣೆಯಲ್ಲಿ ವಿಜಯಪುರದಿಂದ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಬಿಜೆಪಿ ಉಳಿವಿಗಾಗಿ ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದರೆ ಪಕ್ಷಕ್ಕೆ ಉಳಿಗಾಲ ಇಲ್ಲ ಎಂದು ಇಲ್ಲಿಯವರೆಗೆ ಬೊಮ್ಮಾಯಿ ಅವರಿಗೆ ಕೋಣೆಯಲ್ಲಿ ಹೇಳುತ್ತಿದ್ದೆ. ಈಗ ಬಹಿರಂಗವಾಗಿಯೇ ಹೇಳುತ್ತಿದ್ದೇನೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಹಿಂದುಳಿದ ಆಯೋಗದವರು ಏನು ಮಾಡಿದರು. ನಾವು ಕೇವಲ ಒಂದೇ ಸಮಾಜಕ್ಕೆ ಕೇಳಿಲ್ಲ. ಹಾಲುಮತ ಸಮುದಾಯವನ್ನು ಎಸ್ಟಿಗೆ ಸೇರಿಸಿ ಎಂದು ಹೇಳಿದ್ದೇವೆ. ಇಷ್ಟು ಹೇಳಿದರೂ ಎಲ್ಲ ಗೊಂದಲದಲ್ಲಿ ಇಟ್ಟಿದ್ದಾರೆ ಎಂದು ಹರಿಹಾಯ್ದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡದಿದ್ದಕ್ಕೆ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಎಷ್ಟು ಅಂತರದಿಂದ ಗೆಲವು ಸಾಧಿಸಿದೆ. ಬೆಳಗಾವಿ ವಿಧಾನ ಪರಿಷತ್, ಮಸ್ಕಿಯಲ್ಲಿ ಏನಾಯಿತು? ಬಿಜೆಪಿ 2023ರಕ್ಕೆ ಅಧಿಕಾರಕ್ಕೆ ಬರಬೇಕು 150 ಕ್ಷೇತ್ರ ಬರಬೇಕು ಎನ್ನುವ ಉದ್ದೇಶ ನನ್ನದು. ಆದರೆ ಕೆಲ ಬಿಜೆಪಿ ನಾಯಕರುಗಳು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಾನು ಸಚಿವನಾಗಬೇಕು. ನನ್ನ ಮಗ ಶಾಸಕನಾಗಬೇಕು ಎನ್ನುವ ಹೊಂದಾಣಿಕೆಯಲ್ಲಿ ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೆ. ಆದರೆ ನಾನು ಹಾಗೆ ಮಾಡುತ್ತಿಲ್ಲ ಎಂದು ತಿಳಿಸಿದರು.
ಕೋಟಿ ಕೋಟಿ ಹಣ ಮಾಡಿಕೊಂಡು ವಿದೇಶದಲ್ಲಿ ಹಣ ಹೂಡಿಕೆ ಮಾಡುವ ಮಾಜಿ ಮುಖ್ಯಮಂತ್ರಿಯೊಬ್ಬರು ನಾನು ರೈತರ ಮಗ. ರೈತರ ಏಳಿಗೆ ಮಾಡುವುದೇ ನನ್ನ ಗುರಿ ಎನ್ನುತ್ತಾರೆ. ಕೆಲ ಮಾಧ್ಯಮಗಳು ಅದನ್ನು ಬಿಟ್ಟು ಯುವರಾಜ. ಇವರಿಂದಲೇ ಕ್ರಾಂತಿ ಎಂದು ಬೊಗಳೆ ಬಿಡುತ್ತಿವೆ. ಮೊದಲು ಸತ್ಯಾಂಶ ಏನಿದೆ ಎನ್ನುವುದನ್ನು ಸುದ್ದಿ ಮಾಡಿ ಎಂದು ಸಲಹೆ ನೀಡಿದರು.
ಇದೇ ವೇಳೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡದಿರುವ ವಿಚಾರ ಕುರಿತು ಶಿಕಾರಿಪುರದವರ ಕೈವಾಡ ಇದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಶಿಕಾರಿಪುರದವರ ಬಳಿ 3 ಡಿ ಇವೆ. ಬೊಮ್ಮಾಯಿ ಅವರು ಅವರ ಬೆನ್ನು ಹತ್ತಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು.
*ಸಿಎಂ ಬೊಮ್ಮಾಯಿಗೆ 24 ಗಂಟೆ ಗಡುವು ನೀಡಿದ ಯತ್ನಾಳ್*
https://pragati.taskdun.com/panchamasali-reservationmla-yatnalwarningcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ