*ಬಸವಣ್ಣನವರ ಕುರಿತ ಕೃತಿ ಮುಟ್ಟುಗೋಲಿಗೆ ಆಗ್ರಹ*: *ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಈಶ್ವರ ಖಂಡ್ರೆ ಒತ್ತಾಯ*

ಪ್ರಗತಿವಾಹಿನಿ ಸುದ್ದಿ: ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಬರೆದಿರುವ ‘ಬಸವಮಂಟಪ’ ಕೃತಿ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕೃತಿಯಲ್ಲಿ ಬಸವಣ್ಣನವರು ಹಾಗೂ ಲಿಂಗಾಯತ ಸಮುದಾಯದ ಬಗ್ಗೆ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಬಿ. ಖಂಡ್ರೆ, ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿರುವ ಸಂಬಂಧಿತ ವಿಡಿಯೋಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಖಂಡ್ರೆ, ಸಚಿವನಾಗಿ ಒಂದು ಕೃತಿಯನ್ನು ಮುಟ್ಟುಗೋಲು ಹಾಕುವಂತೆ ಬಹಿರಂಗವಾಗಿ ಒತ್ತಾಯಿಸುವುದು ಸೂಕ್ತವಲ್ಲ ಎಂಬ ಅರಿವು ತನಗಿದೆ. ಆದರೆ, ಇಡೀ ಲಿಂಗಾಯತ ಸಮುದಾಯ ಮತ್ತು ಬಸವಣ್ಣನವರ ಅನುಯಾಯಿಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ. ಸಮಾಜದ ಸ್ವಾಸ್ಥ್ಯ ಕದಡುವ ಇಂತಹ ಕೃತಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಅವಹೇಳನ ಸಹಿಸಲಾಗದು
ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ನೀಡುತ್ತೇನೆ. ಆದರೆ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಎಂದು ಬಿಂಬಿಸುವುದು ಹಾಗೂ ಬಿಜ್ಜಳನ ಖಜಾನೆಯನ್ನು ದುರುಪಯೋಗಪಡಿಸಿಕೊಂಡು ಶರಣ ದಾಸೋಹ ಮಾಡಿದರು ಎಂಬಂತಹ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಂಡ್ರೆ ಹೇಳಿದ್ದಾರೆ.
ಹೀಗಾಗಿ ‘ಬಸವಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ರವಿ ಹಂಜ್ ಅವರ ಬಸವಣ್ಣನವರ ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಲಿಂಗಾಯತರ ಬಗ್ಗೆ ಹೇಳಿಕೆಗೂ ಆಕ್ಷೇಪ
ಲಿಂಗಾಯತರನ್ನು ‘ಲಿಂಗಾಹತರು’ ಎಂದು ಉಲ್ಲೇಖಿಸಿರುವುದು ಪ್ರಚೋದನಕಾರಿ ಹೇಳಿಕೆಯಾಗಿದೆ ಎಂದು ಖಂಡ್ರೆ ಆಕ್ಷೇಪಿಸಿದ್ದಾರೆ. ಈ ಹೇಳಿಕೆ ವಿಶ್ವದಾದ್ಯಂತ ಇರುವ ಬಸವಭಕ್ತರು ಮತ್ತು ಲಿಂಗಾಯತ ಸಮುದಾಯದವರಿಗೆ ತೀವ್ರ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಯಾವುದೇ ಸಂಶೋಧನೆ ನಡೆಸದೆ ಭಾವನಾತ್ಮಕ ವಿಚಾರಗಳ ಕುರಿತು ಸ್ವಯಂಘೋಷಿತ ಸಂಶೋಧಕರಂತೆ ಮಾತನಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.


