Kannada NewsKarnataka News

ಪ್ರಾತಃಸ್ಮರಣೀಯ ಲಿಂ. ಬಸವಪ್ರಭು ಕೋರೆ ಹಾಗೂ ಶಾರದಾದೇವಿ ಕೋರೆ

ಒಂದೇ ಹೆಸರಿನ ಅನೇಕ ಊರುಗಳು ಇದ್ದಾಗ ಆ ಊರುಗಳನ್ನು ಅಲ್ಲಿನ ಪ್ರಖ್ಯಾತ ಮನೆತನದ ಹೆಸರಿನೊಂದಿಗೆ ತಳಕುಹಾಕಿ ಗುರುತಿಸುವ ಪರಂಪರೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಎರಡು ಅಂಕಲಿಗಳು ಇವೆ. ಒಂದು ಸಂಕೇಶ್ವರದ ವಿಸ್ತರಣೆ ಎನಿಸಿರುವ ನಿಡಸೋಸಿ ಅಂಕಲಿ ಹಾಗೂ ಇನ್ನೊಂದು ಕೋರ‍್ಯಾಗೋಳ ಅಂಕಲಿ.

ಒಂದು ಊರನ್ನು ಒಂದು ಮನೆತನದ ಹೆಸರಿನಿಂದ ಗುರುತಿಸಲ್ಪಡಬೇಕಾದರೂ ಅದರ ಹಿಂದೆ ಆ ಮನೆತನದ ಸಾಮಾಜಿಕ ಕೊಡುಗೆಯ ಋಣಭಾರವಿರುತ್ತದೆ. ಆ ಮನೆತನದ ತ್ಯಾಗ, ಉಪಕಾರ ಹಾಗೂ ಸ್ಮರಣೆ ಅಡಗಿರುತ್ತದೆ. ಆದ್ದರಿಂದಲೇ ಇಂದಿಗೂ ಕೂಡ ಅಂಕಲಿ ’ಕೋರೆ ಅಂಕಲಿ’ ಎಂದೇ ಗುರುತಿಸಲ್ಪಡುತ್ತದೆ. ಇದರ ಹಿಂದೆ ಕೋರೆ ಮನೆತನದ ಬಸವಪ್ರಭು ಹಾಗೂ ಅವರ ಪತ್ನಿ ಶಾರದಾ ಇವರ ಪ್ರಗತಿಪರ ಚಿಂತನೆಗಳು, ಮಾನವೀಯ ನಡವಳಿಕೆಗಳು, ಜಾತ್ಯಾತೀತ ಭಾಷಾತೀತ ಎಲ್ಲರ ಜತೆಗೆ ಬೆರೆಯುತ್ತಿದ್ದ ರೀತಿ ನೀತಿಗಳೇ ಕಾರಣವಾಗಿದ್ದವು.

ಕರ್ನಾಟಕ ಮಹಾರಾಷ್ಟ್ರದ ಲಕ್ಷಾಂತರ ಜನರ ಮನೆದೇವರು ಯಡೂರು ವಿರುಪಾಕ್ಷಲಿಂಗ (ವೀರಭದ್ರ ದೇವರು). ವೀರಭದ್ರ ದೇವರನ್ನು ಲಿಂಗಸ್ವರೂಪದಲ್ಲಿ ಕಾಣಬಹುದಾದ ಏಕೈಕ ಪುಣ್ಯಕ್ಷೇತ್ರ. ದೂರ ದೂರದಿಂದ ಬರುತ್ತಿದ್ದ ಅನೇಕ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಗಳು ಬಂದರೆ ಅವರು ಬಸಪ್ರಭು ಕೋರೆಯವರ ಆತಿಥ್ಯ ಸ್ವೀಕರಿಸದೆ ಮಹಾತ್ಮ ಗಾಂಧೀಜಿ, ರಾಜೇಂದ್ರಪ್ರಸಾದ ಹಾಗೂ ಖ್ಯಾತ ವಿಜ್ಞಾನಿ ಡಾ.ಸಿ.ವ್ಹಿ.ರಾಮನ್ ಅವರೂ ಸಹಿತ ದಿ.ಕೋರೆಯವರ ಆತಿಥ್ಯ ಪಡೆದಿದ್ದರೆಂಬುದು ಅಚ್ಚರಿಯ ಸಂಗತಿಯೆನಿಸುತ್ತದೆ.

ಇಂದಿನ ಸಮಾಜ ಪ್ರಜ್ಞಾವಂತ ಸಮಾಜ. ಸುಮ್ಮನೆ ಯಾರನ್ನೂ ಒಪ್ಪಿಕೊಳ್ಳುವದಿಲ್ಲ. ಸುಮ್ಮನೆ ಯಾರನ್ನಾದರೂ ಸಾಹುಕಾರ ಎಂದು ಗೌರವದಿಂದ ಕಾಣಲು ಸಾಧ್ಯವಿಲ್ಲ. ಆದರೆ ಅಂಕಲಿ ಭಾಗದ ಸಂವೇದನಾಶೀಲ ಪ್ರದೇಶದ ಜನತೆ ಭಾಷೆ-ಜಾತಿ-ಧರ‍್ಮ ಎಲ್ಲ ಮರೆತು ಬಸಪ್ರಭು ಕೋರೆಯವರನ್ನು ಗೌರವದಿಂದ ಕಂಡರು. ಅವರ ಹೃದಯ ಶ್ರೀಮಂತಿಕೆ ಕಂಡು ’ಸಾಹುಕಾರ್’ ಎಂದು ಕರೆದರು.

ಅಂತೆಯೇ ಅವರು ನಮಗೆ ಪ್ರಾತಃಸ್ಮರಣೀಯರು. ಸಮಾಜ, ರಾಜಕಾರಣಗಳಿಗಿಂತ ಹೆಚ್ಚಾಗಿ ಸಮಾಜಕಾರಣಿಗಳನ್ನು ಗುರುತಿಸುತ್ತದೆ, ಗೌರವಿಸುತ್ತದೆ. ವೀರಶೈವ ಲಿಂಗಾಯತ ಸಮಾಜವನ್ನು ಕಟ್ಟಿದ ಲಿಂ.ಅರಟಾಳ ರುದ್ರಗೌಡರು, ಲಿಂ.ಗುರುಸಿದ್ದಪ್ಪ ಗಿಲಗಂಚಿ, ಲಿಂ.ಸಿರಸಂಗಿ ಲಿಂಗರಾಜರು, ಲಿಂ.ರಾಜಾ ಲಖಮಗೌಡರು, ಲಿಂ.ಭೂಮರಡ್ಡಿ ಬಸಪ್ಪನವರು ಹೀಗೆ ದೊಡ್ಡ ಪಟ್ಟಿಯನ್ನೇ ನೀಡಬಹುದು.

೩೦೦ ವರ್ಷಗಳ ಹಿಂದೆ ಇಂದಿನ ವಿಜಯಪುರ ಜಿಲ್ಲೆಯ ಸಿಂದಗಿ-ಇಚಿಡಿ ಪ್ರದೇಶದಲ್ಲಿ ಬರುವ ೩೦ ಹಳ್ಳಿಗಳ ದೇಸಾಯರಾಗಿದ್ದ ಕೋರೆ ಪೂರ್ವಜರು ಅಂಕಲಿಗೆ ವಲಸೆ ಬಂದು ನೆಲೆಕಂಡರು. ವ್ಯಾಪಾರ ವಹಿವಾಟುಗಳಿಂದ, ಕೃಷಿ ಕಾಯಕದಿಂದ, ತಮ್ಮ ನಡವಳಿಕೆಗಳಿಂದ ಜನಪ್ರೀತಿ ಗಳಿಸಿದ ಹೃದಯ ಸಂಪನ್ನರೆನಿಸಿದರು.

ಬಸವಪ್ರಭು ಅವರ ತಾಯಿ ಶಿವಬಾಯಿ, ತಂದೆ ಶಿವಲಿಂಗಪ್ಪ ಇವರಿಗೆ ಮೂರು ಜನ ಗಂಡುಮಕ್ಕಳು, ಐದು ಜನ ಹೆಣ್ಣುಮಕ್ಕಳು, ಇವರಲ್ಲಿ ಬಸಪ್ರಭು ೭ನೇ ಅವರು, ೧೮೯೨ರ ಸೆಪ್ಟೆಂಬರ್ ೧೪ ರಂದು ಜನಿಸಿದ ಇವರು ಕೃಷಿ, ಬೆಲ್ಲ ಹಾಗೂ ತಂಬಾಕು ವ್ಯಾಪಾರದ ಜೊತೆಗೆ ಪೆಟ್ರೋಲ್ ಬಂಕ್ ನಡೆಸುತ್ತಿದ್ದರು.

ಬಸವಪ್ರಭು ಅವರ ಪತ್ನಿ ಶಾರದಾದೇವಿ ರಾಯಬಾಗದ ರಾವಸಾಹೇಬ ಪಾಟೀಲ ಅವರ ಮನೆತನದ ಹೆಣ್ಣುಮಗಳು. ಆ ತಾಯಿಯ ಕಾಲ್ನುಗುಣದಿಂದಲೇ ಕೋರೆ ಮನೆತನ ಇಷ್ಟೊಂದು ಖ್ಯಾತಿ ಪಡೆಯಲು ಕಾರಣವಾಯಿತು. ಒಂದು ಸಲ ಬಸವಪ್ರಭು ಕೋರೆಯವರು ಜಮಖಂಡಿಗೆ ಹೋಗಿ ಬರುವಾಗ ಹಾರೂಗೇರಿ ಸಂತೆಗೆ ಹೋದರು.

ಆ ಸಂತೆಯಲ್ಲಿ ಓರ್ವ ಮಹಿಳೆ ಗೋಧಿ ಹಾಗೂ ಜೋಳ ಮಾರುತ್ತಿದ್ದಳು. ಅವರು ಅವುಗಳ ದರ ಕೇಳಿದರು. ಆಗ ಆ ಹೆಣ್ಣುಮಗಳು ಅವರಿಗೆ ’ನೀವೇನ್ ತಗೋಳವರಲ್ಲ, ಸುಮ್ಮನೆ ಕೇಳಿ ಹೋಗವರು’ ಎಂದಳಂತೆ. ಆಗ ಬಸಪ್ರಭುಗಳು ಲಿಂ.ಎಂ.ಬಿ.ವಾಲಿಯವರನ್ನು ಕರೆದು ಅವರ ಮೂಲಕ ಭಗವಂತಪ್ಪಾ ಸದಲಗಿಯವರಿಗೆ ಹಾರೂಗೇರಿ ಸಂತೆಯಲ್ಲಿ ಜೋಳ ಗೋಧಿ ಮಾರುತ್ತಿದ್ದ ಆ ಮಹಿಳೆಯ ಬಳಿ ಇದ್ದ ಎಲ್ಲ ಜೋಳ-ಗೋದಿ ಖರೀದಿಸಲು ಹೇಳಿದರಂತೆ.

ಇನ್ನೊಮ್ಮೆ ಬಸಪ್ರಭುಗಳು ನರಸೋಬವಾಡಿಗೆ ಹೋಗುವಾಗ ನದಿ ದಾಟುವ ಪ್ರಸಂಗ ಬಂದಿತು. ನದಿ ದಾಟಲು ಒಂದು ಆಣೆ ಭಾಡಿಗೆ ಕೊಡಬೇಕು. ಅಂಬಿಗನು ಬಸಪ್ರಭುಗಳಿಗೆ ಒಂದು ಆಣೆ ಕೊಡಲು ಹೇಳಿದನು. ಇವರು ಕಿಸೆಯಲ್ಲಿ ಕೈಹಾಕಿದರು. ಆಗ ಅಂಬಿಗರು ಅವರಿಗೆ ನಿಮ್ಮದು ಯಾವ ಊರು ಎಂದಾಗ ಇವರು ಅಂಕಲಿ ಎಂದು ಹೇಳಿದರು.

ಆಗ ಅಂಬಿಗನು ಸುತ್ತಲಿನ ೫೦ ಹಳ್ಳಿಗಳಿಗೆ ಹಣ ಬೀರುವ ಕೋರೆಯವರ ಊರವರಾದ ನೀವು ಹಣಕೊಡದೆ ನದಿ ದಾಟುವಿರಲ್ಲ ಎಂದು ಕೇಳಿದನು. ಆಗ ಬಸಪ್ರಭುಗಳ ಡ್ರೈವ್ಹರ್ ಆ ಅಂಬಿಗನಿಗೆ ಅವರೇ ಇವರು ಎಂದು ಹೇಳಿದಾಗ ಅವನಿಗೆ ಮಾತೇ ಹೊರಡಲಿಲ್ಲ. ಮುಂದೆ ಕೋರೆಯವರು ಆ ಅಂಬಿಗನನ್ನು ಕರೆಸಿ ೩೫೧/- ರೂ.ಗಳ ಆಹೇರ ಮಾಡಿ ಆತನನ್ನು ಸತ್ಕರಿಸಿ ಹೊಟ್ಟೆ ತುಂಬ ಊಟ ಹಾಕಿಸಿ ಗೌರವಿಸಿದರು.

ಪ್ರಗತಿಪರ ಚಿಂತಕರಾಗಿದ್ದ ಬಸಪ್ರಭುಗಳು ೧೯೪೬ರಲ್ಲಿ ವಿಠ್ಠಲ ಮಂದಿರದಲ್ಲಿ ಹರಿಜನರಿಗೆ ಪ್ರವೇಶ ಕೊಡಿಸಿದರು. ಎಲ್ಲ ಧರ‍್ಮ-ಜಾತಿಯವರಿಗೆ ಸಹಭೋಜನ ಏರ್ಪಡಿಸಿ ಸಮಸ್ತ ಜನತೆಯ ಪ್ರೀತಿ ಗಳಿಸಿದರು. ೧೯೩೩ ರಲ್ಲಿ ಮಹಾತ್ಮ ಗಾಂಧೀಜಿ ನಿಪ್ಪಾಣಿಗೆ ಬಂದಾಗ ಅಂಕಲಿಗೂ ಬಂದಿದ್ದರು. ಆಗ ಅವರ ಆತಿಥ್ಯವನ್ನು ನೋಡಿಕೊಂಡವರೇ ಬಸಪ್ರಭು ಕೋರೆ. ದಿ. ಬಸಪ್ರಭು ಕೋರೆಯವರು ಕಾರ್ ನಂಬರ್ ೧೩೦೮ ಆಗಿತ್ತು. ಅದನ್ನು ಅವರ ಊರ ಜನರ ಉಪಯೋಗಕ್ಕೆ ಅಂಬುಲನ್ಸ್ ರೀತಿ ಉಪಯೋಗಿಸಲು ಊರಿನ ಜನತೆಗೆ ನೀಡುತ್ತಿದ್ದರು. ಇದು ಅವರ ಮಾನವೀಯ ಸಂಬಂಧಗಳಿಗೆ ಸೊಗಸಾದ ಉದಾಹರಣೆ.

ಅವರು ತಮಗಾಗಿ ಬದುಕಲಿಲ್ಲ. ಇತರರಿಗಾಗಿ ಬದುಕಿದರು. ಅವರು ಅಂಕಲಿಯಲ್ಲಿ ಶಾಲೆ ಪ್ರಾರಂಭಿಸಿದರು, ಅಂಕಲಿ ಎಜ್ಯುಕೇಶನ್ ಸೊಸೈಟಿ ಪ್ರಾರಂಭಿಸಿ ಪ್ರೌಢಶಾಲೆ ಪ್ರಾರಂಭಿಸಿದರು. ಅವರು ಸಮಾಜಮುಖಿಯಾಗಿ ಬಾಳಿದರು. ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳು.

ಹಿರಿಯ ಪುತ್ರ ಲಿಂ.ಚಿದಾನಂದ ಕೋರೆ ನಣದಿ ಫ್ಯಾಕ್ಟರಿ ಅಂದರೆ ದೂಧಗಂಗಾ ಕೃಷ್ಣಾ ಸಹಕಾರಿ ಕಾರಖಾನೆ ಸಂಸ್ಥಾಪಿಸಿದರು. ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ‍್ಯಾಧ್ಯಕ್ಷರಾಗಿ, ಸಹಕಾರಿ ಹಾಗೂ ಶಿಕ್ಷಣ ರಂಗದಲ್ಲಿ ಪ್ರಸಿದ್ಧಿ ಗಳಿಸಿದರು.

ಹಾಗೆಯೇ ಕೊನೆಯವರಾದ ಡಾ.ಪ್ರಭಾಕರ ಕೋರೆಯವರು. ಇವರಂತೂ ಗಡಿಭಾಗದಲ್ಲಿ ಇತಿಹಾಸ ನಿರ‍್ಮಿಸಿದರು. ರಾಜ್ಯ ಸಭಾಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಅಖಂಡ ೩೫ ವರ್ಷಗಳ ಕಾಲ ಕೆಎಲ್‌ಇ ಸೊಸೈಟಿಯ ಚೇರಮನ್‌ರಾಗಿ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು.

ತಾತಿಯ ಮೇಲೆ ಅಪಾರ ಪ್ರೀತಿ, ಭಕ್ತಿ, ವಿಶ್ವಾಸದಿಂದ ನಡೆದುಕೊಂಡು ತಾಯಿಯ ಸಂಸ್ಕಾರವನ್ನು, ತಂದೆಯ ಆದರ್ಶಗಳನ್ನು ಅಂತರ್ಗತಗೊಳಿಸಿಕೊಂಡವರು.
ಬಸಪ್ರಭು ಕೋರೆಯವರ ಮುಖಂಡತ್ವದಲ್ಲಿ ಅಂಕಲಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ೧೦.೧.೧೯೫೬ರಂದು ಜರುಗಿದ ಅಂಕಲಿ ಭಾಗದಲ್ಲಿ ಕನ್ನಡ ಜಾಗೃತಿಯ ಬೀಜ ಮೊಳಕೆಯೊಡೆಯಿತು. ದಿ.ಎಸ್.ನಿಜಲಿಂಗಪ್ಪ, ಅಂಬಲಿ ಚನ್ನಬಸಪ್ಪನವರು, ಪಿ.ಎಚ್.ಗುಂಜಾಳ, ಹಳ್ಳಿಕೇರಿ ಗುದ್ಲೆಪ್ಪನವರು ಹಾಗೂ ನಾಡೋಜ ಡಾ.ಪಾಟೀಲ ಪುಟ್ಟಪ್ಪನವರು ಉಪಸ್ಥಿತರಿದ್ದ ಈ ಬೃಹತ್ ಸಮಾವೇಶದಲ್ಲಿ ೨೫೦೦೦ಕ್ಕೂ ಅಧಿಕ ಜನ ಪಾಲ್ಗೊಂಡಿದ್ದು ಈ ಭಾಗದ ಜನರ ಕನ್ನಡ ಅಭಿಮಾನಕ್ಕೆ ಸಾಕ್ಷಿಯಾಯಿತು.

ಅಂದು ನೆಟ್ಟ ಈ ಸ್ವಾಭಿಮಾನದ ಸಸಿ ಇಂದು ಹೆಮ್ಮರವಾಗಿ ಬೆಳೆದು ಸಂಪೂರ್ಣ ನಿಪ್ಪಾಣಿ-ಚಿಕ್ಕೋಡಿ ಭಾಗ ಮರಾಠಿ ಭಾಷೆಯ ಸಂಕೋಲೆಯಿಂದ ಬಿಡುಗಡೆಗೊಂಡು ಕನ್ನಡಮಯವಾಗಿ ಪರಿವರ್ತನೆಗೊಂಡಿದೆ.
ಹೀಗೆ ಕೋರೆ ಮನೆತನದ ಸಿದ್ಧಿ ಪ್ರಸಿದ್ಧಿಗಳಿಗೆ ಕಾರಣರಾಗಿದ್ದರಲ್ಲದೆ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ಕೋರೆ ಬಸಪ್ರಭುಗಳು ಭೂಗತ ಚಳವಳಿಗಾರರಿಗೆ ಅನ್ನ ಆಶ್ರಯ ನೀಡಿ ತಮ್ಮ ದೇಶಭಕ್ತಿ ಮೆರೆದರು.

ಹೀಗೆ ದಿ. ಬಸಪ್ರಭು ಕೋರೆಯವರು ಬದುಕಿನುದ್ದಕ್ಕೂ ಯುವಕರಿಗೆ ಆದರ್ಶಗಳ ಮೇಲ್ಪಂಕ್ತಿ ಹಾಕಿಕೊಟ್ಟರು. ಅವರು ದಾನಿಗಳಾಗಿ ದಾನಪಡೆದವರ, ನೆರವು ಪಡೆದವರ ಹೃದಯಗಳಲ್ಲಿ ಚಿರಂತನ ಸ್ಥಾನ ಪಡೆದು ೨೧.೧೨.೧೯೬೩ ರಂದು ನಿಧನರಾದರು.
ಶ್ರೀಮತಿ ಶಾರದಾದೇವಿ ಕೋರೆಯವರು ೧೬.೨.೨೦೦೨ ರಂದು ನಿಧನರಾದಾಗ ಕೋರೆ ಮನೆತನದ ಎರಡು ಹಿರಿಯ ಜೀವಗಳು ಕಣ್ಮರೆಯಾದವು. ದೈಹಿಕವಾಗಿ ಅಳಿದರೂ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಊರ ಜನರ ಮನಸ್ಸುಗಳಲ್ಲಿ ಇಂದಿಗೂ ಬದುಕಿದ್ದಾರೆ. ಅದೇ ಅವರ ಸಾರ್ಥಕತೆ.

-ಪ್ರಾ.ಬಿ.ಎಸ್.ಗವಿಮಠ, ಬೆಳಗಾವಿ

ಬಸವಪ್ರಭು ಹಾಗೂ ಶಾರದಾದೇವಿ ಕೋರೆ ಪುತ್ಥಳಿ ಅನಾವರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button