Kannada NewsKarnataka NewsLatest

ಲಿಂ. ಬಸವಪ್ರಭು ಕೋರೆ ಅವರ ಬದುಕು ನಿಜವಾದ ಧರ್ಮ-ಸಿದ್ಧೇಶ್ವರ ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಮಾಂಜರಿ  – ದೇವರು ಕೊಟ್ಟಿದ್ದನ್ನು ಸಮಾಜಕ್ಕೆ ನೀಡಿ, ಜನರ ರೂಪದಲ್ಲಿ ದೇವರನ್ನು ಕಂಡ ಪ್ರಾಮಾಣಿಕ, ನಿಸ್ವಾರ್ಥ ಸ್ವಚ್ಚ ಮನಸ್ಸಿನ ಬದುಕು ಕಟ್ಟಿಕೊಂಡು ದೇವರಿಗೆ ಸಮರ್ಪಿಸಿದ ಲಿಂ. ಬಸವಪ್ರಭು ಕೋರೆ ಅವರ ಬದುಕು ನಿಜವಾದ ಧರ್ಮ. ಬಸವಣ್ಣ ಹೇಳಿದಂತೆ ದೈವತ್ವ ತ್ಯಾಗ, ದಾನದ ಮೂರ್ತಿಗಳಾದ ಬಸವಪ್ರಭು ಕೋರೆ ದಂಪತಿಗಳು ನಿಜವಾದ ಮಹಾದಾನಿಗಳು ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ನುಡಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿಂದು ಲಿಂ. ಬಸವಪ್ರಭು ಕೋರೆ ಹಾಗೂ ಲಿಂ.ಶಾರದಾದೇವಿ ಕೋರೆ ಪ್ರತಿಮೆಗಳ ಅನಾವರಣ , ಕೆಎಲ್‌ಇ ಸಿಬಿಎಸ್‌ಸಿ ಶಾಲೆಗೆ ಬಸವಪ್ರಭು ಕೋರೆ ನಾಮಕರಣ, ಕೆಎಲ್‌ಇ ಸಂಸ್ಕೃತಿ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆ ಹಾಗೂ ಕೆಎಲ್‌ಇ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಭಾಗಪ್ಪ ಲಕ್ಷ್ಮಣ ಉಮರಾಣಿ ನಾಮಕರಣ ಸಮಾರಂಭದಲ್ಲಿ ಆಶಿರ್ವಚನ ನೀಡಿದರು.

ದೇವರೆಂದರೆ ಮಹಾದಾನಿಗಳು. ಮಹಾದಾನಿಯಾದರೆ ಕೂಡಲಸಂಗಮ ಎನ್ನವಂತೆ ಸಮಾಜದ ಉದ್ದಾರಕ್ಕೆ ಪ್ರತಿಫಲಾಪೇಕ್ಷೆ ಇಲ್ಲದೆ ದಾನ ಮಾಡಿ ಸಮಾಜದ ಕೆಳ ಹಂತದಿಂದ ಹಿಡಿದು ಎಲ್ಲರನ್ನೂ ಮೇಲಕ್ಕೆ ಎತ್ತಿ ಅವರ ಶ್ರೇಯೋಭಿವೃದಿಗಾಗಿ ಮನಮಿಡಿದು ದಾನ ಮಾಡುವವರೇ ಮಹಾದಾನಿಗಳು. ಅವರ ಸಾಲಿನಲ್ಲಿ ಲಿಂ. ಬಸವಪ್ರಭು ಹಾಗೂ ಶಾರದಾದೇವಿ ಕೋರೆ ಅವರು ಸೇರುತ್ತಾರೆ. ಅವರ ಮೂರ್ತಿಗಳು ಅವರನ್ನು ಸ್ಮರಿಸುತ್ತ ದೇವರನ್ನು ಕಾಣುವಂತಾಗಬೇಕು ಎಂದು ಆಶೀರ್ವದಿಸಿದರು.

ತಂದೆ ತಾಯಿ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಡಾ. ಪ್ರಭಾಕರ ಕೋರೆ ಅವರು ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಸದಾ ಕಂಕಣಬದ್ದರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಅವರ ಕಾರ‍್ಯ ಸದಾ ಹೀಗೇಯೇ ಮುಂದುವರೆಯಲಿ ಎಂದು ಶುಭ ಹಾರೈಸಿದ ಅವರು, ದೇವರು ಕೊಟ್ಟಿದ್ದೆಲ್ಲ ದೇವಾರ್ಪಣ ಎಂದು ಕಾರ‍್ಯ ಮಾಡಿದ ಬಸವಪ್ರಭು ಕೋರೆ ಅವರು ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಜನಾಂಗ, ದೇಶ ಭಾಷೆಯನ್ನು ಪ್ರೀತಿಸುವ ಸಂದೇಶಗಳನ್ನು ನೀಡುತ್ತಾರೆ. ಜೀವನದಲ್ಲಿ ಸದಾ ಒಳ್ಳೆಯ ಕಾರ‍್ಯಗಳನ್ನು ಮಾಡಬೇಕು. ಒಳ್ಳೆಯ ಮಾತು ಉನ್ನತ ಕೃತಿಗಳಾಗಿರಬೇಕು. ಆಕಾಶ, ಭೂಮಿ ಸಾಗರ ಸೃಷ್ಟಿಕರ್ತ ಹಾಗೂ ಮಹಾದಾನಿಗಳನ್ನು ನೆನೆಯುವದೇ ಧರ್ಮ ಎಂದು ಹೇಳಿದರು.

ಮಕ್ಕಳ ಸಂಬಳದ ಶೇ.೨೦ ತಂದೆ-ತಾಯಿಯ ಖಾತೆಗೆ

ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಕ್ಷೇತ್ರ ಶ್ರೀಶೈಲ-ಯಡೂರದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿ. ಬಸವಪ್ರಭು ಕೋರೆಯವರ ತ್ಯಾಗ, ಸಮಾಜಮುಖಿ ಕೆಲಸವನ್ನು ನಾವು ಎಂದಿಗೂ ಮರೆಯಬಾರದು. ಯಾರು ಪ್ರತಿನಿತ್ಯ ತಂದೆ-ತಾಯಿಯವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಾರೋ ಅವರಿಗೆ ಬೇರೆ ಯಾರಿಗೂ ನಮಸ್ಕರಿಸುವ ಪ್ರಸಂಗ ಬರುವದಿಲ್ಲ. ಇಂದು ಡಾ. ಪ್ರಭಾಕರ ಕೋರೆಯವರು ಸಂಸ್ಥೆಗೆ ಮಾಡಿದ ಉಪಕಾರವನ್ನು ನೆನೆಯುವುದರ ಜೋತೆಗೆ ತಂದೆ-ತಾಯಿಯರ ಉಪಕಾರ ತೀರಿಸಲೂ ದಾಪುಗಾಲೂ ಹಾಕಿದ್ದಾರೆ ಎಂದರು.

ಸಮಾಜದಲ್ಲಿ ವೃದ್ಧಾಶ್ರಮಗಳು ತಲೆ ಎತ್ತಿ ನಿಂತಿವೆ. ಸರ್ಕಾರವು ಸಹಿತ ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಬೇಕು. ಮಕ್ಕಳ ಸಂಬಳದ ಶೇ.೨೦ ತಂದೆ-ತಾಯಿಯ ಖಾತೆಗೆ ಜಮಾ ಮಾಡುವ ಕಾನೂನು ಜಾರಿಗೆ ತರಬೇಕಾಗಿದೆ. ಗುರು ಎಂದಿಗೂ ತನ್ನನ್ನೂ ಮೀರಿಸುವ ಶಿಷ್ಯನನ್ನು ಹೊಂದಲೂ ಆಶಿಸುತ್ತಾನೆ. ಅದೇ ರೀತಿ ತಂದೆ ಮಗ ತನಗಿಂತ ಹೆಚ್ಚಿನ ಸ್ಥಾನ ಗಳಿಸಬೇಕೆಂಬುದನ್ನು ಆಶಿಸುತ್ತಾನೆ. ಆ ನಿಟ್ಟಿನಲ್ಲಿ ಪ್ರಭಾಕರ ಕೋರೆಯವರು ತಂದೆಯ ಆಶಯವನ್ನು ತೀರಿಸಿದ್ದಾರೆ. ಕೆ.ಎಲ್.ಇ ಸಂಸ್ಥೆ ಇನ್ನಷ್ಟು ಅಂಗಸಂಸ್ಥೆಗಳನ್ನು ಹೊಂದುವಂತೆ ಸಂಸ್ಥೆಯು ಅವರ ನೇತೃತ್ವದಲ್ಲಿ ಬೆಳೆಯಲಿ ಎಂಬುದು ನಮ್ಮ ಆಶಯ ಶುಭಹಾರೈಸಿದರು.

ದೇಶಕ್ಕೆ ಪರಿಚಯಿಸಿದ್ದಾರೆ

ಸಮಾರಂಭದ ದಿವ್ಯಸಾನ್ನಿಧ್ಯವನ್ನು ಮೈಸೂರಿನ ಸುತ್ತೂರು ಮಠದ  ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ -ಮನುಷ್ಯನಿಗೆ ಜ್ಞಾನ ಮುಖ್ಯ. ತಾವು ಜ್ಞಾನದ ಮಹತ್ವ ಅರಿತು ಸಮಾಜಕ್ಕೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡು, ಅಂಕಲಿಯಂಥಹ ಸಣ್ಣ ಹಳ್ಳಿಯನ್ನು ಸಹಿತ ಜ್ಞಾನದ ಕೇಂದ್ರವನ್ನಾಗಿಸಿದ ಶ್ರೇಯಸ್ಸು ದಿ. ಬಸವಪ್ರಭು ಕೋರೆಯವರಿಗೆ ಸಲ್ಲುತ್ತದೆ. ದಿ. ಬಸವಪ್ರಭು ಕೋರೆಯವರು, ಡಾ. ಪ್ರಭಾಕರ ಕೋರೆಯವರು ತಮ್ಮ ಜನ್ಮಸ್ಥಳವಾದ ಅಂಕಲಿ ಗ್ರಾಮವನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ.

ಭಾರತೀಯ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಈ ಶಾಲಾ ಆವರಣದಲ್ಲಿ ’ಕೆಎಲ್‌ಇ ಸಂಸ್ಕೃತಿ’ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟಿಸಿರುವುದು ಅವಿಸ್ಮಣೀಯ. ಬಸವಪ್ರಭು ಕೋರೆಯವರು ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಷ್ಣುತೆ ತತ್ವವನ್ನು ಪಾಲಿಸಿ ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ಹೃದಯ ಶ್ರೀಮಂತಿಕೆ ಹೊಂದಿದ್ದರು ಎಂದು ನುಡಿದರು.

ಶಿಕ್ಷಣಶಿಲ್ಪಿ ಬಸವಪ್ರಭು ಕೋರೆ

ಸಮಾರಂಭದ ದಿವ್ಯಸಾನ್ನಿಧ್ಯವನ್ನು ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ತ್ರಿವಿಧದಾಸೋಹಿ ಶ್ರೀಮನ್ ನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು – ಇಂದು ನಾವು ಇತಿಹಾಸವನ್ನು ಮರೆಯದೇ ಮಹಾದಾನಿಗಳ ಸಮಾಜೋದ್ಧಾರ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಹೋಗುವುದೇ ದೊಡ್ಡ ಗುಣ.

ಡಾ. ಪ್ರಭಾಕರ ಕೋರೆಯವರು ಈ ಮಟ್ಟದಲ್ಲಿ ಸಾಧನೆಗೈಯಲು ಅವರ ತಂದೆ-ತಾಯಿಯ ಆಶಿರ್ವಾದವೇ ಕಾರಣ. ಬಸವಪ್ರಭು ಕೋರೆಯವರದು ವೀರಶೈವ ಧರ್ಮದ ಉದ್ಧಾರದ ಸಲುವಾಗಿ, ಏಳಿಗೆಗಾಗಿ ತಾವೇ ಸ್ವತಃ ಕಾರ್ಯಕ್ಕೆ ತೊಡಗಿದರಲ್ಲದೇ ಪುತ್ರರನ್ನು ಆ ನಿಟ್ಟಿನಲ್ಲಿ ಕಾರ್ಯನಿರತರನ್ನಾಗಿಸಿ ತನು, ಮನ, ಧನದಿಂದ ಸಹಾಯ ಸಲ್ಲಿಸಿ ವೀರಶೈವ ಮಹತಿಯನ್ನು ಹೆಚ್ಚಿಸಿದ್ದರು. ಗಡಿಭಾಗದಲ್ಲಿ ಶಿಕ್ಷಣವನ್ನು ಪಡೆಯುವುದು ದುಸ್ತರವಾಗಿದ್ದ ದಿನಗಳಲ್ಲಿ ಶಿಕ್ಷಣದ ಕನಸು ಕಂಡು ಅದು ಸಾಕಾರಗೊಳ್ಳುವಲ್ಲಿ ಪ್ರಯತ್ನಿಸಿದ ಶಿಕ್ಷಣಶಿಲ್ಪಿ ಬಸವಪ್ರಭು ಕೋರೆ ಎಂದರೆ ತಪ್ಪಾಗಲಾರದು ಎಂದರು.

ಸಹಪಂಕ್ತಿ ಭೋಜನ

ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಮೇಲು ಕೀಳು ಎಂಬ ಬೇಧ ಭಾವ ತಾಂಡವಾಡುತ್ತಿದ್ದ ಕಾಲದಲ್ಲಿ ಪುಟ್ಟ ಗ್ರಾಮವಾದ ಅಂಕಲಿಯಲ್ಲಿ ಬಸವಪ್ರಭು ಕೋರೆ ಅವರು ದಲಿತರೊಂದಿಗೆ ಸಹಪಂಕ್ತಿ ಭೋಜನ ಏರ್ಪಡಿಸಿ ಬಸವಣ್ಣನವರ ಆಶಯವನ್ನು ಎತ್ತಿಹಿಡಿದರು. ಮಹಾತ್ಮಾ ಗಾಂಧೀಜಿಯವರನ್ನು ಗ್ರಾಮಕ್ಕೆ ಕರೆ ತಂದು ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸುವಲ್ಲಿ ಪ್ರಯತ್ನಿಸಿದರು.

ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಬ್ರಿಟೀಷರಿಂದ ಬಂಧನಕ್ಕೊಳಗಾಗಿ ಜೈಲಿಗೆ ಹೋದಾಗ ಶಿಕ್ಷಣದ ಮೂಲಕವೇ ಸಮಾಜ ಉದ್ದಾರ ಎಂಬುದನ್ನು ಅರಿತು ಅಂಕಲಿಯ ವಿಠ್ಠಲ ದೇವರ ಗುಡಿಯಲ್ಲಿ ಶಾಲೆಯನ್ನು ಪ್ರಾಂಭಿಸುವದರ ಮೂಲಕ ಈ ಭಾಗದಲ್ಲಿ ಶಿಕ್ಷಣ ಪ್ರಸಾರಕ್ಕೆ ನಾಂದಿ ಹಾಡಿದರು. ಅಂದು ಕೇವಲ ೧೬ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು ೪ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ ಎಂದು ವಿವರಿಸಿದರು.

ಧರ್ಮಗುರುಗಳ ಆಶೀರ್ವಾದದಿಂದ ಬಸವಪ್ರಭು ಕೋರೆ ಅವರು ಅಂಕಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಇನ್ನಷ್ಟು ಅಭಿವೃದ್ದಿಗಾಗಿ ೧೯೯೨-೯೩ರಲ್ಲಿ ಕೆಎಲ್‌ಇ ಸಂಸ್ಥೆಯೊಳಗೆ ವಿಲೀನ ಮಾಡಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಇಂದು ಸುಮಾರು ೪ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಕೆಜಿಯಿಂದ ಹಿಡಿದು ಪದವಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಅದಕ್ಕೆಲ್ಲ ಮಹಾದಾನಿಗಳ ಕೊಡುಗೆ ಕಾರಣ ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಕೌಜಲಗಿ, ನಿರ್ದೇಶಕರು ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಅಡ್ವೋಕೇಟ ಜನರಲ್ ಪ್ರಭುಲಿಂಗ ಕೆ ನಾವದಗಿ ಹಾಗೂ ಮಹಾದೇವ ಬಾಗಪ್ಪ ಉಮರಾಣಿ ಅವರನ್ನು ಸತ್ಕರಿಸಲಾಯಿತು. ವೇದಿಕೆ ಮೇಲೆ ಆಶಾತಾಯಿ ಕೋರೆ ಅವರು ಉಪಸ್ಥಿತರಿದ್ದರು.
ಚಿಂಚಣಿ ಸಿದ್ಧಸಂಸ್ಥಾನಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಚಿಕ್ಕೋಡಿ ಸಂಪಾದನಾ ಚರಮೂರ್ತಿಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಸಂಪಾದನಾ ಮಹಾಸ್ವಾಮಿಗಳು ಸಹ ದಿವ್ಯ ಸಾನಿಧ್ಯ ವಹಿಸಿದ್ದರು.

ಚಿಕ್ಕೋಡಿಯ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯ ಚೇರಮನ್ ಅಮೀತ ಕೋರೆ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button