EducationKannada NewsKarnataka NewsLatestPolitics

*NEP ರದ್ದು ಮಾಡಿದರೆ ಜನಾಂದೋಲನವಾಗಲಿದೆ: ಮಾಜಿ ಸಿಎಂ ಬೊಮ್ಮಾಯಿ ಎಚ್ಚರಿಕೆ*

ಎನ್ ಇಪಿ ಅಂದರೆ ನಾಗಪುರ್ ಶಿಕ್ಷಣ ನೀತಿ ಅಂತಾರೆ, ಎಸ್ ಇಪಿ ಅಂದರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿನಾ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಮುಂದಾದರೆ ಜನಾಂದೋಲನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಜೇಶನ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿಗಾಗಿ ಶಿಕ್ಷಣ ತಜ್ಞರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸರ್ಕಾರ ಎನ್ ಇಪಿ ವಿರೋಧ ಮಾಡುತ್ತಿರುವುದರಲ್ಲಿ ಆಶ್ಚರ್ಯ ಇಲ್ಲ. ಅವರು ವಿರೋಧಕ್ಕಾಗಿ ವಿರೋಧ ಮಾಡಿದ್ದಾರೆ. ಅಷ್ಟೊಂದು ವಿಸಿಗಳನ್ನು ಕೂಡಿಸಿಕೊಂಡು ಯಾವುದೇ ಚರ್ಚೆ ಮಾಡದೇ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಕುಲಪತಿಗಳು ಪ್ರಶ್ನೆ ಮಾಡದೇ ಸುಮ್ಮನೇ ಎದ್ದು ಬಂದಿರುವುದು ದುರಂತ.


ಶಿಕ್ಷಣ ಅಂದರೆ ಸ್ವಂತ ಚಿಂತನೆ, ಸರಿ ತಪ್ಪು ಅಲ್ಲ, ನಿಮಗೆ ಏನು ಅನಿಸಿದೆ. ಅದನ್ನು ಹೇಳಿದ್ದೀರಿ. ಅದನ್ನು ಕೇಳುವ ಮನಸ್ಥಿತಿ ಈ ಸರ್ಕಾರಕ್ಕೆ ಇಲ್ಲ. ಅಂದರೆ ದೇಶಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅವಶ್ಯಕತೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಇಲ್ಲ. ನಾವು ಯಾಕೆ ಈ ನೀತಿ ಜಾರಿಗೆ ತಂದಿದ್ದೇವೆ ಅಂತ ಪ್ರಶ್ನೆ ಮಾಡಿ, ಈ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಏಕಾಏಕಿ ಬಂದಿದ್ದಲ್ಲ. ಸ್ವಾತಂತ್ರ್ಯ ಬಂದಾಗ ಕೇವಲ 15% ಶಿಕ್ಷಣ ಪಡೆದವರು ಇದ್ದರು. ಅದನ್ನು 130 ಕೋಟಿ ಜನರಿಗೆ ತಲುಪಿಸುವ ಕೆಲಸ ಮಾಡುವುದು ಸಣ್ಣ ವಿಷಯವೇನಲ್ಲ ಎಂದರು.

ಶಿಕ್ಷಣ ವ್ಯವಸ್ಥೆಯನ್ನು ಕೇವಲ ಕರ್ನಾಟಕಕ್ಕೆ ಸೀಮಿತ ಮಾಡಬೇಕಾ ? ಪ್ರಗತಿಪರರು ಎಂದು ಹೇಳಿ ರಾಜ್ಯವನ್ನು ಹಿಂದೆ ಕಳಿಸುವ ಕೆಲಸ ಮಾಡುತ್ತಿದ್ದೀರಿ, ನಿಮಗೆ ಜನರು ಅಭಿವೃದ್ಧಿ ಮಾಡಲು ಅಧಿಕಾರ ಕೊಟ್ಟಿದ್ದಾರೆ. ರಾಜ್ಯವನ್ನು ಹಿಂದೆ ಕಳುಹಿಸಲು ಅಲ್ಲ. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ‌. ಈ ದೇಶದಲ್ಲಿ ದೊಡ್ಡವರು ತಪ್ಪು ಮಾಡಿದಾಗ ಜನರು ದೊಡ್ಡ ಹೋರಾಟಗಳ ಮೂಲಕ ಬದಲಾವಣೆ ತಂದಿದ್ದಾರೆ. ನೀವು ಅಧಿಕಾರ ಸಿಕ್ಕಿದೆ ಅಂತ ಈ ರೀತಿ ಮಾಡಿದರೆ ಜನ ಪಾಠ ಕಲಿಸುತ್ತಾರೆ ಎಂದರು.

ಸರ್ಕಾರ ಕೇವಲ ತಮಗೆ ಮತ ಹಾಕಿದವರನ್ನು ಮಾತ್ರ ನೋಡದಬಾರದು, ಮಕ್ಕಳು, ವಿದ್ಯಾರ್ಥಿಗಳು, ಪ್ರಾಣಿಗಳು, ಸಸ್ಯ ಶಾಮಲೆ ಎಲ್ಲವನ್ನು ನೋಡಬೇಕು. ನೀವು ಬಿಜೆಪಿಯನ್ನು ವಿರೋಧಿಸಿ, ಅದನ್ನು ಬಿಟ್ಡು ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆ ಕೊಡುತ್ತೀರಿ, ಸಿದ್ದರಾಮಯ್ಯ ಒನ್ ಮತ್ತು ಸಿದ್ದರಾಮಯ್ಯ ಟು ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಅವರು ವಿಚಾರ ಮಾಡುವ ಶಕ್ತಿ ಕಳೆದುಕೊಂಡಿದ್ದಾರೊ, ಅಥವಾ ಸುತ್ತಲು ಇರುವವರು ಅವರ ದಾರಿ ತಪ್ಪಿಸುತ್ತಿದ್ದಾರೊ ಗೊತ್ತಿಲ್ಲ. ಶಿಕ್ಷಣ ಎಲ್ಲರಿಗೂ ಏಕ ರೂಪದಲ್ಲಿ ಸಿಗಬೇಕು. ಸಿಬಿಎಸ್ ಸಿ ಕೇವಲ ಉಳ್ಳವರ ಪಾಲಾಗಿವೆ. ಎಷ್ಟೊ ತಾಲೂಕುಗಳಲ್ಲಿ ವಿಜ್ಞಾನ ಕಾಲೇಜುಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅದಕ್ಕೆ ಅವಕಾಶ ಇದೆ. ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣ ಅವಕಾಶ ದೊರೆಯುತ್ತದೆ. ನಾವು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ತಂದಿದ್ದೇವೆ. ಇದರಿಂದ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಿದೆ. ಈಗಿರುವ ಶಿಕ್ಷಣ ಪದ್ದತಿಯಲ್ಲಿ ಅಕೌಂಟೆಬಿಲಿಟಿ ಇಲ್ಲ. ಎಂಟನೇ ತರಗತಿಗೆ ಶೇ 60% ರಷ್ಟು ಇದ್ದ ವಿದ್ಯಾರ್ಥಿಗಳ ಸಂಖ್ಯೆ ಪಿಜಿಗೆ ಕೇವಲ ಶೇ 5% ರಷ್ಟು ಮಾತ್ರ ಇರುತ್ತಾರೆ ಎಂದರು.

ನಾನು ಎನ್ ಇಪಿಯನ್ನು ಸುಲಭವಾಗಿ ಒಪ್ಪಿಕೊಂಡಿಲ್ಲ. ಇದು ಕೇವಲ ಶ್ರೀಮತರಿಗೆ ಮಾತ್ರ ಇದಿಯಾ, ಸಿಟಿಯವರಿಗೆ ಮಾತ್ರ ಇದಿಯಾ ಎನ್ನುವುದನ್ನು ಮನಗಂಡು ಈ ನೀತಿ ಒಪ್ಪಿಕೊಂಡಿದ್ದೇನೆ.


ಎಸ್ ಇಪಿ ಅಂದರೆ ಸೋನಿಯಾಗಾಂಧಿ ಶಿಕ್ಷಣ ನೀತಿ:
ಈ ಶಿಕ್ಷಣ ನೀತಿ ಸರಿ ಇಲ್ಲ ಅಂತ ಹೇಳುತ್ತಿದ್ದಾರೆ, ಎನ್ ಇಪಿ ರದ್ದು ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ ಮಾಡುತ್ತಾರೆ. ಎನ್ ಇಪಿ ರದ್ದು ಮಾಡುವುದಾದರೆ, ಪರಮೇಶ್ವರ್ , ಎಂ.ಬಿ ಪಾಟೀಲ್ ಒಪ್ಪುತ್ತಾರಾ ? ಎನ್ ಇಪಿ ಅಂದರೆ ನಾಗಪುರ್ ಶಿಕ್ಷಣ ನೀತಿ ಅಂತಾರೆ, ಎಸ್ ಇಪಿ ಅಂದರೆ ಸೋನಿಯಾಗಾಂಧಿ ಎಜುಕೇಶನ್ ಪಾಲಿಸಿನಾ ಸೋನಿಯಾ ಗಾಂಧಿ ಅಂದರೆ ಇಟಲಿ. ಇಟಲಿ ಅಂದರೆ ಯುರೋಪ್ ಎಜುಕೇಶನ್ ಅಂದರೆ ಮೆಕಾಲೆ ಶಿಕ್ಷಣ ನೀತಿ ಜಾರಿಗೆ ತರುತ್ತೀರಾ ಎಂದು ಪ್ರಶ್ನಿಸಿದರು.

ನಿಮ್ಮ ಕೈಯಲ್ಲಿ ಅಧಿಕಾರ ಇದೆ ಅಂತ ಬದಲಾವಣೆ ಮಾಡುವ ಪ್ರಯತ್ನ ಮಾಡಬಹುದು. ಆದರೆ, ಇದರ ವಿರುದ್ದ ಜನಾಂದೋಲ ನಡೆಯಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಇದರ ಅರಿವಾದರೆ, ದೊಡ್ಡ ಹೋರಾಟ ಮಾಡುತ್ತಾರೆ.

ಶಿಕ್ಷಣವನ್ನು ರಾಜಕೀಯದಿಂದ ಹೊರಗಿಡಿ:
ಸಿದ್ದರಾಮಯ್ಯ ಅವರು ಗಾಂಧಿ ಕುಟುಂಬ ಜಪ ಮಾಡಿವುದನ್ನು ಬಿಟ್ಟು ಲೋಹಿಯಾ, ಜೆಪಿ ಅವರನ್ನು ನೆನೆಯಬೇಕು. ಈಗ ಮಾಡುತ್ತೀರುವ ತಪ್ಪು ಮುಂದಿನ ದಿನಗಳಲ್ಲಿ ದೊಡ್ಡ ತಪ್ಪಿಗೆ ಕಾರಣವಾಗುತ್ತದೆ. ನೀವು ಒಬ್ಬ ರಾಜಾಕರಾಣಿಯಾಗಿ ಶಿಕ್ಷಣವನ್ನು ರಾಜಕಾರಣ ಮಾಡಬೇಡಿ, ಶಿಕ್ಷಣವನ್ನು ರಾಜಕೀಯದಿಂದ ಹೊರಗಿಡಿ. ಜೀವನದಲ್ಲಿ ಮೂರು ಇ ಬಹಳ ಮುಖ್ಯ, ಎಜುಕೇಶನ್, ಎಂಪ್ಲಾಯ್ ಮೆಂಟ್, ಎಂಪಾವರ್ ಮೆಂಟ್, ನೀವು ಚುನಾವಣೆ ರಾಜಕಾರಣಕ್ಕಾಗಿ ಎನ್ ಇ ಪಿ ವಿರೋಧಿಸದೇ ಮುತ್ಸದ್ದಿಯಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಎನ್ ಇಪಿ ಕೇವಲ ಪಾಲಿಸಿಯಲ್ಲಿ ಭಾರತದ ಎಪ್ಪತೈದು ವರ್ಷದ ಸಂಶೋಧನೆ. ಇದರಿಂದ ಭಾರತದ ಭವಿಷ್ಯ ಬರೆಯುತ್ತಿದ್ದೇವೆ. ನೀವು ನಿಮ್ಮ ಪೆನ್ನಿನಿಂದ ಭವಿಷ್ಯ ಬರೆಯಿರಿ. ಇಲ್ಲದಿದ್ದರೆ ನಿಮ್ಮಿಂದ ಶಿಕ್ಷಣ ಹಾಳಾಯಿತು ಎಂದು ಬರೆಯುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳು, ಮಾಜಿ ಶಿಕ್ಷಣ ಸಚಿವರಾದ ಡಾ. ಸಿ.ಎನ್ ಅಶ್ವಥ್ ನಾರಾಯಣ, ಎನ್. ಮಹೇಶ್ ಅಭಿಪ್ರಾಯ ಮಂಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button