Kannada NewsKarnataka NewsLatestPolitics

*ಸದನಕ್ಕೆ ಪೌರಕಾರ್ಮಿಕರ ಕರೆಯಿಸಿದ್ದಕ್ಕೆ ಸ್ಪೀಕರ್ ಗೆ ಬೊಮ್ಮಾಯಿ ಅಭಿನಂದನೆ*

ಕಲಾಪ ವೀಕ್ಷಿಸಿದ ಪೌರ ಕಾರ್ಮಿಕರು, ಮಂಗಳಮುಖಿಯರು

ಪ್ರಗತಿವಾಹಿನಿ ಸುದ್ದಿ: ಪೌರ ಕಾರ್ಮಿಕರಿಗೆ ವಿಧಾನಸಭೆ ಕಲಾಪ ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು.


ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಸದನಕ್ಕೆ ಮಂಗಳಮುಖಿಯರು, ಪೌರ ಕಾರ್ಮಿಕರನ್ನು ಆಹ್ವಾನಿಸಿ, ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದೀರಿ, ಅವರ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಕಂಡು ಕೊಳ್ಳಲು ಚರ್ಚೆಗೆ ಅವಕಾಶ ಕಲ್ಪಿಸಿದ್ದೀರಿ. ನಗರದ ಕಸ ತೆಗೆದು ಹಾಕುವುದು ಎಷ್ಡು ಕಷ್ಟ ಅನ್ನುವುದು ಅವರ ಸ್ಥಾನದಲ್ಲಿ ಇದ್ದುಯೋಚನೆ ಮಾಡಿದಾಗ ಗೊತ್ತಾಗುತ್ತದೆ ಎಂದರು.


ನಾನು ಮುಖ್ಯಮಂತ್ರಿ ಆಗಿದ್ದಾಗ 11 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಿದೆ. ಅದರ ಪ್ರಕ್ರಿಯೆ ಈಗ ಮುಂದುವರೆದಿದೆ. ಆದರೆ, ಅದು ವೇಗವಾಗಿ ಆಗಬೇಕು. ಇಲ್ಲದಿದ್ದರೆ ಅವರನ್ನು ವಿಧಾನಸೌಧಕ್ಕೆ ಕರೆಯಿಸಿ ಕೂಡಿಸುವುದರಲ್ಲಿ ಅರ್ಥವಿಲ್ಲ. ಇನ್ನೂ 34 ಸಾವಿರ ಜನರ ಕಾಯಂ ಮಾಡಬೇಕಿದೆ. ನಾವು ಅಧಿಕಾರದಲ್ಲಿದ್ದಾಗ ಕಟ್ಟ ಕಡೆಯ ವ್ಯಕ್ತಿಗೆ ಅವಕಾಶ ಕಲ್ಪಿಸುವ ಕೆಲಸ ಮಾಡಬೇಕು. ಆ ಸೂಕ್ಷ್ಮತೆ ನಮಗೆ ಇರಬೇಕು ಎಂದರು.


ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಾವು ಮಾತನಾಡುತ್ತೇವೆ. ಈ ಸದನದಲ್ಲಿ ಬಂದು ಯಾರು ಮಾತನಾಡಲು ಆಗುವುದಿಲ್ಲವೋ ಮಕ್ಕಳು, ಪ್ರಾಣಿಗಳು ಅವರ ಬಗ್ಗೆ ನಾವು ಕಾಳಜಿಯಿಂದ‌ ಕೆಲಸ ಮಾಡಿ ನಿರ್ಣಯ ಮಾಡಿದರೆ ಈ ಸದನಕ್ಕೆ ಗೌರವ ಬರುತ್ತದೆ.


ಯಾವುದೇ ಕಸುಬಿಗೆ ಗೌರವ ಕೊಡುವುದು ಮುಖ್ಯ. ವ್ಯಕ್ತಿಗೆ ಗೌರವ ಕೊಡುವುದು ಮುಖ್ಯವಲ್ಲ. ವೃತ್ತಿ ಗೌರವ ಕೊಡಬೇಕು ಎಂದರು. ಅಲ್ಲದೇ ಪೌರ ಕಾರ್ಮಿಕ ಅನ್ನುವ ಪದ ಬದಲಿಸಿ ಪೌರ ನೌಕರರು ಎಂದು ಕರೆಯಬೇಕು ಎಂದು ಸಲಹೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button