Kannada NewsKarnataka NewsLatestPolitics

*ಇದು ಸುಳ್ಳ ಮಳ್ಳರ ಸರ್ಕಾರ: ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸಿಎಂಗೆ ಧಮ್ಮಿದ್ದರೆ, ತಾಕತ್ತಿದ್ದರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಿಸಿ. ಕೆಂದ್ರದ 5 ಪ್ಲಸ್ 10 ಕೆಜಿ ಸೇರಿ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.

ಬಿಜೆಪಿ ವತಿಯಿಂದ ಇಂದು ನಗರದ ಆನಂದ ರಾವ್ ವೃತ್ತದ ಬಳಿ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಂದು ಕುಟುಂಬದಲ್ಲಿ 5 ಜನರಿದ್ದರೆ 75 ಕೆಜಿ ಕೊಡಬೇಕು. ಅದನ್ನು ಮಾಡದೆ ಪ್ರತಿಭಟಿಸುತ್ತೀರಾ? ನಿಮಗೆ ಅಧಿಕಾರ ಕೊಟ್ಟದ್ದು ಪ್ರತಿಭಟನೆ ಮಾಡಲೆಂದೇ? ಎಂದು ಪ್ರಶ್ನಿಸಿದರು. ಇದೊಂದು ಸುಳ್ಳ- ಮಳ್ಳ ಸರಕಾರ. ಸುಳ್ಳು ಹೇಳುವುದು ಮತ್ತು ಮೋಸ ಮಾಡುವ ಸರಕಾರವಿದು ಎಂದು ಟೀಕಿಸಿದರು.
ನಿಮಗೆ ನಾಚಿಕೆ ಇಲ್ಲವೇ? ಜವಾಬ್ದಾರಿ ಇಲ್ಲವೇ? ಎಂದು ಕೇಳಿದರಲ್ಲದೆ, ಇದೊಂದು ಬೇಜವಾಬ್ದಾರಿ ಸರಕಾರ ಎಂದು ಆರೋಪಿಸಿದರು.
ರಾಜ್ಯ ಸರಕಾರ ಕರೆಂಟ್ ಶಾಕ್ ಕೊಡುತ್ತಿದೆ. ಇವತ್ತು ಇವರು ಕೊಟ್ಟ ಬಿಲ್ಲನ್ನು ಬಡವರು, ಕೈಗಾರಿಕೆದಾರರು ಸೇರಿ ಯಾರಿಗೂ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.


ನಿಮ್ಮ ಸರಕಾರವೇ ವಿದ್ಯುತ್ ದರ ಏರಿಸಿದೆ. ದುಪ್ಪಟ್ಟು ಏರಿಕೆ ಆಗಿದೆ. ಮನಸ್ಸು ಮಾಡಿದರೆ ಅದನ್ನು ಏರಿಸದೆ ಇರಬಹುದಿತ್ತು. ಯಾಕೆ ಸ್ವಾಮೀ ಬಡವರ ಬಗ್ಗೆ ಮಾತನಾಡಿ ಅಧಿಕಾರ ಪಡೆದ ನೀವು ಬಡವರಿಗೆ ಮೋಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಮುಂದೆ ಬಸ್‍ಗಳು ನಿಂತು ಹೋಗಲಿವೆ. ಶಾಲಾ ಮಕ್ಕಳಿಗೆ ಬಸ್ಸಿಲ್ಲದೆ ಮುಷ್ಕರ ಮಾಡುತ್ತಿದ್ದಾರೆ ಎಂದು ಗಮನ ಸೆಳೆದರು.
ಒಂದೆಡೆ ಬಸ್ಸುಗಳು ನಿಲ್ಲುತ್ತಿವೆ. ಇನ್ನೊಂದೆಡೆ ವಿದ್ಯುತ್ ಶಾಕ್‍ನಿಂದ ಕೈಗಾರಿಕೆಗಳು ನಿಲ್ಲಲಿವೆ. ಕುಡಿಯುವ ನೀರೂ ಸಿಗುತ್ತಿಲ್ಲ. ಕೇವಲ ಒಂದೂವರೆ ತಿಂಗಳಲ್ಲಿ ರಾಜ್ಯದ ಪ್ರಗತಿ ಹಳಿ ತಪ್ಪಿದೆ. ಕೆಲಸಗಳ ಹಣ ಪಾವತಿ ಆಗುತ್ತಿಲ್ಲ. ಕಾಂಗ್ರೆಸ್ ಕಮಿಷನ್ ನಿಗದಿಪಡಿಸಲು ಸಚಿವರು ಮುಂದಾಗಿದ್ದಾರೆ. ಅಧಿಕಾರಿಗಳನ್ನು ಕರೆದು ಮಂತ್ಲಿ ಫಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ದಂಧೆ ಶುರುವಾಗಿದೆ. ಇದೊಂದು ಜನವಿರೋಧಿ, ಬಡವರ ವಿರೋಧಿ, ರೈತರ ವಿರೋಧಿ ಸರಕಾರ ಎಂದು ಟೀಕಿಸಿದರು. ನಮ್ಮನ್ನು ಬಂಧಿಸುವ ಮೂಲಕ ಪೊಲೀಸ್ ರಾಜ್ಯ ಪ್ರಾರಂಭ ಆಗಿದ್ದನ್ನು ಸಾಬೀತು ಮಾಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ದಮನಕಾರಿ ನೀತಿ ಎಂದು ತಿಳಿಸಿದರು.

ನಿಮ್ಮ ಪೊಲೀಸ್ ರಾಜ್ಯಕ್ಕೆ ಹೆದರುವುದಿಲ್ಲ. ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ, ನಮ್ಮ ರಟ್ಟೆಯಲ್ಲಿ ಶಕ್ತಿ ಇದೆಯೋ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು. ನಮ್ಮ ಹೋರಾಟ ವಿಧಾನಸಭೆ ಒಳಗೆ ಮತ್ತು ಹೊರಗೆ ಮುಂದುವರೆಯುತ್ತದೆ ಎಂದು ನುಡಿದರು.
‘ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಇವರ ಕೈಯಲ್ಲಿ ಒಂದು ಕೆಜಿ ಅಕ್ಕಿ ಕೊಡಲು ಸಾಧ್ಯವಾಗಿಲ್ಲ. 5 ಕೆಜಿ ಕೊಡುವುದು ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಅಕ್ಕಿ’ ಎಂದು ವಿವರಿಸಿದರು. ಬಡವರಿಗೆ ಈಗ ಕೇಂದ್ರ ಸರಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. 10 ಕೆಜಿ ಅಕ್ಕಿಯನ್ನು ಗರೀಬ್ ಕಲ್ಯಾಣ್ ಯೋಜನೆಯಡಿ ಸುಮಾರು 2 ವರ್ಷ ಕೊಟ್ಟಿದ್ದಾರೆ. ಈ ಸುಳ್ಳು ಕಾಂಗ್ರೆಸ್ಸಿನಿಂದ ನಾವು ಪಾಠ ಕಲಿಯಬೇಕಿಲ್ಲ. ಕೋವಿಡ್, ಅಕ್ಕಿ ವಿತರಣೆ, ಪ್ರವಾಹ ಬಂದಾಗ ಕೇಂದ್ರವು ನೆರವಿಗೆ ಧಾವಿಸಿದೆ ಎಂದು ವಿವರಿಸಿದರು.

ಆಪತ್ತು ಬಂದಾಗ ಆಪತ್ ಬಾಂಧವನಾಗಿ ನರೇಂದ್ರ ಮೋದಿಯವರು ಬಂದಿದ್ದರು. ಜನರು ನಿಮ್ಮ ಸುಳ್ಳು ಭರವಸೆ, ಸುಳ್ಳು ಗ್ಯಾರಂಟಿಗಳ ಜೊತೆ ಸುಳ್ಳು ನೆಪವನ್ನು ಗಮನಿಸಿದ್ದಾರೆ. ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಎಂದಿದ್ದರು. ತಾತ್ವಿಕ ಒಪ್ಪಿಗೆ, ನಂತರ ಜುಲೈ 1ರಿಂದ ಎಂದು ಸುಳ್ಳು ಹೇಳಿದ್ದಾರೆ. ಆಗಲೂ ತಯಾರಿ ಮಾಡಲೇ ಇಲ್ಲ. ಈಗ ಕೇಂದ್ರ ಅಕ್ಕಿ ಕೊಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದೀರಿ. ಕೇಂದ್ರ ತನ್ನ ಪಾಲನ್ನು ಕೊಟ್ಟಿದೆ ಎಂದು ತಿಳಿಸಿದರು.

ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಸರಕಾರದ ಚಿತಾವಣೆಯಿಂದ ನಮ್ಮನ್ನು ಬಂಧಿಸಿದ್ದಾರೆ. ಇದು ಅಕ್ಷಮ್ಯ ಎಂದು ಟೀಕಿಸಿದರು. 10 ಕೆಜಿ ಅಕ್ಕಿ ಸುಳ್ಳು. ಮೋದಿಜಿ ಅವರ ಅಕ್ಕಿ ಮಾತ್ರ ಗ್ಯಾರಂಟಿ ಎಂದು ನುಡಿದರು.

ಅಕ್ಕಿ ವಿಚಾರದಲ್ಲಿ ಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಗ್ಯಾರಂಟಿಗಳನ್ನು ಕಂಡಿಷನ್ ಮೇಲೆ ಜಾರಿ ಮಾಡುತ್ತಿದ್ದಾರೆ. ಕಾಂಗ್ರೆಸ್‍ನದು ಮಾತು ತಪ್ಪಿದ, ಮೋಸ ಮಾಡುವ ಸರಕಾರ. ವಂಚನೆಯ ಸರಕಾರ ಎಂದು ಆರೋಪಿಸಿದರು. ಅಕ್ಕಿ ಕೊಡುವುದನ್ನು ಮುಂದೂಡಲು ಮೋದಿಯವರ ಹೆಸರನ್ನು ತರುತ್ತಿದ್ದಾರೆ ಎಂದು ವಿವರಿಸಿದರು.

ನೀವು ಪ್ರತಿಭಟನೆಗೆ ಬರ್ತಾ ಇದ್ದೀರಂದ್ರೆ ನೀವು ಕೆಲಸ ಮಾಡಲು ನಾಲಾಯಕ್. ಕೆಲಸಕ್ಕೆ ಬಾರದವರು ಎಂದು ಟೀಕಿಸಿದರು. ಸಚಿವರು ಮಾಡೋ ಕೆಲಸ ಬಿಟ್ಟು ಬೇರೆಲ್ಲ ಮಾಡ್ತಾರೆ ಎಂದು ಅವರದೇ ಪಕ್ಷದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ ಎಂದು ನೆನಪಿಸಿದರು.
ವಿದ್ಯುತ್ ದರ ಏರಿಕೆಯನ್ನು ಖಂಡಿಸಿದರು. ಬಸ್ಸುಗಳಲ್ಲಿ ಮುಂದೊಂದು ದಿನ ಟೈರ್‍ಗಳೂ ಇರುವುದಿಲ್ಲ ಎಂದು ತಿಳಿಸಿದರು. ಮೋದಿಯವರು 80 ಕೋಟಿ ಜನರಿಗೆ ಪಡಿತರ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಶಾಸಕರಾದ ಮುನಿರಾಜು, ಎಂ.ಕೃಷ್ಣಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎನ್ ರವಿಕುಮಾರ್, ವಿಧಾನ ಪರಿಷತ್ತಿನ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷರಾದ ಮಂಜುನಾಥ್, ನಾರಾಯಣಗೌಡ ಮತ್ತಿತರ ಪ್ರಮುಖರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button