ಪ್ರಗತಿವಾಹಿನಿ ಸುದ್ದಿ; ಹಾವೇರಿ: ಕಾಂಗ್ರೆಸ್ ಮೊದಲಿನಿಂದಲೂ ಒಳ ಮೀಸಲಾತಿ ವಿರೋಧಿಯಾಗಿದೆ. ನಾವು ಸಂವಿಧಾನಕ್ಕೆ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ನಮಗೆ ಬದ್ದತೆ ಇದೆ. ಕಾಂಗ್ರೆಸ್ ನವರಿಂದ ಪಾಠ ಕಲಿಯಬೇಕಿಲ್ಲ. ಒಳ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನವರ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಅವಕಾಶ ವಿಚಾರದಲ್ಲಿ ಕಾಂಗ್ರೆಸ್ ಸದಾ ಗೊಂದಲ ಸೃಷ್ಟಿಸುತ್ತ ಬಂದಿದೆ. ಹಿಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿ ಕೈಬಿಟ್ಟರು, ಒಳಮೀಸಲಾತಿ ಪರ ಬಂದವರಿಗೆ ಜಾರಿ ಮಾಡುತ್ತೇವೆ ಎನ್ನುವುದು, ಅದನ್ನು ವಿರೋಧಿಸುವವರು ಬಂದಾಗ ಜಾರಿ ಮಾಡುವುದಿಲ್ಲ ಎನ್ನುವುದು ಎಲ್ಲವೂ ಬಹಿರಂಗವಾಗಿದೆ. ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಪ್ರಸ್ತುತ ಒಳ ಮೀಸಲಾತಿಗೆ ಅವಕಾಶ ಇಲ್ಲ ಅಂತ ಹೇಳಿದ್ದಾರೆ. ನಾವೂ ಕೂಡ ಸಂವಿಧಾನದ ಆರ್ಟಿಕಲ್ 140 ಗೆ ಕ್ಲಸ್ 2 ಹಾಕಿ ತಿದ್ದುಪಡಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ.
ಈ ಪ್ರಕರಣ ಕೋರ್ಟ್ ನಲ್ಲಿದೆ. ಆದರೆ, ನಮಗೆ ಬದ್ದತೆ ಇದೆ. ಅದಕ್ಕಾಗಿಯೇ ಸಂವಿಧಾನ ತಿದ್ದುಪಡಿಗೆ ಶಿಫಾರಸ್ಸು ಮಾಡಿದ್ದೇವೆ. ಮೊದಲಿನಿಂದಲೂ ಒಳ ಮೀಲಸಾತಿ ವಿರೋಧಿಸುತ್ತಿರುವ ಕಾಂಗ್ರೆಸ್ ನ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಹೆಣ್ಣುಮಕ್ಕಳ ವಿಚಾರದಲ್ಲಿ ಹಗುರವಾಗಿ ಮಾತನಾಡುವುದು ಸಲ್ಲ:
ಹೆಣ್ಣು ಮಕ್ಕಳ ಗೌರವದ ವಿಚಾರದಲ್ಲಿ ಕಾಂಗ್ರೆಸ್ ಇಷ್ಟು ಹಗುರವಾಗಿ ಮಾತನಾಡುದಕ್ಕೆ ನಾಚಿಕೆಯಾಗಬೇಕು. ಹೆಣ್ಣು ಮಕ್ಕಳ ಗೌರವ ಹೋದರೆ ಅದು ದೊಡ್ಡ ವಿಚಾರ ಅಲ್ಲ ಅಂತ ಮಾತನಾಡುತ್ತಾರೆ. ಪ್ರಕರಣದ ತನಿಖೆಗೆ ಮುಂಚೆನೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪೋಲೀಸರು ಈ ಪ್ರಕರಣ ಮುಚ್ಚಿ ಹಾಕುತ್ತಾರೆ. ವಿಡಿಯೋ ರೆಕಾರ್ಡ್ ಮಾಡಿಲ್ಲ ಅಂದರೆ ವಿದ್ಯಾರ್ಥಿನಿಯರನ್ನು ಮ್ಯಾನೇಜ್ಮೆಂಟ್ ಯಾಕೆ ಸಸ್ಪೆಂಡ್ ಮಾಡಿದರು? ತಪ್ಪೊಪ್ಪಿಗೆ ಯಾಕೆ ಬರೆಸಿಕೊಂಡರು? ಕಾಲೇಜಿನಲ್ಲಿ ಮುಗಿದು ಹೋದ ಪ್ರಕರಣ ಅಲ್ಲ, ಇದು ಮುಚ್ಚಿಹೋದ ಪ್ರಕರಣ ಎಂದು ಹೇಳಿದರು.
ತುಲನೆ ಸರಿಯಲ್ಲ:
ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣವೇ ಬೇರೆ ಕನ್ನಡ ಸಂಘಟನೆಗಳ ಪ್ರಕರಣವೇ ಬೇರೆ. ಸರ್ಕಾರ ಡಿಜೆ ಹಳ್ಳಿ ಕೆಜಿ ಹಳ್ಳಿಗೆ ಮತ್ತು ಕನ್ನಡ ಪರ ಸಂಘಟನೆಗೆ ತುಲನೆ ಮಾಡಲು ಹೊರಟಿದೆ ಠಾಣೆಗಳಿಗೆ ಕಲ್ಲು ಹೊಡೆದು ಬೆಂಕಿ ಹಚ್ಚಿದವರನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ಸರ್ಕಾರ ಧಂಗೆಕೋರರನ್ನು ರಕ್ಷಣೆ ಮಾಡುತ್ತಿದೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣವನ್ನು ಸುಲಭವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಪರಿಹಾರ ನೀಡಬೇಕು
ಕೆಲ ದಿನಗಳ ಹಿಂದೆ ಬಿತ್ತನೆ ಮಾಡಲು ನೀರಿಲ್ಲದೇ ರೈತರಿಗೆ ಹಾನಿ ಆಗಿತ್ತು. ಈಗ ಮಳೆ ಅತಿ ಹೆಚ್ಚಾಗಿ ಬಹಳ ತೊಂದರೆ ಆಗಿದೆ. ಉತ್ತರ ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಸಾಕಷ್ಟು ಹಾನಿಯಾಗಿದೆ. ಮಳೆ ಬಿದ್ದು ನಷ್ಟ ಆಗಿದೆ. ಬ್ಯಾಡಗಿ ತಾಲೂಕಿನಲ್ಲಿ ಚಾವಣಿ ಬಿದ್ದು ವ್ಯಕ್ತಿಯ ಸಾವಾಗಿದೆ. ಕೂಡಲೇ ಮಳೆ ನೀರು ಮನೆಗಳಿಗೆ ಹೋಗಿ ನಷ್ಟ ಆದವರಿಗೆ ತುರ್ತು ಪರಿಹಾರ ಕೊಡಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಕೊಡುತ್ತಿದ್ದ ಮಾನದಂಡದ ಮೇಲೆ ಮನೆಗಳಿಗೆ 3 ಲಕ್ಷ , 5 ಲಕ್ಷ ಪರಿಹಾರ ಕೊಡಬೇಕು. ಬೆಳೆ ಹಾನಿಗೆ ಪ್ರತಿ ಹೆಕ್ಟರ್ ಗೆ ಒಣ ಬೇಸಾಯಕ್ಕೆ ಕನಿಷ್ಟ 13000 ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಪ್ರವಾಹದ ಭೀತಿಯಲ್ಲಿರುವ ಜನರನ್ನು ತಕ್ಷಣ ಸ್ಥಳಾಂತರ ಮಾಡಬೇಕು. ಆದರೆ ಕಾಂಗ್ರೆಸ್ ನವರು ಬೇರೆ ಬೇರೆ ಗದ್ದಲದಲ್ಲಿ ಇದ್ದಾರೆ. ಮಳೆಯಿಂದಾಗಿ ರಾಜ್ಯದಲ್ಲಿ 40 ಕ್ಕೂ ಹೆಚ್ಚು ಸಾವಾಗಿದೆ. ಸಚಿವರು ಧಾವಿಸಿ ಕೆಲಸ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕಷ್ಟದಲ್ಲಿರುವ ರೈತರಿಗೆ ನೈತಿಕ ಧೈರ್ಯ ಹೇಳಲಿ. ಇವರಿನ್ನೂ ಸಿಎಲ್ ಪಿ ಮೀಟಿಂಗ್ ಗೊಂದಲ, ಸಂಪುಟದ ಗೊಂದಲದಲ್ಲಿ ಇದ್ದಾರೆ. ಇಡೀ ಸರ್ಕಾರವೇ ಗೊಂದಲ್ಲಿದೆ ಎಂದರು.
ನಮ್ಮ ಯೋಜನೆ ನಿಲ್ಲಿಸದಿದ್ದರೆ ಅಭಿವೃದ್ಧಿ
ಮೊನ್ನೆ ಸಿಎಂ ಹಾವೇರಿಗೆ ಬಂದಾಗ ಕೆಲವು ಸೂಚ್ಯಂಕದಲ್ಲಿ ಹಾವೇರಿ ಹಿಂದಿದೆ ಎಂದಿದ್ದಾರೆ. ಕಳೆದ 5 ವರ್ಷದ ವರದಿ ಈಗ ಬಂದಿರುತ್ತದೆ. ಅದಕ್ಕಾಗಿ ನಾನು ಸಿಎಂ ಇದ್ದಾಗ ಆರೋಗ್ಯ ಶಿಕ್ಷಣಕ್ಕೆ ದಾಖಲೆಯ ಹಣ ಕೊಟ್ಟಿದ್ದೇನೆ. ತಾಲೂಕು ಮಟ್ಟದ ಆಸ್ಪತ್ರೆ ಅಪ್ ಗ್ರೇಡ್ ಮಾಡಿಸಿದ್ದೇನೆ. ನೀವು ಹಿಂದೆ ಸಿಎಂ ಆಗಿದ್ದವರು. 2013 ರಲ್ಲಿ ಮೆಡಿಕಲ್ ಕಾಲೇಜು ಗದಗಿಗೆ ಸ್ಥಳಾಂತರ ಮಾಡಿದ್ದಿರಿ. ಇಲ್ಲಿ ಮೆಡಿಕಲ್ ಕಾಲೇಜು ಕೊಡಲಿಕ್ಕೆ ನಾವೇ ಬರಬೇಕಾಯಿತು. ಯಡಿಯೂರಪ್ಪ ಅವರು ಮೆಡಿಕಲ್ ಕಾಲೇಜಿಗೆ ಅನುಮೋದನೆ ಕೊಟ್ಟರು. ಸಿದ್ದರಾಮಯ್ಯ ಅವರ ಕಾಲದಲ್ಲಿ ಮೆಡಿಕಲ್ ಕಾಲೇಜಿಗೆ ಒಂದು ನಯಾ ಪೈಸಾ ಕೊಡಲಿಲ್ಲ. ಲಿಫ್ಟ್ ಇರಿಗೇಶನ್ ಮಂಜುರಾತಿ ಆಗಿರಲಿಲ್ಲ. ನಾವೇ ಇವುಗಳನ್ನು ಪೂರ್ಣಗೊಳಿಸಿದೆವು.
ರಾಣೆಬೆನ್ನೂರಿನಲ್ಲಿ ಮೆಗಾ ಮಾರ್ಕೇಟ್ ಆರಂಭ ಮಾಡಿದ್ದು ನಮ್ಮ ಸರ್ಕಾರ ಹಾವೇರಿಗೆ ಪ್ರತ್ಯೇಕ ಹಾಲು ಒಕ್ಕೂಟ ಪ್ರತ್ಯೇಕ ಆಗಬೇಕು ಅಂತ ಹೋರಾಟ ಮಾಡಿದ್ದೆವು ನಾವು ಅಧಿಕಾರಕ್ಕೆ ಬಂದ ಬಳಿಕ ಪ್ರತ್ಯೇಕ ಹಾಲು ಒಕ್ಕೂಟ ಮಾಡಿದೆವು. ಮೆಗಾ ಡೈರಿಗೆ 70 ಕೋಟಿ ಕೊಟ್ಟೆವು. ಏನೆಲ್ಲಾ ಬೇಕು ಅದನ್ನ ಮಾಡಿದ್ದೇನೆ. ನಾವು ಮಾಡಿರೋದನ್ನ ಯಾವುದೇ ಯೋಜನೆಗಳನ್ನು ನಿಲ್ಲಿಸದಿದ್ದರೆ ಎಲ್ಲಾ ಸೂಚ್ಯಂಕಲ್ಲೂ ಹಾವೇರಿ ಅಭಿವೃದ್ಧಿ ಆಗಲಿದೆ ಎಂದರು.
ಮೆಡಿಕಲ್ ಕಾಲೇಜು ನಿರ್ಮಾಣ ಪ್ರಕರಣ ಎಸ್ ಐ ಟಿ ಗೆ ಕೊಡುತ್ತೇವೆ ಅಂದರೆ ದಯವಿಟ್ಟು ಕೊಡಲಿ. ಏನಾದರೂ ದೋಷ ಕಂಡು ಬಂದರೆ ಕೊಡಲಿ ತಪ್ಪಿಲ್ಲ. ಈ ಕಾಮಗಾರಿ ಮುಂದುವರೆಸಿ ಎಂದು ವೈದ್ಯಕೀಯ ಶಿಕ್ಷಣ ಮಂತ್ರಿಗಳು ಎಸ್ಟಿಮೇಟ್ ಅಪ್ರೂವಲ್ ಕೊಟ್ಟು ಮುಂದುವರೆಸಿ ಅಂದಿದ್ದಾರೆ. ಎಸ್ ಐ ಟಿ ಗೆ ಕೊಡಲಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಹೇಳಿದರು.
ಸಮನ್ವಯತೆ ಇಲ್ಲ
ಈ ಸರ್ಕಾರದಲ್ಲಿ ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯತೆ ಇಲ್ಲ. ಸಿಎಂ ಶಾಸಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಮಗೆ ತಿಳಿದ ಮಾಹಿತಿ ಮೊದಲನೇ ದಿನದಿಂದಲೂ ಕಾಂಗ್ರೆಸ್ ಸಿಎಂ ಮಾಡೋದ್ರಿದ ಹಿಡಿದು ಎಲ್ಲಾದರಲ್ಲೂ ಗೊಂದಲದಲ್ಲಿದೆ
ಶಾಸಕರು ಮತ್ತು ಮಂತ್ರಿಗಳ ನಡುವೆ ಸಮನ್ವಯ ಇರಲಿಲ್ಲ. ಮೀಟಿಂಗ್ ಕರೆದಿರೋದೇ ಈ ಕಾರಣಕ್ಕೆ. ಇಲ್ಲದಿದ್ದರೆ ಹೈಕಮಾಂಡ್ ಬುಲಾವ್ ಯಾಕೆ ಬರ್ತಿತ್ತು? ಸಿಎಂ ಸಮಾಧಾನ ಮಾಡಿದರೂ ಶಾಸಕರು ಸಮಾಧಾನ ಆಗುತ್ತಿಲ್ಲ. ಹಿರಿಯ ಶಾಸಕರಿಗೇ ಈ ಪರಿಸ್ಥಿತಿ ಇದೆ, ಇನ್ನು ಹೊಸ ಶಾಸಕರ ಗತಿ ಏನು? ಒಟ್ಟಾರೆ ಈ ಸರ್ಕಾರ ಪ್ರಾರಂಭದಿಂದಲೂ ಗೊಂದಲದಲ್ಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ