Kannada NewsKarnataka NewsLatestPolitics

*ಸ್ವಾತಂತ್ರ್ಯ ನಂತರ ರಾಜ್ಯಗಳಿಗೆ ಕಾಂಗ್ರೆಸ್ ಅವಧಿಯಲ್ಲಾದ ಅನ್ಯಾಯ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಸ್ವಾತಂತ್ರ್ಯ ಬಂದಾಗಿನಿಂದ 55 ವರ್ಷ ದೇಶ ಆಳಿರುವ ಕಾಂಗ್ರೆಸ್ ಅವಧಿಯಲ್ಲಿ ರಾಜ್ಯಗಳಿಗೆ ಕೇವಲ ಶೇ 20 ರಷ್ಟು ಮಾತ್ರ ಅನುದಾನ ಬರುತ್ತಿತ್ತು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಗಳಿಗೆ ಶೇ 42% ರಷ್ಟು ಅನುದಾನ ಬರುತ್ತಿದೆ. ಕಾಂಗ್ರೆಸ್ ನವರು ಕೇಂದ್ರದ ವಿರುದ್ದ ಅನಗತ್ಯ ಆರೋಪ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.


ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮಂಡಿಸಿರುವ ನಿರ್ಣಯದ ವಿರುದ್ಧ ಇಂದು ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ನಿರ್ಣಯ ಮಂಡಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ನಿರ್ಣಯ ಮಂಡಿಸಿ ವಿಧಾನಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಿ ಸುಳ್ಳು ಹೇಳುವ ದಾಷ್ಟ್ಯ ತೋರಿದೆ. ಕೇಂದ್ರದಿಂದ ಅನ್ಯಾಯವಾಗಿದೆ ಅಂತ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.


ರಾಜ್ಯದ ತೆರಿಗೆ ಕಾಂಗ್ರೆಸ್ ಆಡಳಿತದಲ್ಲಿ 20% ರಷ್ಟು ಮಾತ್ರ ಇತ್ತು. ಆಗ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ದಕ್ಷಿಣ ಭಾರತದ ಅನೇಕ ನಾಯಕರು ಸೇರಿ ರಾಜ್ಯಗಳ ತೆರಿಗೆ ಹೆಚ್ಚಳ ಮಾಡುವಂತೆ ಹೋರಾಟ ಮಾಡಲಾಯಿತು. ಆದರೆ, ಯುಪಿಎ ಅವಧಿಯಲ್ಲಿ ರಾಜ್ಯಗಳ ತೆರಿಗೆ ಅನುದಾನ ಹೆಚ್ಚಳ ಮಾಡಲು ನಿರಾಕರಿಸಿದ್ದರು‌. ನರೇಂದ್ರ ಮೋದಿಯವರು ಬಂದು ಕೆಲವೇ ವರ್ಷದಲ್ಲಿ ರಾಜ್ಯಗಳ ತೆರಿಗೆ ಪಾಲನ್ನು ಶೇ 32% ರಿಂದ‌ ಶೇ 42% ಕ್ಕೆ ಹೆಚ್ಚಳ‌ಮಾಡಿದ್ದಾರೆ ಎಂದು ವಿವರಿಸಿದರು.


ಕೇಂದ್ರದಿಂದ ರಾಜ್ಯಕ್ಕೆ ಕೇವಲ ಜಿಎಸ್ ಟಿ ಪರಿಹಾರ, ಅನುದಾನ ಅಷ್ಟೇ ಅಲ್ಲದೇ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬರಲಿದೆ ಅಲ್ಲದೇ, ಫಲಾನುಭವಿಗಳ ಅಕೌಂಟ್ ಗೆ ನೇರವಾಗಿ ಹಣ ಹಾಕುತ್ತದೆ. ರಾಜ್ಯ ಸರ್ಕಾರ ಅದೆಲ್ಲವನ್ನು ಮುಚ್ಚಿಟ್ಟು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸುಳ್ಳು ಹೇಳುತ್ತಿದೆ. ಬೆಂಗಳೂರಿನ ಫೆರಿಪೆರಲ್ ರಿಂಗ್ ರೊಡ್ ಗೆ ಕೇಂದ್ರದಿಂದ ಈಗಲೂ ಹಣ ಬರುತ್ತದೆ. ಆದರೆ, ರಾಜ್ಯ ಸರ್ಕಾರ ಯೋಜನೆ‌ ಆರಂಭಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ಸುಮಾರು 13 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರ ನೀಡಿದೆ. ರೈಲ್ವೆ ಯೋಜನೆಗಳಿಗೆ ಕೇಂದ್ದದ ಅನುದಾನ ಬಂದಿದೆ. ಪ್ರಧಾನಮಂತ್ರಿ ಅವಾಸ್ ಯೋಜನೆ, ಸ್ವಚ್ಚ ಭಾರತ, ಆಯುಷ್ಮಾನ್ ಭಾರತ, ಅಮೃತ ನಗರ ಯೊಜನೆ ಅಡಿಯಲ್ಲಿ ರಾಜ್ಯಕ್ಕೆ ಹಣ ಬಂದಿದೆ ಎಂದು ಹೇಳಿದರು.


ಕಳೆದ ಐದು ವರ್ಷದಲ್ಲಿ ಕೇಂದ್ರದಿಂದ ಜಿಎಸ್ ಟಿ ಪರಿಹಾರ 1.06 ಲಕ್ಷ ಕೋಟಿ ರೂ. ಬಂದಿದೆ. 15 ನೇ ಹಣಕಾಸು ಆಯೋಗದ ಅವಧಿ ಇನ್ನೂ 2026 ರ ವರೆಗೆ ಇದೆ. ಇನ್ನೂ 1 ಲಕ್ಷ ಕೋಟಿಗೂ ಹೆಚ್ಚು ಹಣ ಬರುತ್ತದೆ. ಕೇಂದ್ರ ಸರ್ಕಾರ ಜಿಎಸ್ ಟಿ ಪರಿಹಾರ ಶೇ 14% ರಷ್ಟು 2022 ರವರೆಗೆ ನೀಡಿದೆ. ಜಿಎಸ್ ಟಿ ಪರಿಹಾರ ಅವಧಿ ಮುಗಿದರೂ, ರಾಜ್ಹ ಸರ್ಕಾರ ಅದನ್ನು 2023-24 ರ ವರೆಗೆ ಸೇರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ರಾಜ್ಯದ ನಡುವೆ ಸಂಘರ್ಷ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ನಾವು ರಾಜ್ಯ ಸರ್ಕಾರದ ವಿರುದ್ದ ನಿರ್ಣಯ ಮಂಡಿಸಿದ್ದೇವೆ. ನಾವು ಮಂಡಿಸಿರುವ ನಿರ್ಣಯವನ್ನು ಯಾರೂ ವಿರೋಧ ಮಾಡಿಲ್ಲ. ಹೀಗಾಗಿ ನಮ್ಮ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ತಿಳಿದಿದ್ದೇವೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button