Latest

ಹೊರಟ್ಟಿ ಓರ್ವ ಕಳಂಕಿತ; ಟಿಕೆಟ್ ಕೊಟ್ಟು ಸಾಧಿಸುವುದೇನು?; ಬಿಜೆಪಿ ನಾಯಕರಿಂದ ಹೈಕಮಾಂಡ್ ಗೆ ಪತ್ರ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಪಕ್ಷದ ಹಿರಿಯ ಮುಖಂಡರೆ ವಿರೋಧ ವ್ಯಕ್ತಪಡಿಸಿದ್ದು, ಹೊರಟ್ಟಿ ವಿರುದ್ಧ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ.

ಬಸವರಾಜ್ ಹೊರಟ್ಟಿಗೆ ಬಿಜೆಪಿಯಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಇದರ ಬೆನ್ನಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಕೆಲ ಮುಖಂಡರು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದಾರೆ. ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು:
ವಿಧಾನ ಪರಿಷತ್ ಸಭಾಪತಿಯಾಗಿರುವ ಬಸವರಾಜ್ ಹೊರಟ್ಟಿಯವರಿಗೆ ಈಗಾಗಲೇ 76 ವರ್ಷವಾಗಿರುವುದರಿಂದ ಬಿಜೆಪಿ ನಿಯಮದಂತೆ ಅವರಿಗೆ ಟಿಕೆಟ್ ನೀಡುವಂತಿಲ್ಲ.

ಹೊರಟ್ಟಿ ಎರಡು ವೇತನ ಪಡೆದ ಆರೋಪ ಎದುರಿಸುತ್ತಿದ್ದು, 1980ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು 1999ರವರೆಗೆ ಲ್ಯಾಮಿಂಗ್ಟನ್ ಶಾಲೆಯ ದೈಹಿಕ ಶಿಕ್ಷಕರಾಗಿಯೂ ವೇತನ ಪಡೆದಿದ್ದರು.

ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಕೆ ಆರೋಪ ಹೊರಟ್ಟಿ ಮೇಲಿದ್ದು, ಅವರ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ. ಹೊರಟ್ಟಿ ಹಿಂದುತ್ವ ವಿರುದ್ಧದ ಚಳುವಳಿಯಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರು. ಬಿಜೆಪಿ ಸಿದ್ಧಾಂತಗಳನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಂಡವರಲ್ಲ.

ಇಷ್ಟಕ್ಕೂ ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಬಿಜೆಪಿಯಲ್ಲಿ 17 ಶಾಸಕರು, 3 ಸಂಸದರು, 4 ಪರಿಷತ್ ಸದಸ್ಯರು, ಓರ್ವ ಸಭಾಧ್ಯಕ್ಷ, 3 ಕ್ಯಾಬಿನೆಟ್ ಸಚಿವರು, ಓರ್ವ ಕೇಂದ್ರ ಸಚಿವರು, ರಾಜ್ಯದ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಇದ್ದಾರೆ. ಆದರೆ ಜೆಡಿಎಸ್ ನಿಂದ ಒಬ್ಬ ಶಾಸಕರು ಕೂಡ ಇಲ್ಲ.

ಬಸವರಾಜ್ ಹೊರಟ್ಟಿ ವಿರುದ್ಧ ಆರೋಪಗಳು ಇರುವಾಗ ಒಬ್ಬ ಕಳಂಕಿತ ವ್ಯಕ್ತಿಗೆ ಟಿಕೆಟ್ ಕೊಟ್ಟು ಬಿಜೆಪಿ ಸಾಧಿಸುವುದೇನು? ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಬಿಜೆಪಿ ನಾಯಕರು ಹೊರಟ್ಟಿ ಬಿಜೆಪಿ ಸೇರ್ಪಡೆ ಹಾಗೂ ಟಿಕೆಟ್ ವಿಚಾರವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಬಸ್ ಅಪಘಾತ ಪ್ರಕರಣ; ಅಕ್ಕ-ತಂಗಿ ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button