Latest

ಸರ್ಕಾರದ ನಿರ್ಲಕ್ಷ್ಯ; ಹೊರಟ್ಟಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿಗೆ ಶಿಕ್ಷಕರು ಬಲಿಯಾಗುತ್ತಿದ್ದರೂ ಶಿಕ್ಷಕರ ಹಿತ ಕಾಯುವಲ್ಲಿ ಮುಂದಾಗದ ರಾಜ್ಯ ಸರ್ಕಾರ ನಿರ್ಲಕ್ಷಕ್ಕೆ ಕಿಡಿಕಾರಿರುವ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಶಿಕ್ಷಕರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕೆಲ ಸಲಹೆ ನೀಡಿದ್ದಾರೆ.

ಮೊದಲಿನಿಂದಲೂ ಚುನಾವಣೆಗಳು, ಜನಗಣತಿ ಸೇರಿದಂತೆ ಎಲ್ಲ ಆಪತ್ತುಗಳ ಸಂದರ್ಭದಲ್ಲಿ ಸರಕಾರದ ಎಲ್ಲ ಕೆಲಸಗಳಿಗೂ ಶಿಕ್ಷಕರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಆದರೆ ಅಂತಹ ಕೆಲಸ ನಿರ್ವಹಣೆಯಲ್ಲಿ ಅವರಿಗೆ ಏನಾದರೂ ತೊಂದರೆ ಅನಾಹುತ ಸಂಭವಿಸಿದಲ್ಲಿ ಅವರಿಗೆ ನೀಡಬೇಕಾಗಿರುವ ಸುರಕ್ಷತೆ, ಆರೋಗ್ಯ ಸೌಲಭ್ಯ ಹಾಗೂ ಇತರೆ ಸೌಲತ್ತುಗಳನ್ನು ನೀಡುವಲ್ಲಿ ಸರಕಾರ ಆಸಕ್ತಿ ವಹಿಸದೇ ಇರುವುದು ವಿಷಾದದ ಸಂಗತಿ.

Related Articles

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಬಂದಾಗಿನಿಂದ ಶಿಕ್ಷಕರನ್ನು ಕೋವಿಡ್ ಸೋಂಕಿತರನ್ನು ಗುರುತಿಸುವ ಕಾರ್ಯಕ್ಕೆ, ಸರ್ವೆ ಕಾರ್ಯಕ್ಕೆ, ಆರೈಕೆ ಕೇಂದ್ರಗಳ ಉಸ್ತುವಾರಿಗೆ, ಚೆಕ್ ಪೋಸ್ಟಗಳಲ್ಲಿ, ಡಾಟಾ ಎಂಟ್ರಿ ಕಾರ್ಯಕ್ಕೆ ಹಾಗೂ ಜನ ಜಾಗೃತಿ ಕಾರ್ಯ ಸೇರಿದಂತೆ ಹಲವು ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಅಲ್ಲದೇ ಕೋವಿಡ್‍ನ ಭೀಕರತೆ ಮಧ್ಯೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಲೋಕಸಭೆಯೂ ಸೇರಿದಂತೆ ವಿಧಾನ ಸಭೆಯ ಉಪಚುನಾವಣೆಗಳಿಗೆ ಚುನಾವಣಾ ಕಾರ್ಯ ಮತ್ತು ಬಿ.ಎಲ್.ಓ. ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಈ ಉಪಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಹಲವು ಶಿಕ್ಷಕರು ಸಂಪರ್ಕದ ಕಾರಣದಿಂದ ಕೋವಿಡ್ ಸೋಂಕಿತರಾಗಿ ತೀವ್ರವಾಗಿ ಅಸ್ವಸ್ಥರಾಗಿ ಬಳಲುತ್ತಿದ್ದಾರೆ. ಅವರಲ್ಲಿ ಹಲವು ಶಿಕ್ಷಕರು ಅಸುನೀಗಿದ ದಾರುಣ ಘಟನೆಯು ಜರುಗಿದೆ. ಅಲ್ಲದೇ ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕರ ಪೈಕಿ ಸುಮಾರು 55 ಜನ ಶಿಕ್ಷಕರು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆಂಬುದು ಅಂಕಿ ಅಂಶ ಸಮೇತ ತಿಳಿದು ಬಂದಿದ್ದು, ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಅವರಲ್ಲಿ ಹಲವರಿಗೆ ಸೋಂಕು ತಗುಲಿದ್ದು ಸುಮಾರು 17 ಜನ ಮೃತಪಟ್ಟಿದ್ದಾರೆ. ಅಲ್ಲದೇ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ 51 ಜನ ಶಿಕ್ಷಕರು ಕೋವಿಡ್‍ಗೆ ಬಲಿಯಾಗಿದ್ದಾರೆ. ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿಯೂ ಶಿಕ್ಷಕರನ್ನು ನಿಯೋಜಿಸಲಾಗಿತ್ತು ಅವರಲ್ಲಿ ಸುಮಾರು ಜನ ಸೋಂಕಿಗೆ ತುತ್ತಾಗಿದ್ದು 9 ಜನ ಶಿಕ್ಷಕರು ಮೃತರಾಗಿದ್ದಾರೆ ಆದರೂ ಸರ್ಕಾರ ಶಿಕ್ಷಕರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ನಿಯಂತ್ರಣದ ಸರ್ಕಾರದ ಕಾರ್ಯದಲ್ಲಿ ಭಾಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 262 ಜನ ಶಿಕ್ಷಕರು ಕಳೆದ ಕೇವಲ 15 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೃತಪಟ್ಟಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಸಮಾಜಮುಖಿಯಾಗಿ ಸರಕಾರದ ಎಲ್ಲಾ ಆದೇಶಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವ ನನ್ನ ಶಿಕ್ಷಕ ಬಾಂಧವರ ಜೀವನದ ಬಗ್ಗೆ ಸರಕಾರ ಅಸಡ್ಡೆ ತೋರದೆ ಅವರಿಗೆ ಸೂಕ್ತ ಸುರಕ್ಷತೆ ಹಾಗೂ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಪ್ರಮುಖ ಕರ್ತವ್ಯ ಎಂದು ಪ್ರತಿಪಾದಿಸಿದ್ದಾರೆ.

ಕೋವಿಡ್ ಮಹಾಮಾರಿ ನಿಯಂತ್ರಣಾ ಕಾರ್ಯದಲ್ಲಿ ಮಾನವೀಯತೆಯ ಆಧಾರದಲ್ಲಿ ತಮ್ಮ ಜೀವದ ಹಂಗು ತೊರೆದು ಆದೇಶ ಪಾಲಿಸುತ್ತಿರುವ ಶಿಕ್ಷಕರ ಸಂಕಷ್ಠಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಕೆಲ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

1) ಶಿಕ್ಷಕರಾದಿಯಾಗಿ ಎಲ್ಲ ಸರಕಾರಿ ನೌಕರರು ಇಂತಹ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಕೆಲಸ ಮಾಡುವವರಿಗೆ ಸೂಕ್ತ ಆರೋಗ್ಯ ಸರಕ್ಷತೆ ಹಾಗೂ ಭದ್ರತೆ ವ್ಯವಸ್ಥೆ ನೀಡಬೇಕು.
2) ಪ್ರಸಕ್ತ ಕೋವಿಡ್ ಕೆಲಸ ನಿರ್ವಹಿಸುವವರಿಗೆ ಸೂಕ್ತ ಯಂತ್ರೋಪಕರಣಗಳು, ಪಿ.ಪಿ.ಇ. ಕಿಟ್, ಸ್ಯಾನಿಟೈಜರ್, ಮಾಸ್ಕ್ ಹ್ಯಾಂಡ್‍ಗ್ಲೌಜ್ ಮೊದಲಾದ ಪರಿಕರಗಳನ್ನು ಸರಕಾರ ಪೂರೈಸಬೇಕು.
3) ಜನಗಣತಿ, ಇತರೆ ಗಣತಿ ಹಾಗೂ ಚುನಾವಣೆ ಕಾರ್ಯ ಸೇರಿದಂತೆ ಎಲ್ಲ ಸರಕಾರಿ ಕೆಲಸಗಳು ಮತ್ತು ಯೋಜನೆಗಳಿಗೆ ಕೇವಲ ಶಿಕ್ಷಕರನ್ನಷ್ಟೇ ಗುರಿ ಮಾಡದೇ ಸರಕಾರದ ಇತರೆ ಇಲಾಖೆಗಳ ನೌಕರರನ್ನು ಸಹ ಸಮಪ್ರಮಾಣದಲ್ಲಿ ನಿಯೋಜಿಸಬೇಕು.
4) ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವ ಶಿಕ್ಷಕರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‍ಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸುವ ವ್ಯವಸ್ಥೆ ಮಾಡಬೇಕು.
5) ಈಗಾಗಲೇ ಕೋವಿಡ್ ಮಹಾಮಾರಿಗೆ ಬಲಿಯಾಗಿರುವ ಶಿಕ್ಷಕರ ಕುಟುಂಬಕ್ಕೆ ಸೂಕ್ತ ಆರ್ಥಿಕ ಪರಿಹಾರ ನೀಡಿ ಅವಲಂಬಿತರಲ್ಲಿ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು.
6) ಈಗಾಗಲೇ ಕೋವಿಡ್‍ಗೆ ಬಲಿಯಾಗಿರುವ ಶಿಕ್ಷಕರು, ಮೇಧಾವಿಗಳು, ಸಂಪನ್ಮೂಲ ವ್ಯಕ್ತಿಗಳಾಗಿದ್ದು ಅಂತಹ ಶಿಕ್ಷಕರ ಮನೆಗಳಿಗೆ ತೆರಳಿ ಅಧಿಕಾರಿಗಳು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು.

ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು ಅಧಿಕಾರಿಗಳನ್ನು ಕೋವಿಡ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸರಕಾರ ಕೇವಲ ಕೆಲವು ಇಲಾಖೆಗಳ ಸಿಬ್ಬಂದಿಯನ್ನು ಮಾತ್ರ “ಕೋವಿಡ್ ವಾರಿಯರ್ಸ್” ಗಳೆಂದು ಪರಿಗಣಿಸಿದೆ. ಕೂಡಲೇ ಕೋವಿಡ್ ಸಂಬಂಧಿತ ಕಾರ್ಯದಲ್ಲಿ ತೊಡಗಿರುವ “ಎಲ್ಲಾ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್” ಗಳೆಂದು ಘೋಷಿಸಬೇಕು. ಅಲ್ಲದೇ ಕೂಡಲೇ ರಾಜ್ಯದ ಎಲ್ಲಾ ಶಿಕ್ಷಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆದ್ಯತೆಯ ಮೇರೆಗೆ “ಕೋವಿಡ್ ಲಸಿಕೆ” ಹಾಕಿಸಲು ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ವಿರುದ್ಧ ಸಿಎಂ ಗರಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button