
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ವರ್ಷದ ಚಳಿಗಾಲ ಈಗಷ್ಟೇ ದೂರ ಸರಿದಿದೆ. ಬೇಸಿಗೆ ಇನ್ನೂ ಪ್ರವೇಶವಾಗಿರುವ ಈ ಸಂದರ್ಭದಲ್ಲೇ ಹವಾಮಾನದಲ್ಲಿನ ಏರುಪೇರುಗಳು ನಾನಾ ಅವಾಂತರಗಳನ್ನು ಸೃಷ್ಟಿಸುತ್ತಿವೆ.
ರಾತ್ರಿ ಹಾಗೂ ಬೆಳಗ್ಗಿನ ಅವಧಿ ಹೊರಾಂಗಣದಲ್ಲಿ ಸಾಮಾನ್ಯ ವಾತಾವರಣ ಎನಿಸಿದ್ದರೂ ಮಧ್ಯಾಹ್ನವಾಗುತ್ತಲೇ ರಾಜ್ಯದ ದಕ್ಷಿಣೋತ್ತರ ಭಾಗಗಳು ಹಾಗೂ ಕರಾವಳಿ ಬಿಸಿಲ ಝಳಕ್ಕೆ ಬಸವಳಿಯುವಂತಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ನೆರಳಿನಲ್ಲಿ ಸಾಮಾನ್ಯ ಅನುಭವ ಎನಿಸಿದರೂ ಹೊರಗೆ ಬಿಸಿಲಿಗೆ ಮೈಯ್ಯೊಡ್ಡುವುದು ದುಸ್ತರವೆನಿಸಿದೆ. ಮಧ್ಯಾಹ್ನ ಕಾದು ಕೆಂಡವಾಗುವ ವಾತಾವರಣ ಸಂಜೆಯಾಗುತ್ತಲೇ ತಂಪಾಗುತ್ತಿದ್ದು ಈ ಕಣ್ಣಾಮುಚ್ಚಾಲೆಯಾಟಕ್ಕೆ ಅನೇಕ ಜನರ ದೇಹಸ್ಥಿತಿ ಹೊಂದಿಕೊಳ್ಳಲಾಗದೆ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತಿವೆ. ಇದೇ ವೇಳೆ ಹವಾಮಾನದಲ್ಲಿ ಧೂಳಿನ ಪ್ರಮಾಣ ಹೆಚ್ಚುತ್ತಿದ್ದು ಶೀತ, ನೆಗಡಿ, ಕಫ, ಜ್ವರ ಬಾಧೆಗಳು ಹೆಚ್ಚುತ್ತಿವೆ.
ನೆರೆಯ ರಾಜ್ಯ ಕೇರಳದಲ್ಲಿ ತಾಪಮಾನ 45- 50 ಡಿಗ್ರಿ ಸೆಲ್ಸಿಯಸ್ ಗೆ ಜಿಗಿಯುತ್ತಿದ್ದು ಅಲ್ಲಿನ ಜನ ಹೈರಾಣಾಗಿದ್ದಾರೆ. ಇತ್ತ ಕರ್ನಾಟಕ ಕರಾವಳಿಯಲ್ಲೂ ಬಿಸಿ ಗಾಳಿ ಪ್ರಾರಂಭವಾಗಿದ್ದು ಜನ ಅಸಹನೀಯ ಅನುಭವ ಹೊಂದುತ್ತಿದ್ದಾರೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ದಾಖಲಾಗುತ್ತಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಸದ್ಯ 34 ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗುತ್ತಿದೆ. ಇದು 37ರವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿ ಹೇಳಿದೆ.
ಇದೇ ಗತಿಯಲ್ಲಿ ತಾಪಮಾನ ಹೆಚ್ಚಿದಲ್ಲಿ ಬೇಸಿಗೆ ಮಳೆಯ ಪ್ರಮಾಣವೂ ಹೆಚ್ಚಲಿರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದು ವಾರದ ಅವಧಿಯಲ್ಲಿ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸುರಿದಿದ್ದು ಅಪಾರ ಬೆಳೆ ಹಾನಿಗೆ ಕಾರಣವಾಗಿದೆ.
ಆರೋಗ್ಯದ ಎಚ್ಚರವಿರಲಿ:
ಹವಾಮಾನದ ಈ ಏರುಪೇರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿದ್ದರಿಂದ ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ವೈದ್ಯಕೀಯ ತಜ್ಞರು ಸಲಹೆಗಳನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಧೂಳಿನಿಂದ ಬರುವ ಕೆಮ್ಮು, ನೆಗಡಿ, ಜ್ವರ ಬಾಧೆಗಳ ಜೊತೆಗೆ ತಲೆಶೂಲೆ, ಅರ್ಧ ತಲೆಶೂಲೆ, ಕಣ್ಣು, ಪಾದಗಳ ಉರಿ, ನಿರ್ಜಲೀಕರಣ, ತಲೆ ಸುತ್ತುವಿಕೆ ಹೀಗೆ ನಾನಾ ವಿಕಾರಗಳು ಉಂಟಾಗುವ ಸಾಧ್ಯತೆಗಳ ಬಗ್ಗೆ ಎಚ್ಚರಿಸಲಾಗಿದೆ. ಹೀಗಾಗಿ ಜನಸಾಮಾನ್ಯರು ಆದಷ್ಟೂ ಬಿಸಿಲಿನಲ್ಲಿ ಅಲೆದಾಡುವುದನ್ನು ಕಡಿಮೆಗೊಳಿಸುವಂತೆ ಹೇಳಲಾಗಿದ್ದು ದಿನವೊಂದಕ್ಕೆ ಕನಿಷ್ಠ 3.5ರಿಂದ 4 ಲೀಟರ್ ವರೆಗೆ ನೀರಿನ ಸೇವನೆ, ಜ್ಯೂಸ್, ಎಳನೀರು, ರಸಭರಿತ ಹಣ್ಣುಗಳ ಸೇವನೆಗೆ ವೈದ್ಯಕೀಯ ತಜ್ಞರು ಸಲಹೆ ನೀಡಿದ್ದಾರೆ.

ನಿರ್ಜಲೀಕರಣವನ್ನು ಗಂಭೀರವಾಗಿ ಪರಿಗಣಿಸದೆ ತೀರ ನಿರ್ಲಕ್ಷ್ಯ ತೋರಿದಲ್ಲಿ ಕಿಡ್ನಿ, ಹೃದಯ, ಎಲುಬು, ಚರ್ಮ ಇತ್ಯಾದಿಗಳಿಗೆ ಸಂಬಂಧಿಸಿದ ತೊಂದರೆಗೂ ಒಳಗಾಗುವ ಬಗ್ಗೆ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ಬಿಸಿಲಿಗೆ ಅಲೆಯುವವರು, ಬಿಸಿಲಲ್ಲೇ ಕೆಲಸ ನಿರ್ವಹಿಸುವವರು ಕೂಲಿಂಗ್ ಗ್ಲಾಸ್ ಧರಿಸುವುದು, ನೇರ ಬಿಸಿಲಿಗೆ ತಲೆ, ಮೈಯ್ಯೊಡ್ಡದಂತೆ ಕೂಡ ಸಲಹೆ ನೀಡಲಾಗಿದೆ.