ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ತಾಲ್ಲೂಕಿನ ಲೋಂಡಾ ಅರಣ್ಯ ವಲಯದ ಮತ್ತು ಶಿರೋಲಿ ಗ್ರಾಮ ಪಂಚಾಯ್ತಿ
ವ್ಯಾಪ್ತಿಯ ಡೊಂಗರಗಾಂವ ಗ್ರಾಮದ ಬಳಿ ಕೃಷಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ
ರೈತರೊಬ್ಬರ ಮೇಲೆ ಮೂರು ಕರಡಿಗಳ ಗುಂಪು ದಾಳಿ ನಡೆಸಿದ್ದು, ಅವರ ಕಾಲು ಮತ್ತು ಸೊಂಟದ
ಭಾಗಕ್ಕೆ ಕರಡಿಗಳು ಪರಚಿ ಗಾಯಗೊಳಿಸಿದ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.
ಈ ಘಟನೆಯಲ್ಲಿ ಗಾಯಗೊಂಡವರನ್ನು ಡೊಂಗರಗಾಂವ ಗ್ರಾಮದ ರೈತ ನಾಮದೇವ ಪಾಲಕರ (55) ಎಂದು
ಗುರುತಿಸಲಾಗಿದೆ.
ಘಟನೆಯ ವಿವರ: ಡೊಂಗರಗಾಂವ ಗ್ರಾಮದ ಕೃಷಿಕ ನಾಮದೇವ ಗ್ರಾಮದ ಹೊರವಲಯದ ತಮ್ಮ ಕೃಷಿ ಜಮೀನಿನಲ್ಲಿ ದಿನದ ಕೆಲಸ ಮುಗಿಸಿ ಕಾಲ್ನಡಿಗೆಯ ಮೂಲಕ ಮನೆಗೆ ಮರಳುತ್ತಿದ್ದರು. ಇವರ ಕುಟುಂಬದ ಸದಸ್ಯರು ಅದೇ ದಾರಿಯಲ್ಲಿ ಹಿಂದಿನಿಂದ ಬರುತ್ತಿದ್ದರು. ಮುಂದೆ
ಸಾಗುತ್ತಿದ್ದ ನಾಮದೇವ ಅವರಿಗೆ ಎದುರಾದ ಮೂರು ಕರಡಿಗಳು ಅವರ ಮೇಲೆ ದಾಳಿ ನಡೆಸಿದ್ದು,
ಕರಡಿಗಳ ದಾಳಿಗೀಡಾದ ನಾಮದೇವ ಅವರ ಕಿರುಚಾಟ ಕೇಳಿದ ಕುಟುಂಬದ ಸದಸ್ಯರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಕರಡಿಗಳ ಮೇಲೆ ಪ್ರತಿದಾಳಿ ನಡೆಸುವ ಮೂಲಕ ನಾಮದೇವ ಅವರನ್ನು ರಕ್ಷಿಸಿದ್ದಾರೆ.
ಕರಡಿಗಳ ದಾಳಿಯ ಸುದ್ದಿಯನ್ನು ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ
ಗ್ರಾಮಕ್ಕೆ ತೆರಳಿ ನಾಮದೇವ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕೂಡಲೇ ಅವರನ್ನು
ಪಟ್ಟಣಕ್ಕೆ ಕರೆತಂದು ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು,
ಆಸ್ಪತ್ರೆಯ ವೈದ್ಯರ ಸೂಚನೆಯ ಮೇಲೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ
ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸುದ್ದಿ ತಿಳಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ ಸಂಗೊಳ್ಳಿ, ವಲಯ
ಅರಣ್ಯಾಧಿಕಾರಿ ಎಸ್.ಎಸ್ ನಿಂಗಾಣಿ ಮತ್ತು ಸಿಬ್ಬಂದಿ ಡೊಂಗರಗಾಂವ ಗ್ರಾಮಕ್ಕೆ ತೆರಳಿ
ಕರಡಿ ದಾಳಿಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ನಾಮದೇವ ಅವರ ಕುಟುಂಬಕ್ಕೆ
ಸಾಂತ್ವನ ಹೇಳಿದ್ದಾರೆ.
ಕರಡಿ ದಾಳಿಯನ್ನು ಖಚಿತಪಡಿಸಿದ ಲೋಂಡಾ ವಲಯ ಅರಣ್ಯ ಅಧಿಕಾರಿ ಎಸ್.ಎಸ್ ನಿಂಗಾಣಿ,
ಕರಡಿ ದಾಳಿಯ ವಿಷಯವನ್ನು ಬೆಳಗಾವಿ ಡಿ.ಎಫ್.ಒ. ಎಂ.ವಿ. ಅಮರನಾಥ ಅವರಿಗೆ
ಮುಟ್ಟಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ಇಲಾಖೆಯಿಂದ ನಾಮದೇವ ಅವರ
ಚಿಕಿತ್ಸಾ ವೆಚ್ಚ ಭರಿಸುವುದರ ಜೊತೆಗೆ ಸೂಕ್ತ ಪರಿಹಾರವನ್ನೂ ಸಹ ಒದಗಿಸುವುದಾಗಿ
ಹೇಳಿದ್ದಾರೆ. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಭಯಭೀತರಾಗಿರುವ ನಾಮದೇವ ಸಧ್ಯ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ