Latest

ಸುಂದರ ಬದುಕಿದೆ ಭಯದಾಚೆ

ಜಯಶ್ರೀ ಜೆ. ಅಬ್ಬಿಗೇರಿ

ಸಂತೋಷವಾಗಿ ಇರಬೇಕೆನ್ನುವುದು ನಮ್ಮೆಲ್ಲರ ಬಯಕೆ. ಸುಂದರ ಬದುಕು ತಾನಾಗಿಯೇ ಬಂದು ನಮ್ಮನ್ನು ಅಪ್ಪಿಕೊಳ್ಳಬೇಕೆನ್ನುವುದು ನಮ್ಮೆಲ್ಲರ ಹೆಬ್ಬಯಕೆ. ಆದರೆ ನಾವು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತ, ಬಿಸಿ ಹಾಲು ಕುಡಿದ ಬೆಕ್ಕಿನಂತೆ ಮೊಸರನ್ನು ಊದಿ ಊದಿ ಕುಡಿಯಲು ನೋಡುತ್ತೇವೆ.

ನಿನ್ನೆಗಳಲ್ಲಿ ಅನುಭವಿಸಿದ ಎಲ್ಲವನ್ನೂ ನೆನೆಯುತ್ತ ಭಯಗೊಳ್ಳುತ್ತೇವೆ. ಹಿಂದೆ ಬೀಸಿದ ಬಿರುಗಾಳಿ ನೆನೆಯುತ್ತೇವೆ. ಮತ್ತೆ ಅದೇ ಗಾಳಿ ಸುಯ್ಯೆಂದು ಬೀಸುವುದೇನೋ ಎಂದು ಮತ್ತೆ ಮತ್ತೆ ಹೆದರುತ್ತೇವೆ. ಇದೇ ಹೆದರಿಕೆಯಲ್ಲಿ ಇಂದು ಕೈಯಲ್ಲಿರುವ ಸುಖ ಅನುಭವಿಸುವುದನ್ನೂ ಮರೆಯುತ್ತೇವೆ. ಗತಿಸಿ ಹೋದ ವಿಷಯಗಳ ನೆನೆದು ಭಯಗೊಳ್ಳುವುದರಲ್ಲಿ ಎಳ್ಳಷ್ಟೂ ಅರ್ಥವಿಲ್ಲ.

ಕಹಿ ಘಟನೆಗಳ ನೆನಪುಗಳನ್ನು ಮರೆತು ಹಾಯಾಗಿರುವುದು ನಮ್ಮ ಸ್ವಭಾವದಲ್ಲೇ ಇಲ್ಲ ಅನಿಸುತ್ತದೆ. ಅಕಸ್ಮಾತ್ ಅವು ಮಾಸಿಹೋಗಲು ತಯಾರಿದ್ದರೂ ತರಚು ಗಾಯವ ಕೆರೆದು ಹುಣ್ಣಾಗಿಪುದು ಕಪಿ ಎಂದು ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೇಳಿದಂತೆ ಪದೇ ಪದೇ ಅದೇ ಅದೇ ನೆನಪುಗಳನ್ನು ಮನಸ್ಸಿನ ಮನೆಯಲ್ಲಿ ತೆರೆದುಕೊಂಡು, ರಿವೈಂಡ್ ಮಾಡಿಕೊಂಡು ಇಂದಿನ ಖುಷಿಗೆ ಎಳ್ಳುನೀರು ಬಿಡುತ್ತೇವೆಂಬುದು ಸೋಜಿಗವಲ್ಲವೇ?


ಚಿಂತಿಸಿ ಫಲವಿಲ್ಲ
ಮಿಂಚಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ ಎಂಬ ಹಿರಿಯರ ಬುದ್ಧಿಮಾತು ಗೊತ್ತಿದ್ದರೂ ನಿನ್ನೆಗಳನ್ನು ಕಣ್ಮುಂದೆ ತಂದುಕೊಂಡು ಕಣ್ಣೀರು ಹಾಕುವುದನ್ನು ಮಾತ್ರ ಬಿಡುವುದಿಲ್ಲ. ಗತಿಸಿಹೋದ ಕಾಲದಲ್ಲಿ ನಡೆದ ಘಟನೆಗಳನ್ನು ಅದರ ಪರಿಣಾಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಹೀಗಿದ್ದರೂ ಭಯ ಬಿಡದೇ ಭಯದಲ್ಲಿ ಗೋಳಾಡುತ್ತಲೇ ಇರುತ್ತೇವೆ.

ಸಿಹಿ ಇಂದು ನಮಗಾಗಿ ಕಾಯುತ್ತಿದ್ದರೂ ಕಹಿಯುಂಡ ಗಳಿಗೆಗಳನ್ನು ಕರಗಿಸಲು ಯತ್ನಿಸುತ್ತಿರುತ್ತೇವೆ. ಹೊರತು ನೋವು ನುಂಗಿ ನಗಲು ಪ್ರಯತ್ನಿಸುವುದೇ ಇಲ್ಲ. ಭಯದ ತಲೆಸವರಿ ಸಂತೈಸಿ ಅವಡುಗಚ್ಚಿ ಅದರೊಂದಿಗೆ ನರಳುತ್ತ ಬದುಕುತ್ತೇವೆ. ಇದೇಕೆ ಹೀಗೆ ನಾವು? ಯುದ್ಧಕಾಲದಲ್ಲಿ ಇರುವವರಂತೆ ಸದಾ ನಿನ್ನೆ ಮೊನ್ನೆಗಳೆಂಬ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗುತ್ತಿದ್ದೇವೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ ಅದಕ್ಕೆ ನಾವು ಕ್ಯಾರೆ ಅನ್ನುವುದಿಲ್ಲ. ಶಾಂತಿಕಾಲದಲ್ಲಿ ಇರುವವರ ತರಹ ಜೀವನ ನಡೆಸುವುದೇ ಇಲ್ಲ.


ನಾಳೆ ಭಯ
ಮಾತೆತ್ತಿದರೆ ಭಗವದ್ಗೀತೆ ಉಪನಿಷತ್ತುಗಳ ಮಾತನಾಡುವ ನಾವು ನಾಳೆ ಏನಾಗುವುದೋ ಎನ್ನುವ ಭಯದಲ್ಲಿ ಮುಳುಗಿರುವುದೇಕೆ? ಮನೆ ಮಂದಿ ಹೊರಗಿನ ಮಂದಿ ಎನ್ನದೇ ನಗುವ ಸ್ನೇಹ ಹಸ್ತವಿಲ್ಲದೇ ಯಾವಾಗಲೂ ಮನದಲ್ಲಿ ಕೋಲಾಹಲ ಎಬ್ಬಿಸಿಕೊಂಡು ತಿರುಗುತ್ತೇವೆ.

ಇಂಥದ್ದರ ನಡುವೆ ಹೇಗೆಲ್ಲ ಆಗುತ್ತೆ ಅಂದರೆ ಯಾವುದೋ ಸಂದರ್ಭದಲ್ಲಿ ಮನಸ್ಥಿತಿ ಸರಿಯಿಲ್ಲದೇ ಕಡೆಗಣಿಸಿದವರನ್ನೇ ಕಣ್ಣಿಗೊತ್ತಿಕೊಳ್ಳುವ ಸಮಯ ಬರುತ್ತದೆ. ಆಗ ಕೆಟ್ಟ ಕನಸು ಬಿದ್ದವರಂತೆ ಅಷ್ಟೇನು ಮುಖ್ಯವಲ್ಲವೆಂದು ಕಡೆಗಣಿಸಿದ ವ್ಯಕ್ತಿಯ ಹಿಂದೆ ಬೀಳಬೇಕಾಗುತ್ತದೆ. ಹೀಗೆ ಕಡೆಗಣಿಸಲ್ಪಟ್ಟವನು ಏನು ಮಾಡುವನೋ ಎಂಬ ಹೆದರಿಕೆ ಕೆಸರು ನೀರಿನಲ್ಲಿ ಓಡಾಡಿಸುತ್ತದೆ.


ದೇವರ ಭಯ
ನಮಗಿರುವ ದೊಡ್ಡ ತೊಂದರೆ ಎಂದರೆ ಒಂದರಲ್ಲೂ ಗಟ್ಟಿಯಾಗಿ ನಿಲ್ಲದ ಅತ್ತಿತ್ತ ಹೊಯ್ದಾಡುವ ಮನಸ್ಸು. ಸುಖಾಸುಮ್ಮನೆ ಈಗಿನ ಸವಿಕ್ಷಣಗಳನ್ನು ಸವಿಯಲು ಬಿಡುವುದಿಲ್ಲ. ಚಿತ್ತ ಹಾಳಾಗದಂತೆ ಒಂದೆಡೆ ಗಟ್ಟಯಾಗಿ ಹಿಡಿದಿಟ್ಟು ಉಪಯೋಗಿಸುವುದು ಅಷ್ಟು ಸಲೀಸಲ್ಲ. ಸುಲಲಿತವಾಗಿ ಎಲ್ಲ ದಿಕ್ಕುಗಳಲ್ಲಿ ಪಟ ಪಟ ಓಡುವ ಈ ಮನವೆಂಬ ಮರ್ಕಟವನ್ನು ಸರಿ ಮಾಡುವುದು ಕೆಲವೇ ಕ್ಷಣಗಳ ವಿದ್ಯಮಾನವಲ್ಲ. ಮನದ ಮೂಲೆಯಲ್ಲಿ ಕತ್ತಲೆ ಸುರಿದುಕೊಂಡು ಹೊರಗೆ ಬಣ್ಣ ಬಣ್ಣದ ಝಗಮಗಿಸುವ ಸಾಲು ಸಾಲು ವಿದ್ಯುತ್ ದೀಪಗಳನ್ನು ಹಚ್ಚಿದರೆ ಉಪಯೋಗವಿಲ್ಲ.

ಸಂಭ್ರಮದಲ್ಲೂ ಸಂಕಟಪಡುವುದು ನಮಗೆ ರೂಡಿಯಾಗಿ ಬಿಟ್ಟಿದೆ ಅಂತ ಒಮ್ಮೊಮ್ಮೆ ಅನಿಸುವುದು. ಏನೆಲ್ಲ ನೀಡಿರುವ ದೇವರ ನೆನೆ ನೆನೆದು ಕೃತಜ್ಞತೆಯ ಭಾವ ವ್ಯಕ್ತಪಡಿಸುವುದನ್ನು ಬಿಟ್ಟು ಮಾಡಿದ ದುಷ್ಕೃತ್ಯಗಳಿಗೆ ಆ ಭಗವಂತ ಅದೇನು ಶಿಕ್ಷೆ ನೀಡುವನೇನೋ ಎಂದು ಹೆದರಿ ಕಣ್ಣೀರಿನ ಧಾರೆ ಹರಿಸುತ್ತೇವೆ. ದೇವರು ನೀಡಿದ ಬದುಕನ್ನು ನಿತ್ಯೋತ್ಸವವೆಂದು ತಿಳಿದು ನಡೆಯಬೇಕು.


ಸಾಮಾಜಿಕ ಭಯ

ಸಮಾಜ ಮತ್ತು ಊರಿನವರ ಮಾತುಗಳಿಗೆ ಕಿವಿಗೊಟ್ಟು ಅವರ ಮಾತಿಗೆ ಕಟ್ಟುಬೀಳುತ್ತೇವೆ. ನಮಗೆ ಸರಿ ಅನಿಸಿದ್ದನ್ನು ಮಾಡಲು ಸಾಮಾಜಿಕ ಭಯದಿಂದ ಹಿಂಜರಿಯುತ್ತೇವೆ. ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಹರಿಯುವ ನೀರಿನ ಜೊತೆ ಹರಿಯುವುದು ಒಳ್ಳೆಯದು ಅಂದುಕೊಳ್ಳುತ್ತೇವೆ.

ಪ್ರವಾಹದ ವಿರುದ್ಧ ಈಜಲು ಹೆದರುತ್ತೇವೆ. ನಮ್ಮಲ್ಲಿರುವ ಉತ್ತಮೋತ್ತಮ ವಿಚಾರಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಪ್ರತಿಫಲ ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಪ್ರಯತ್ನ ಯಾವತ್ತೂ ವ್ಯರ್ಥವಾಗುವುದಿಲ್ಲ. ಪ್ರತಿ ಕಾರ್ಯವು ಒಂದು ಬೀಜದಂತೆ. ಅದನ್ನು ಜಾಣತನದಿಂದ ಆರಿಸಿಕೊಳ್ಳಬೇಕು. ಹೂವಿನ ಬೀಜವನ್ನು ಆರಿಸಿಕೊಂಡರೆ ಸುಂದರ ಹೂದೋಟ ಕಣ್ಮುಂದೆ ನಳನಳಿಸುವುದು. ಭಯದ ಲೋಕದಲ್ಲಿ ಮುಳುಗಿದರೆ ಮನದಲ್ಲಿ ಮುಳ್ಳಿನ ಪೊದೆ ತಾನಾಗಿಯೇ ಬೆಳೆಯುತ್ತದೆ.


ಜವಾಬ್ದಾರಿ ಭಯ
ಭಯಕ್ಕೆ ಜಾಗ ಕೊಟ್ಟರೆ ಅದು ನಮ್ಮ ಆಸೆ ಆಕಾಂಕ್ಷೆಗಳಿಗೆ ಅಡ್ಡಿಯಾಗುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ಪ್ರಯಾಣವನ್ನು ಶುರು ಮಾಡಿಕೊಳ್ಳಬೇಕು. ಆಗ ಮನದಲ್ಲಿ ಮನೆ ಮಾಡಿದ ಭಯ ಹೇಳದೇ ಕೇಳದೇ ಮನೆ ಖಾಲಿ ಮಾಡುತ್ತದೆ. ಜೀವನದಲ್ಲಿ ಯಾವುದಕ್ಕೆ ಭಯಗೊಳ್ಳಬೇಕು ಯಾವುದಕ್ಕೆ ಭಯಗೊಳ್ಳಬಾರದು ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಭಯ ನಮ್ಮಲ್ಲಿರುವ ಚೈತನ್ಯದ ವಾಸ್ತವತೆಯನ್ನು ಮರೆಮಾಚುತ್ತದೆ. ಕಾರಣವಿಲ್ಲದೆ ಜೀವನದ ಮುಖ್ಯ ವಿಷಯಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಎಷ್ಟೋ ಸಲ ನಾವು ಹೊರಬೇಕಾದ ಹೊಣೆಗಳಿಗೆ ಕೊಂಚವೂ ಅಲ್ಲಾಡದಂತೆ ಗರುಡಗಂಭದಂತೆ ನಿಲ್ಲಿಸಿ ಬಿಡುತ್ತದೆ. ಆದ್ದರಿಂದ ಜವಾಬ್ದಾರಿಯ ಭಯಕ್ಕೆ ಭಯ ಬೀಳದೇ ಹೊರೆಗಳನ್ನು ಸಮರ್ಥವಾಗಿ ನಿರ್ವಹಿಸಲು ಧೈರ್ಯ ತಂದುಕೊಂಡರೆ ಜವಾಬ್ದಾರಿ ಭಯ ಮುನ್ನುಗಬೇಕು.


ಸಾವಿನ ಭಯ
ಯಾರದ್ದೋ ಸಾವನ್ನು ನೋಡಿ ನಾವು ಭಯಗೊಳ್ಳುತ್ತೇವೆ. ಆದರೆ ಅದನ್ನು ವಾಸ್ತವತೆಯಿಂದ ನೋಡಿದರೆ ಅದು ಅಂತಿಮ ಯಾತ್ರೆ. ಹುಟ್ಟಿದ ಜೀವಿ ಸಾಯಲೇಬೇಕು ಎನ್ನುವ ಸಂಗತಿ ಗೊತ್ತಿರುವುದೇ. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೇ ಬದುಕಿದರೆ, ಬದುಕಿಗೆ ಅವಮಾನ ಎನ್ನುವ ನುಡಿಮುತ್ತಿನಂತೆ ಸಾವು ನಮ್ಮನ್ನು ಅಪ್ಪಿಕೊಳ್ಳುವ ಮುನ್ನ ಜೀವನದಲ್ಲಿ ಏನಾದರೂ ಸಾಧಿಸಿ ಸಾರ್ಥಕಗೊಳಿಸಿಕೊಳ್ಳಬೇಕು. ಸಾಧಿಸಲು ಭಯ ತೊರೆಯಬೇಕು.

ಭಯವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ನಾವು ಕಲಿಯಬೇಕು. ಭಯಕ್ಕೆ ಬ್ರೇಕು ಹಾಕದಿದ್ದರೆ ಬುದ್ಧಿ ಮಂಕಾಗಿ ಬಿಡುತ್ತದೆ. ಏನು ಮಾಡುವುದು ತಿಳಿಯದೇ ಸ್ತಬ್ದವಾಗಿ ಬಿಡುತ್ತೇವೆ. ಜೀವನದ ಏರುಪೇರಗಳನ್ನು ತಕ್ಷಣ ಗ್ರಹಿಸಿ ಬದುಕಿನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಭಯದಾಚೆ ಹೊರಬರಲು ಬುದ್ಧಿ, ಆಲೋಚನೆ ಮತ್ತು ನಿರ್ಧಾರಗಳು ಕೆಲಸ ಮಾಡಬೇಕಾಗುತ್ತದೆ. ಸದಾ ಭಯದಿಂದ ಕೂಡಿದ್ದರೆ ಬಂಗಾರದಂತಿರುವ ಅವಕಾಶಗಳಿಂದ ವಂಚಿತರಾಗುತ್ತೇವೆ.


ಕೊನೆ ಹನಿ
ಭಯಕ್ಕಿಂತ ನಂಬಿಕೆ ಹೆಚ್ಚಿಸಿಕೊಂಡರೆ ಭಯಕ್ಕೆ ಭಯಗೊಳ್ಳುವ ಅವಶ್ಯಕತೆಯೇ ಇಲ್ಲ. ಪ್ರತಿದಿನವೂ ನಿತ್ಯನೂತನ. ಪ್ರತಿಕ್ಷಣ ಬಯಕೆಗಳು ಹೆಚ್ಚುತ್ತಲೇ ಇರುತ್ತವೆ. ಹೀಗೆ ಕ್ಷಣಕ್ಷಣಕ್ಕೂ ಹೆಚ್ಚುವ ಬಯಕೆಗಳನ್ನು ಈಡೇರಿಸಿಕೊಳ್ಳಲು ನಿನ್ನೆಗಳೆಂಬ ಅಧ್ಯಾಯಗಳನ್ನು ಮುಚ್ಚಬೇಕು. ಭಯಗೊಂಡರೆ ಜಯವಿಲ್ಲ ಎಂಬುದನ್ನು ತಿಳಿಯಬೇಕು.

ಇಂದಿನ ಹೊಸ ಅಧ್ಯಾಯದಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಸದಾ ಬೆಂಬತ್ತಿ ಕಾಡುತ್ತದೆ. ಅದಕ್ಕೊಂದು ಚೆಂದದ ದಾರಿಯುಂಟು. ಅದೇನೆಂದರೆ, ಸೊಗಸಾದ ಕನಸುಗಳಿಗೆ ಮತ್ತು ನಿರ್ಧಿಷ್ಟ ಗುರಿಗೆ ಪ್ರತಿದಿನವನ್ನೂ ಗಂಟು ಹಾಕಿ ಕಟ್ಟಿ ಅದರೊಂದಿಗೆ ಸಾಗುವುದು. ಇದರಿಂದ ನೂರಾರು ಹೊಂಗನಸುಗಳ ಹೊತ್ತ ಮನಸ್ಸು ಉಲ್ಲಸಿತವಾಗಿರುತ್ತದೆ. ಉಲ್ಲಸಿತ ಭಾವ ಸುಂದರ ಬದುಕನ್ನು ಕೈಚಾಚಿ ಕರೆದು ತಂದು ನಮ್ಮ ಮುಂದೆ ನಿಲ್ಲಿಸುತ್ತದೆ ಅಲ್ಲವೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button