Belagavi NewsBelgaum NewsKannada NewsKarnataka NewsLatest

*ತನ್ನ ಕಿಡ್ನಿಯನ್ನೇ ಮಗನಿಗೆ ನೀಡಿ ಪುನರ್ಜನ್ಮ ನೀಡಿದ ತಾಯಿ*

ಆಸ್ಪತ್ರೆ ಆರಂಭವಾದ ಮೊದಲ ವರ್ಷದಲ್ಲೇ ಐತಿಹಾಸಿಕ ಸಾಧನೆಗೆ ಸಾಕ್ಷಿಯಾದ ಅರಿಹಂತ ಆಸ್ಪತ್ರೆ ವೈದ್ಯರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ ಹಲವು ವರ್ಷಗಳ ಹಿಂದೆ ಕಿಡ್ನಿ ಖಾಯಿಲೆಯಿಂದ ಬಳಲುತ್ತ ಡಯಾಲಿಸಿಸ್ ಗೆ ಒಳಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದ ಮಗನಿಗೆ ತಾಯಿಯು ಕಿಡ್ನಿ ನೀಡಿ ಆತನಿಗೆ ಜೀವದಾನ ಮಾಡಿರುವ ಘಟನೆ ನಡೆದಿದೆ. ಬೆಳಗಾವಿ ಜನರಿಗೆ ವೈದ್ಯಕೀಯ ಸೇವೆಯಲ್ಲಿ ಹೊಸತನ ನೀಡುತ್ತಿರುವ ನಗರದ ಅರಿಹಂತ ಆಸ್ಪತ್ರೆಯಲ್ಲಿ ತಾಯಿಯು ನೀಡಿದ ಕಿಡ್ನಿಯನ್ನು ಮಗನಿಗೆ ಕಸಿ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯು ಪ್ರಾರಂಭವಾದ ಒಂದೇ ವರ್ಷದಲ್ಲಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ.

26 ವರ್ಷದ ಮಗ ರಾಮದಾಸ ಕುಲಂ ಅವರು ಕಿಡ್ನಿ ಖಾಯಿಲೆಯಿಂದ ಬಳಲುತ್ತ ಡಯಾಲಿಸಿಸಗೆ ಒಳಗಾಗುತ್ತಿದ್ದರು. ತೀವ್ರ ತೊಂದರೆಯಿಂದ ಬಳಲುತ್ತಿರುವ ಮಗನ ನೋವನ್ನು ತಾಳಲಾರದೇ ತಾಯಿಯಾದ ಗುಣವಂತಿ ಕುಲಂ ಅವರು ತಮ್ಮ ಕಿಡ್ನಿಯನ್ನು ಮಗನಿಗೆ ಧಾರೆ ಎರೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಲ್ಯಾಳಿ ಗ್ರಾಮದ ನಿವಾಸಿಯಾದ ಶ್ರೀ ರಾಮದಾಸ ಕುಲಂ, ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ಅರಿಹಂತ ಆಸ್ಪತ್ರೆಗೆ ಆಗಮಿಸಿದಾಗ ನೆಫ್ರಾಲಜಿಸ್ಟ್ ಡಾ. ವಿಜಯಕುಮಾರ ಪಾಟೀಲ ಅವರು ಸಮಗ್ರವಾಗಿ ತಪಾಸಿಸಿದಾಗ ಮೂತ್ರಪಿಂಡ ಕಸಿ ಮಾಡಿದರೆ ಒಳ್ಳೆಯದು. ಇದರಿಂದ ತೊಂದರೆ ಕಡಿಮೆಯಾಗಬಹುದು ಎಂದು ಮನವರಿಕೆ ಮಾಡಿದರು. ಕಳೆದ 29 ಡಿಸೆಂಬರ 2023 ರಂದು ಶಸ್ತ್ರಚಿಕಿತ್ಸೆ ನೆರವೇರಿಸಿ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾದರು. ಈ ಪ್ರಕ್ರಿಯೆಯು ರಾಮದಾಸ ಕುಲಂ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು.

ಯುರಾಲಾಜಿಸ್ಟ ಡಾ. ಅಮಿತ ಮುಂಗರವಾಡಿ, ಡಾ. ಶಿವಗೌಡಾ ಪಾಟೀಲ ಅವರು ನೆರವೇರಿಸಿದ ಶಸ್ತ್ರಚಿಕಿತ್ಸೆಗೆ ನೆಫ್ರಾಲಜಿಸ್ಟ್ ಡಾ.ವಿಜಯಕುಮಾರ ಪಾಟೀಲ್, ಅರಿವಳಿಕೆ ತಜ್ಞವೈದ್ಯರಾದ ಡಾ.ಪ್ರಶಾಂತ ಎಂ.ಬಿ, ಡಾ.ಅವಿನಾಶ ಲೋಂಡೆ, ಡಾ.ಅಂಬರೀಷ ನೇರ್ಲಿಕರ ಅವರು ಸಹಕಾರ ನೀಡಿದರು. ವೈದ್ಯಕೀಯ ತಂಡದ ಅತ್ಯಂತ ಕ್ರಮಬದ್ದವಾದ ಸಮನ್ವಯವು ಕಾರ್ಯವಿಧಾನದ ಯಶಸ್ವಿಗೆ ಅನುಕೂಲವಾಯಿತು.
ಧೈರ್ಯಶಾಲಿ ದಾನಿ ಗುಣವಂತಿ ಕುಲಂ ಅವರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಕಿಡ್ನಿಯನ್ನು ಮಗನಿಗೆ ದಾನ ಮಾಡಲು ನಿರ್ಧರಿಸಿದರು. ನಿಸ್ವಾರ್ಥತೆ ಮತ್ತು ತಾಯಿಯ ಪ್ರೀತಿಯನ್ನು ಪ್ರದರ್ಶಿಸಿದ ಅವರು, ತಮ್ಮ ಮಗನ ಯೋಗಕ್ಷೇಮಕ್ಕಾಗಿ ಅರ್ಪನಾ ಮನೋಭಾವದ ತಾಯಿಯು ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗುವ ಇಚ್ಛೆಯು ಮಹಾನ್ ತಾಯಿಯ ಕತೃತ್ವವನ್ನು ಬಿಂಬಿಸಿದೆ.

ಯಶಸ್ವಿ ಕಸಿ ನಂತರ ತಾಯಿ ಮಗನನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಗಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳೊಂದಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುತ್ತಿರುವ ಅರಿಹಂತ್ ಆಸ್ಪತ್ರೆಯು ಸೂಪರ ಸ್ಪೇಶಾಲಿಟಿಯ ವಿವಿಧ ವಿಭಾಗಗಳನ್ನು ಪ್ರಾರಂಭಿಸುತ್ತಿದೆ. ಕಡಿಮೆ ಅವಧಿಯಲ್ಲಿ, ಆಸ್ಪತ್ರೆಯು ಆರೋಗ್ಯ ರಕ್ಷಣೆಯಲ್ಲಿನ ಶ್ರೇಷ್ಠತೆಗಾಗಿ ಮನ್ನಣೆಯನ್ನು ಗಳಿಸಿದ್ದು, ಎನಎಬಿಎಚ ಮಾನ್ಯತೆ ಮತ್ತು ಯಶಸ್ವಿ ಅಂಗಾಂಗ ಕಸಿಗಳಂತಹ ಮೈಲಿಗಲ್ಲುಗಳನ್ನು ಸಾಧಿಸಿದೆ.

ಆಸ್ಪತ್ರೆಯ ವೈದ್ಯಕೀಯ ನಿರ್ಧೇಶಕರಾದ ಡಾ. ಎಂ. ಡಿ. ದೀಕ್ಷಿತ ಅವರು, ಅರಿಹಂತ ಆಸ್ಪತ್ರೆಯು ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುವ, ಆರೋಗ್ಯ ಸೇವೆಗಳ ಪ್ರಗತಿಗೆ ಕೊಡುಗೆ ನೀಡುವ ತನ್ನ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಅಂಗಾಂಗ ಕಸಿಯ ಮೂಲಕ ಜೀವವನ್ನು ಉಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ತಿಳಿಸಿದ್ದಾರೆ.

ಯಶಸ್ವಿ ಮೂತ್ರಪಿಂಡ ಕಸಿ ನೆರವೇರಿಸಿದ ತಜ್ಞವೈದ್ಯರ ತಂಡವನ್ನು ಸಂಸ್ಥೆಯ ಅಧ್ಯಕ್ಷರಾದ ರಾವಸಾಹೇಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button