Latest

ಝಾಡಶಹಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಚಾಲನೆ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಝಾಡಶಹಾಪುರ ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವುದಾಗಿ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ  ಅವರು, ಝಾಡಶಹಾಪುರ ಗ್ರಾಮವು ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊನೆಯ ಗ್ರಾಮವಾಗಿದೆ. ಕಳೆದ 6 ವರ್ಷಗಳಿಂದ ಯಾವುದೇ ಕಾಮಗಾರಿಗಳು ನಡೆಯದೆ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಇಲ್ಲಿನ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸಿದ್ದಾರೆ. ಹಾಗಾಗಿ, 2.5 ಕೋಟಿ ರೂ ಅನುದಾನದಲ್ಲಿ ಝಾಡಶಹಾಪುರ ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಪೈಪ್ ಲೈನ್, ಅಂಗನವಾಡಿ ಕಟ್ಟಡ, ಲೈಬ್ರರಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ಅನು ಹಮ್ಮಿಕೊಳ್ಳಲಾಗುವುದು ಎಂದು ಅಭಯ್ ತಿಳಿಸಿದರು.

ಗ್ರಾಮದ ಒಂದು ಬೀದಿಯಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ. ಜೊತೆಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು 3 ತಿಂಗಳಲ್ಲಿ ಪೂರ್ಣಗೊಂಡು ಗ್ರಾಮಕ್ಕೆ ಹೊಸ ಸ್ವರೂಪ ಕಾಣಲಿದೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈಗಾಗಲೇ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಯುದ್ದೋಪಾದಿಯಲ್ಲಿ ನಡೆಯುತ್ತಿವೆ. ಕ್ಷೇತ್ರದಲ್ಲಿ ನಾಲ್ಕು ಗ್ರಾಮ ಪಂಚಾಯತಗಳು ಬರುತ್ತಿದ್ದು, ಈ ನಾಲ್ಕು ಗ್ರಾಮ ಪಂಚಾಯತಗಳನ್ನು ಹಂತ ಹಂತವಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಪಡಿಸಿ ಹಳ್ಳಿಯ ಜನರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.

ಅಭಿವೃದ್ಧಿಯ ವಿಷಯದಲ್ಲಿ ನಗರ ಮತ್ತು ಹಳ್ಳಿಗಳ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ. ನಗರ ನಿವಾಸಿಗಳಿಗೆ ಸಿಗುವ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳು ಹಳ್ಳಿಯ ಜನರಿಗೂ ಸಿಗಬೇಕೆನ್ನುವುದು ನನ್ನ ಬಯಕೆಯಾಗಿದೆ ಎಂದು ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button