*ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ ಮಾಡಿಕೊಂಡ ರೈತರು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಭೂಮಿ ನೀಡಿದವರಿಗೆ ಸರ್ಕಾರದಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಬುಧವಾರ ಜಪ್ತಿ ಪಡಿಸಿಕೊಂಡರು.
2008ರಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ರೈತರು 270 ಎಕರೆ ಜಮೀನು ನೀಡಿದ್ದರು. ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿತ್ತು. ಇದಕ್ಕೆ ಒಪ್ಪದ ರೈತರು ಹೆಚ್ಚಿನ ಪರಿಹಾರ ಕೋರಿ 2011 ರಲ್ಲಿ ಬೆಳಗಾವಿಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿ ಗುಂಟೆಗೆ 40 ಸಾವಿರ ರೂ. ಪರಿಹಾರ ನೀಡುವಂತೆ 2018ರಲ್ಲಿ ಆದೇಶ ನೀಡಿತ್ತು.
ಆಗ ಸಕಾಲಕ್ಕೆ ಪರಿಹಾರ ಕೈಗೆಟುಕದೇ ಇರೋದರಿಂದ ರೈತರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ, ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ 2021ರಲ್ಲಿ ನ್ಯಾಯಾಲಯ ಪುನಃ ಆದೇಶಿಸಿತ್ತು. ಪರಿಹಾರ ನೀಡದಿದ್ದರೆ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ಸೂಚಿಸಿತ್ತು. ಇಂದು ಅಥವಾ ನಾಳೆ ಪರಿಹಾರ ಸಿಗಬಹುದೆಂದು ಮೂರು ವರ್ಷಗಳಿಂದ ಕಾದ ರೈತರು ಬುಧವಾರ ಜಪ್ತಿಗೆ ಮುಂದಾದರು.
ನ್ಯಾಯಾಲಯದ ಆದೇಶದಂತೆ ಕೆಲವು ರೈತರಿಗಷ್ಟೇ ಪರಿಹಾರ ಸಿಕ್ಕಿದೆ. 20 ರೈತರಿಗೆ ಇನ್ನೂ 8 ಕೋಟಿ ಬರಬೇಕಿದೆ. ಪರಿಹಾರ ಮೊತ್ತ ಸಿಗದ್ದರಿಂದ ಬೇಸತ್ತ ರೈತರು, ನ್ಯಾಯಾಲಯದ ಸಿಬ್ಬಂದಿ ಸಮ್ಮುಖದಲ್ಲೇ ತಲಾ ಮೂರು ಕಂಪ್ಯೂಟರ್, ಕುರ್ಚಿಗಳು, ನಾಲ್ಕು ಪ್ರಿಂಟರ್ ಸೇರಿದಂತೆ ವಿವಿಧ ವಸ್ತುಗಳನ್ನು ಹೊತ್ತೊಯ್ದರು.
ನ್ಯಾಯಾಲಯದ ಆದೇಶದಂತೆ ರೈತರು ಕಚೇರಿಯಲ್ಲಿನ ಪೀಠೋಪಕರಣಗಳನ್ನು ಒಯ್ದಿದ್ದಾರೆ. ಹಣಕಾಸು ಇಲಾಖೆಗೆ ಹಣ ಬಿಡುಗಡೆ ಮಾಡಿದ ತಕ್ಷಣ ರೈತರಿಗೆ ಹಣವನ್ನು ಸಂದಾಯ ಮಾಡುತ್ತೇವೆ ಎಂದು ಉಪ ವಿಭಾಗಾಧಿಕಾರಿ ಶ್ರವಣ ನಾಯಿಕ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ