ಈಶ್ವರಪ್ಪ ವಿರುದ್ಧ ಶೇ.೪೦ ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಶೇ.೪೦ ಪರ್ಸೆಂಟ್ ಕಮೀಷನ್ ಪಡೆಯುತ್ತಿರುವ ಗಂಭೀರ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂತೋಷ್ ಅವರು ಸಿವಿಲ್ ಗುತ್ತಿಗೆದಾರರಾಗಿದ್ದು ೨೦೧೯ರ ಅವಧಿಯಲ್ಲಿ ಬೆಳಗಾವಿಯ ಹಿಂಡಲಗಾ ರಸ್ತೆ ಸೇರಿದಂತೆ ಕೆಲ ರಸ್ತೆಗಳನ್ನು ಗುತ್ತಿಗೆ ಪಡೆದು ನಿರ್ಮಾಣ ಮಾಡಿದ್ದರು. ಒಟ್ಟು ೪ ಕೋಟಿಗೂ ಹೆಚ್ಚು ಹಣ ವೆಚ್ಚವಾಗಿದೆ ಎಂದು ಹೇಳಿದ್ದರು. ಆದರೆ ರಸ್ತೆ ಕಾಮಗಾರಿ ನಡೆಸಿದ ಹಣ ಇಲಾಖೆಯಿಂದ ಸಂತೋಷ್‌ಗೆ ಸಂದಾಯವಾಗಿರಲಿಲ್ಲ.
ಈ ಕುರಿತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೂ ದೂರು ನೀಡಿದ್ದ ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.
ಇನ್ನೊಂದೆಡೆ ಸಚಿವ ಈಶ್ವರಪ್ಪ ಅವರು ಸಂತೋಷ್ ಪಾಟೀಲ್‌ಗೆ ತಾನು ಯಾವುದೇ ರಸ್ತೆ ಕಾಮಗಾರಿ ನಡೆಸುವ ಆದೇಶ ಕೊಟ್ಟಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಇನ್ನು ಇಲಾಖೆಯಿಂದಲೂ ಸಂತೋಷ್ ಅವರಿಗೆ ಯಾವುದೇ ಕಾಮಗಾರಿ ಆದೇಶ ನೀಡಿರಲಿಲ್ಲ ಎಂಬುದು ತಿಳಿದುಬಂದಿತ್ತು.
ಇನ್ನು ಸಚಿವ ಈಶ್ವರಪ್ಪ ಅವರು ಸಂತೋಷ್ ವಿರುದ್ಧ ಮಾನ ನಷ್ಟ ಮೋಕದ್ದಮೆಯನ್ನೂ ಹೂಡಿದ್ದರು.
ಈ ನಡುವೆ ವಾರದ ಹಿಂದೆ ತನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಕೆಲವರಿಗೆ ವಾಟ್ಸಾಪ್ ಸಂದೇಶ ಕಳಿಸಿ ಸಂತೋಷ್ ನಾಪತ್ತೆಯಾಗಿದ್ದರು. ಅವರ ಮೋಬೈಲ್ ಉಡುಪಿಯಲ್ಲಿ ಆಕ್ಟಿವೇಟ್ ಆಗಿದ್ದ ಹಿನ್ನೆಲೆಯಲ್ಲಿ ಉಡುಪಿ ಪೋಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ ಉಡುಪಿಯ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶಾಂಬವಿ ಲಾಡ್ಜ್ನಲ್ಲಿ ಸಂತೋಷ್ ಮೃತದೇಹ ಪತ್ತೆಯಾಗಿದೆ. ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಉಡುಪಿ ಎಸ್‌ಪಿ ವಿಷ್ಣುವರ್ಧನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ