
ಪ್ರವಾಹ : ಸರ್ಕಾರೇತರ ಸಂಘ- ಸಂಸ್ಥೆಗಳ ಸಭೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇಡೀ ಜಿಲ್ಲೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಹತ್ತು ದಿನಗಳ ಕಾಲ ಜನರನ್ನು ರಕ್ಷಿಸಿ, ಸ್ಥಳಾಂತರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಸ್ಥಳಾಂತರ ನಂತರ ಈಗ ಪುನರ್ವಸತಿ ಕಲ್ಪಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದ್ದು, ಈ ಕೆಲಸಕ್ಕೆ ಸಂಘ-ಸಂಸ್ಥೆಗಳ ನೆರವನ್ನು ಜಿಲ್ಲಾಡಳಿತ ಪಡೆದುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.
ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಆ.16) ನಡೆದ ಸರ್ಕಾರೇತರ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
327 ಗ್ರಾಮಗಳ 4.14 ಲಕ್ಷ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 497 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
ಹತ್ತು ದಿನಗಳ ಕಾಲ ರಕ್ಷಣೆ, ಸ್ಥಳಾಂತರ, ಊಟೋಪಹಾರ ಒದಗಿಸಲಾಗಿದೆ.
ಈ ಕೆಲಸದಲ್ಲಿ ಸಾರ್ವಜನಿಕರು, ದಾನಿಗಳು, ಸಂಘ-ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.
ಗ್ರಾಮಗಳ ಸ್ವಚ್ಛತೆಗೆ ಕೈಜೋಡಿಸಲು ಮನವಿ :
ಪ್ರವಾಹದಿಂದ ಬಾಧಿತಗೊಂಡಿರುವ ಗ್ರಾಮಗಳನ್ನು ಸ್ವಚ್ಛಗೊಳಿಸಿ ಸಂತ್ರಸ್ತರನ್ನು ಗ್ರಾಮಕ್ಕೆ ಕಳಿಸಬೇಕಿದೆ. ಸಂಘ-ಸಂಸ್ಥೆಗಳಿಗೆ ಗ್ರಾಮಗಳ ಪಟ್ಟಿ ನೀಡಲಾಗುವುದು. ಸ್ವಚ್ಛತೆಗೆ ಅಗತ್ಯವಿರುವ ಸಲಕರಣೆಗಳನ್ನು ಕೂಡ ಒದಗಿಸಲಾಗುವುದು. ಇವುಗಳನ್ನು ಬಳಸಿಕೊಂಡು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ಸಂತ್ರಸ್ತರಿಗೆ ಅಗತ್ಯ ನೆರವು ತಲುಪಿಸುವುದರಲ್ಲಿ ದಾನಿಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ನಡುವೆ ಜಿಲ್ಲಾಡಳಿತ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದರು.
ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟ ಹಾಗೂ ಸಂತ್ರಸ್ತರ ಪುನರ್ವಸತಿ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಮೂಲಕ ಮುಂದೆ ಮಾಡಬೇಕಿರುವ ಕೆಲಸಗಳ ಬಗ್ಗೆ ಅಪರ ಪ್ರಾದೇಶಿಕ ಆಯುಕ್ತರಾದ ರಮೇಶ್ ಕಳಸದ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಸಂಘ-ಸಂಸ್ಥೆಗಳು ಹಾಗೂ ನೆರವು ನೀಡಲು ಮುಂದಾಗಿರುವ ದಾನಿಗಳು ಜಿಲ್ಲಾಡಳಿತದ ಸಮನ್ವಯತೆಯಿಂದ ಸಂತ್ರಸ್ತರ ಪುನರ್ವಸತಿಗೆ ಕೈಜೋಡಿಸಬೇಕು ಎಂದರು.
ನಾವು ನೆರವಿಗೆ ಸಿದ್ಧ ;
ಶಾಲಾ ಮಕ್ಕಳು ಪಠ್ಯಪುಸ್ತಕ, ಬ್ಯಾಗಗಳನ್ನು ಕಳೆದುಕೊಂಡಿದ್ದಾರೆ. ಅಂತಹ ಮಕ್ಕಳಿಗೆ ಶೈಕ್ಷಣಿಕ ಕಿಟ್ ನೀಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲು 700 ಕ್ಕೂ ಅಧಿಕ ಕಾರ್ಯಕರ್ತರು ಸಿದ್ಧರಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ಪ್ರಾಂತ ಸಮಾಜ ಸೇವಾ ಸಂಸ್ಥೆಯು ಸ್ವಚ್ಛತೆ, ಸಂತ್ರಸ್ತರಿಗೆ ಒಂದು ತಿಂಗಳು ರೇಷನ್ ಒದಗಿಸಲು ತೀರ್ಮಾನಿಸಿದ್ದು, ಖಾನಾಪುರ ಮತ್ತು ಚಿಕ್ಕೋಡಿ ತಾಲ್ಲೂಕುಗಳ ಒಂದು ಸಾವಿರ ಕುಟುಂಬಗಳಿಗೆ ನಾವೇ ನೇರವಾಗಿ ಪರಿಹಾರ ತಲುಪಿಸಲಿದ್ದೇವೆ ಎಂದು ಫಾದರ್ ಪೀಟರ್ ಆಶೀರ್ವಾದ ತಿಳಿಸಿದರು.
ಜೀತೋ ಸಂಸ್ಥೆಯ ಅಮಿತ್ ಮಾತನಾಡಿ, ಜೀತೋ ಸಂಸ್ಥೆ ವತಿಯಿಂದ ಈಗಾಗಲೇ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದೇವೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ದಾನಿಗಳು ಕಳುಹಿಸುವ ಸಾಮಗ್ರಿಗಳನ್ನು ಮಹಾವೀರ ಭವನದಲ್ಲಿ ಸಂಗ್ರಹಿಸಲಾಗಿದ್ದು, ಆದ್ಯತೆಯ ಮೇರೆಗೆ ಸಂತ್ರಸ್ತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜೇಶ್ ಕುಮಾರ್ ರೋಟರಿ ಕ್ಲಬ್ ವತಿಯಿಂದ ಈಗಾಗಲೇ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಕೆಲವು ಗ್ರಾಮಗಳನ್ನು ಗುರುತಿಸಿ ನಮಗೆ ತಿಳಿಸಿದರೆ ಆ ಗ್ರಾಮಗಳಿಗೆ ತೆರಳಿ ಕೆಲಸ ಮಾಡಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ಚಾರ್ಟರ್ಡ್ ಅಕೌಂಟೆಂಟ್ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ ನೀಡುವುದರ ಜತೆಗೆ ಜಿಲ್ಲಾಡಳಿತ ನಿಗದಿಪಡಿಸಿದ ಗ್ರಾಮದಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸಲು ಸಿದ್ಧ ಎಂದು ಸಂಘದ ಪ್ರತಿನಿಧಿ ತಿಳಿಸಿದರು.
ಮದೀನಾ ಮಸೀದಿ ರಿಲೀಫ್ ಫೌಂಡೇಷನ್ ಸಲೀಂ ಮಾತನಾಡಿ, 40 ಟನ್ ಅಕ್ಕಿ ಹಾಗೂ 6000 ಕುಡಿಯುವ ನೀರಿನ ಬಾಟಲ್ ಗಳನ್ನು ಈಗಾಗಲೇ ವಿತರಿಸಿದ್ದೇವೆ. ದಾನಿಗಳು ನೀಡಿರುವ 25 ಸಾ ಬ್ಲಾಂಕೆಟ್ ಮತ್ತಿತರ ಬಗೆಯ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಬೆಳಗಾವಿ ನಗರ ಸೇರಿದಂತೆ ಗೋಕಾಕ ಮತ್ತಿತರ ತಾಲ್ಲೂಕಿನ 50ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ನೆರವಾಗಿದ್ದೇವೆ.
ಗ್ರಾಮಗಳ ಸ್ವಚ್ಛತೆಗೆ ಶ್ರಮದಾನ, ವೈದ್ಯಕೀಯ ಶಿಬಿರಗಳ ಆಯೋಜನೆ, ಔಷಧ ಸಾಮಗ್ರಿಗಳ ವಿತರಣೆ, ಆಹಾರ ಸಾಮಗ್ರಿ ವಿತರಣೆ, ಸ್ವಯಂಸೇವಕರನ್ನು ಒದಗಿಸುವುದು, ಶೌಚಾಲಯ ನಿರ್ಮಾಣ, ತ್ಯಾಜ್ಯ ವಿಲೇವಾರಿ, ನುರಿತ ಕೆಲಸಗಾರರನ್ನು ಒದಗಿಸುವುದಕ್ಕೆ ಸಿದ್ಧ ವಿರುವುದಾಗಿ ವಿವಿಧ ಸಂಘ-ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಭರವಸೆ ನೀಡಿದರು.
ಪ್ರವಾಹ ಸಂದರ್ಭದಲ್ಲಿ ಜನರ ತುರ್ತು ರಕ್ಷಣೆಗೆ ನೂರಕ್ಕೂ ಅಧಿಕ ಜನರ ತಂಡವನ್ನು ನಾವು ಹೊಂದಿದ್ದು, ಅಗತ್ಯವಿರುವಾಗ ನಮಗೆ ಕರೆ ಮಾಡಬೇಕು ಎಂದು ಬಸವರಾಜ ಹಿರೇಮಠ ಮನವಿ ಮಾಡಿಕೊಂಡರು.
ಸಂತ್ರಸ್ತರ ನೆರವಿಗೆ ಇನ್ನೂ ಒಂದು ತಿಂಗಳು ನಾವೆಲ್ಲ ತನು, ಮನ, ಧನದಿಂದ ನಾವು ಜಿಲ್ಲಾಡಳಿತದ ಜತೆ ಕೈಜೋಡಿಸಲಿದ್ದೇವೆ ಎಂದು ಮಲ್ಲೇಶಿ ಚೌಗಲೆ ಹೇಳಿದರು.
ಭಾರತ ಮಾತೆಗೆ ಜೈಕಾರ :
ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರಿದ್ದು, ಯಾವುದೇ ಸಂದರ್ಭದಲ್ಲೂ ಜಿಲ್ಲಾಡಳಿತ ನೀಡುವ ಕೆಲಸ ನೀಡಲು ಸನ್ನದ್ಧ ರಾಗಿದ್ದೇವೆ ಎಂದು ಸಮಿತಿಯ ಫೈಜಲ್ ಪಠಾಣ ಭರವಸೆ ನೀಡಿದರು.
ಒಂದು ಹಂತದಲ್ಲಿ ಭಾವುಕರಾಗಿ ಮಾತನಾಡಿದ ಫೈಜಲ್, ಹಿಂದುಸ್ತಾನ ಬಂಗಾರದ ಗಿಣಿಯಂತಹ ದೇಶ. ಇದಕ್ಕೆ ಯಾವುದೇ ತೊಂದರೆಯಾಗದಂತೆ ರಕ್ಷಿಸಲು ನಾವು ಜಾತಿಧರ್ಮ ಭೇದವಿಲ್ಲದೇ ಕೈಜೋಡಿಸುತ್ತೇವಿ ಎಂದಾಗ ಎಲ್ಲರೂ ಒಕ್ಕೊರಲಿನಿಂದ “ಭಾರತ ಮಾತಾ ಕೀ ಜೈ” ಎಂದು ಘೋಷಣೆ ಹಾಕಿದರು.
ಪ್ರವಾಹ ಸಂತ್ರಸ್ತರಿಗಾಗಿ ಸಂಘ-ಸಂಸ್ಥೆಗಳು ಇದುವರೆಗೆ ಮಾಡಿರುವ ಸಹಾಯ-ಸಹಕಾರ ದೊಡ್ಡದು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಅಗತ್ಯತೆಯನ್ನು ಆಧರಿಸಿ ಸರ್ಕಾರೇತರ ಸಂಸ್ಥೆಗಳ ಮತ್ತು ಸಾರ್ವಜನಿಕರ ನೆರವು ಪಡೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.///