Advertisement -Home Add

ಜನಸೇವಾ ಕೋವಿಡ್ ಕೇಂದ್ರಕ್ಕೆ ಸಿಲಿಂಡರ್ ದಾನ 

ಆರ್ ಎಸ್ಎಸ್ ಪ್ರೇರಿತ ಸೇವಾಭಾರತಿಯ ಕೋವಿಡ್ ಕೇಂದ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾವ್ ಸಾಹೇಬ್ ಗೋಗಟೆ ಅವರ ಜನ್ಮದಿನದ ಸ್ಮರಣಾರ್ಥ ಗೋಗಟೆ ಪರಿವಾರದ ಸದಸ್ಯರು ಬುಧವಾರ ನಗರದ ಜನಕಲ್ಯಾಣ ಟ್ರಸ್ಟ್ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಜನಸೇವಾ ಕೋವಿಡ್ ಕೇಂದ್ರಕ್ಕೆ ನಾಲ್ಕು ಆಕ್ಸಿಜನ್ ಸಿಲಿಂಡರ್ ಗಳನ್ನು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಜನಕಲ್ಯಾಣ ಟ್ರಸ್ಟ್ ಸದಸ್ಯ ಪರಮೇಶ್ವರ ಹೆಗಡೆ ಮಾತನಾಡಿ, ಉದ್ಯಮಿಯಾಗಿದ್ದ ರಾವ್ ಸಾಹೇಬ್ ಗೋಗಟೆ ಅವರ ಸಮಾಜ ಸೇವೆ ಕಾರಣದಿಂದ ಬೆಳಗಾವಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಅವರು ಕಡುಬಡತನದಲ್ಲಿ ತಮ್ಮ ದೊಡ್ಡ ಉದ್ಯಮ ಸ್ಥಾಪಿಸಿದ್ದಲ್ಲದೆ, ಸಮಾಜದ ಒಳಿತಿಗಾಗಿ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಅಪಾರ ಅರ್ಥಿಕ ಸಹಾಯ ನೀಡಿದ್ದಾರೆ ಎಂದರು.
ಜನಕಲ್ಯಾಣ ಟ್ರಸ್ಟ್ ಸದಸ್ಯ ಅಶೋಕ ಶಿಂತ್ರೆ ಮಾತನಾಡಿ, ಆರ್ ಎಸ್ಎಸ್ ಪ್ರೇರಿತ ಸೇವಾಭಾರತಿ ಕೋವಿಡ್ -19 ಲಾಕಡೌನ್ ಸಂದರ್ಭದಲ್ಲಿ ಅನೇಕ ಜನಪರ ಕಾರ್ಯ ಕೈಗೊಂಡಿದೆ. ವಲಸೆ ಕಾರ್ಮಿಕರಿಗೆ ಆಹಾರದ ಪೊಟ್ಟಣ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಊಟದ ಪೊಟ್ಟಣ ವಿತರಿಸಲಾಯಿತು. ಸದ್ಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಲಕ್ಷಣ ರಹಿತ ಕೋವಿಡ್ ಸೋಂಕಿತರ ಉಪಚಾರಕ್ಕಾಗಿ ಜನಸೇವಾ ಕೋವಿಡ್ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ 60 ರೋಗಿಗಳು ದಾಖಲಾತಿ ಪಡೆದಿದ್ದು, 45ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಶಿರೀಷ್ ಗೋಗಟೆ ಮಾತನಾಡಿ, ಜನಕಲ್ಯಾಣ ಟ್ರಸ್ಟ್, ಆರ್ ಎಸ್ಎಸ್ ಮತ್ತು ಸೇವಾಭಾರತಿಯ ಕಾರ್ಯಕರ್ತರು ಕೋವಿಡ್ ಲಾಕಡೌನ್ ಸಂದರ್ಭದಲ್ಲಿ ಮಾತ್ರವಲ್ಲದೇ, ಮೊದಲಿನಿಂದಲೂ ಜನಸೇವೆಯಲ್ಲಿ ಕಾರ್ಯಗತರಾಗಿದ್ದಾರೆ. ಕೋವಿಡ್ ಸೋಂಕಿತರ ಉಪಚಾರಕ್ಕಾಗಿ ಕೇಂದ್ರ ತೆರೆದಿರುವುದು ಶ್ಲಾಘನೀಯ ಎಂದರು.
ಸುನೀಲ ನಾಡಗೌಡ, ಸತೀಶ ಬಾಚೀಕರ್, ಆದಿ ಗಾವಡೆ ಮತ್ತು ರಘುನಂದನ ಕೊಂಡೆಬೆಟ್ಟು ಇದ್ದರು.
ಕೃಷ್ಣ ಭಟ್ ವಂದಿಸಿದರು. ದೀಪಕ ಪವಾರ ನಿರೂಪಿಸಿದರು.