P.V.Hegde Add

ಸುರೇಶ ಅಂಗಡಿಗೆ ನುಡಿ ನಮನ

ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲೆ ಘಟಕದಿಂದ  ಆಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –   ಶಿವಬಸವನಗರದ ಲಿಂಗಾಯತ ಭವನದಲ್ಲಿ ಅಖಿಲಭಾರತ ವೀರಶೈವಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ  ಲಿಂಗೈಕ್ಯರಾದ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
 ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಕೇoದ್ರ ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷ ಡಾ ಪ್ರಭಾಕರ ಕೋರೆ ಅವರು, ಸುರೇಶ ಅಂಗಡಿ ಅವರು ಸತ್ಯಶುದ್ಧ ಮನಸ್ಸಿನಿಂದ ಸಮಾಜ ಸೇವೆ ಮಾಡಿದರು. ವೀರಶೈವ ಲಿಂಗಾಯತ  ಸಮಾಜದ ಒಗ್ಗಟ್ಟಿಗೆ ಶ್ರಮಿಸಿದರು. ವಿಶಿಷ್ಟ ಸಂಸ್ಕೃತಿ ಸಂಪ್ರದಾಯಗಳನ್ನು ಹೊಂದಿರುವ ನಮ್ಮ ಸಮಾಜವು ಶಾಂತಿ ಸಾಮರಸ್ಯದಿಂದ ಇರಬೇಕೆಂದು ಬಯಸಿ ಅದರ ಅಭಿವೃದ್ಧಿಗೆ ಶ್ರಮಿಸಿದರು. ಸಮಾಜದ ಎಲ್ಲ ಬಾಂಧವರನ್ನೂ ಪ್ರೇಮದಿಂದ ಕಂಡು  ಅವರ ಬೇಡಿಕೆಗಳಿಗೆ ಸ್ಪಂದಿಸಿದರು.  ಅವರನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದರು.
ಮುಖ್ಯ ಸಚೇತಕ ಹಾಗೂ ಕೆ. ಎಲ್.ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಅವರು, ಸುರೇಶ್ ಅವರು ಬಸವಾದಿ ಪ್ರಮಥರಂತೆ ಕಾಯಕ ಯೋಗಿಗಳಾಗಿದ್ದರು. ತಮ್ಮ ಜೀವಿತದ ಅವಧಿಯ ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ಹುರುಪು ಹುಮ್ಮಸ್ಸಿನಿಂದ ಜನಸೇವೆ ಗೈದರು ಎಂದರು.
 ನ್ಯಾಯವಾದಿ  ಮಾರುತಿ ಝಿರಲಿ ಅವರು, ಸುರೇಶ ಅಂಗಡಿ ಅವರು ಮನೆ ಗೆದ್ದು ಮಾರು ಗೆಲಿದ ಶರಣರು. ಸಮಾಜವನ್ನು ತಮ್ಮ ಕುಟುಂಬದಂತೆಯೇ ಪ್ರೀತಿಸಿದರು. ಒಳ್ಳೆಯ ಗ್ರಹಸ್ಥರಾಗಿ ಧನ್ಯತೆಯನ್ನು ಅನುಭವಿಸಿದರು. ಓರ್ವ ಸಮರ್ಥ ರಾಜಕಾರಣಿಯನ್ನು ಕಳೆದುಕೊಂಡ ದುರ್ದೈವ ನಮ್ಮದಾಗಿದೆ ಎಂದರು.
ಪತ್ರಕರ್ತ ಮುರುಗೇಶ ಶಿವಪೂಜಿ ಅವರು, ಕರ್ನಾಟಕದ ಎಲ್ಲ ಪತ್ರಕರ್ತರೊಡನೆ  ಆತ್ಮೀಯ ಸಂಬಂಧವನ್ನು ಹೊಂದಿದ್ದ  ಸಚಿವ ಸುರೇಶ ಅಂಗಡಿ ಅವರು ಯಾವುದೇ ಹಮ್ಮು ಬಿಮ್ಮು, ಎಗ್ಗು ಸಿಗ್ಗುಗಳಿಲ್ಲದ ಸೌಜನ್ಯದ ಗಣಿಯಾಗಿದ್ದರು. ಅವರ ಸಾಮರಸ್ಯದ ಬದುಕು , ಬಿಡುವಿರದ ಸಮಾಜ ಸೇವೆಯ ರೀತಿ ನಮಗೆ ಮಾದರಿ ಎಂದರು.
ಸಮಾಜ ಸೇವಾಕರ್ತ ಚಂದ್ರಶೇಖರ ಬೆಂಬಳಗಿ ಅವರು, ಸುರೇಶ ನಿಜವಾದ ಅರ್ಥದಲ್ಲಿ ಜನಾನುರಾಗಿಯಾಗಿದ್ದು ಅಣ್ಣನವರ ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂಬ ತತ್ವವನ್ನು ಬದುಕಿನುದ್ದಕ್ಕೂ ಪಾಲಿಸಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷೆ  ರತ್ನಪ್ರಭಾ ಬೆಲ್ಲದ ಅವರು, ಸುರೇಶ್ ಅವರು ಅಪ್ಪಟ ಶರಣರಾಗಿದ್ದು ಆಸ್ಪತ್ರೆಯಲ್ಲಿಯೂ ಲಿಂಗಪೂಜೆಯನ್ನು ಬಿಡಲಿಲ್ಲ. ಶರಣರಂತೆ  ಸಹಭಾಂಧವರನ್ನು ಅತ್ಯಂತ ಗೌರವದಿಂದ ಕಂಡರು. ಪರವಧುವನ್ನು ಮಹಾದೇವಿಯಕ್ಕನಂತೆ ಕಂಡರು ಎಂದು ಹೇಳಿ, ಅವರು ತಮ್ಮ ಕುಟುಂಬದೊಂದಿಗೆ ಅವರು ಹೊಂದಿದ್ದ ಮಧುರ ಸಂಬಂಧವನ್ನು ಸ್ಮರಿಸಿಕೊಂಡರು.
ಕಾರಂಜಿಮಠದ ಪೂಜ್ಯ ಗುರುಸಿದ್ಧಮಹಾಸ್ವಾಮಿಗಳು ಅಂಗಡಿ ಅವರ ಜೀವನವು ಒಂದು ಪವಿತ್ರ ತೀರ್ಥಯಾತ್ರೆಯಂತಿತ್ತು. ಅದು ಸದ್ಭಾವ, ಸದ್ಭಕ್ತಿಗಳ ಸಂಗಮವಾಗಿತ್ತು. ಸುವಿಚಾರಿಗಳಾಗಿದ್ದ ಅವರು ತಪ್ಪೊಪ್ಪಿಗೆಗಳಿಗೆ ತಮ್ಮನ್ನು ಸದಾ ತೆರೆದುಕೊಂಡಿದ್ದರು. ಯಾರ ಬಗೆಗೂ ಸಿಟ್ಟು ಸೇಡವು ಇಟ್ಟುಕೊಳ್ಳದೇ ಮಗುವಿನಂತೆ ಮುಗ್ಧತೆ ತೋರುತ್ತಿದ್ದರು. ಲೇಸೆನಿಸಿಕೊಂಡು ಬದುಕಿದ ಅವರದು ಸಾರ್ಥಕ ಇರವು ಎಂದರು.
ಡಾ ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು, ಶೈಲಜಾ ಸಂಸುದ್ದಿ ಪ್ರಾರ್ಥಿಸಿದರು.
ಸಭೆಯಲ್ಲಿ  ಡಾ. ಎಫ್.ವಿ. ಮಾನ್ವಿ,  ಗುರುಬಸಪ್ಪಾ ಚೊಣ್ಣದ, ಸೋಮಲಿಂಗ ಮಾವಿನಕಟ್ಟಿ, ರಮೇಶ ಕಳಸಣ್ಣವರ , ಪ್ರಕಾಶ  ಬಾಳೆಕುಂದ್ರಿ, ಅಣ್ಣಾಸಾಹೇಬ ಕೊರಬು, ಶಿವನಗೌಡಾ ಪಾಟೀಲ್, ಮಹೇಶ ಭಾತೆ,  ಜ್ಯೋತಿ ಭಾವಿಕಟ್ಟಿ, ಪ್ರತಿಭಾ ಕಳ್ಳಿಮಠ, ಜೋತಿ ಬಾದಾಮಿ, ಆಶಾ ಯಮಕನಮರಡಿ  ಉಪಸ್ಥಿತರಿದ್ದರು.