
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಕಾಯಿತಿ, ದರೋಡೆ, ಸಾಮೂಹಿಕ ಅತ್ಯಾಚಾರ, ಅಕ್ರಮ ಶಸ್ತ್ರಾಸ್ತ್ರ ಸೇರಿ ಅನೇಕ ಪ್ರಕರಣದಲ್ಲಿ ಬೆಳಗಾವಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಲಾಗಿದೆ.
ಇಂದು ಬೆಳಗ್ಗೆ 6 ಗಂಟೆಗೆ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ರಮೇಶ ಕಿಲ್ಲಾರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬೆಳಗಿನ ಜಾವ 6ಗಂಟೆಗೆ ಬಂಧನ ಮಾಡುವಾಗ ಆರೋಪಿ ಪೊಲೀಸ್ ಪೇದೆ ಷರೀಫ್ ದಫೇದಾರ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಸಿದ್ದಾನೆ.
ಈ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಎಚ್ಚರಿಕೆ ನೀಡಲಾಗಿದೆ. ಆದರೂ ಪೊಲೀಸರ ಮೇಲೆಯೇ ದಾಳಿಗೆ ಯತ್ನಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಬಳಿಕ ಆರೋಪಿ ಕಾಲಿಗೆ ಕಿತ್ತೂರು ಪಿಎಸ್ಐ ಪ್ರವೀಣ ಗಂಗೋಳ್ಳಿಯಿಂದ ಶೂಟ್ ಮಾಡಿದ್ದಾರೆ. ಗಾಯಗೊಂಡ ಆರೋಪಿ ಹಾಗೂ ಪಿಸಿ ಇಬ್ಬರನ್ನೂ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.