Belagavi NewsBelgaum NewsKannada NewsKarnataka News

*40ಕ್ಕೂ ಹೆಚ್ಚು ಕ್ಲಬ್, ಪಬ್, ಹೋಟೆಲ್‌ಗಳ ಮೇಲೆ ಬೆಳಗಾವಿ ಪೊಲೀಸರ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಕ್ಲಬ್, ಪಬ್, ಹೋಟೆಲ್ ಹಾಗೂ ಡಾಬಾಗಳ ವಿರುದ್ಧ ಬೆಳಗಾವಿ ನಗರ ಪೊಲೀಸರು ತಡರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗಿದೆ. ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿರುವ ಎನ್ನಲಾದ ಕೆಲವು ಪ್ರತಿಷ್ಠಿತ ಕ್ಲಬ್‌ಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಕೆಲವೆಡೆ ನಿಯಮಾವಳಿಗಳನ್ನು ಉಲ್ಲಂಘಿಸಿ ಕ್ಲಬ್ ಹಾಗೂ ಪಬ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ಅತಿಯಾದ ಶಬ್ದದೊಂದಿಗೆ ಕಾರ್ಯಕ್ರಮ ನಡೆಸುತ್ತಿದ್ದ ಸ್ಥಳಗಳಿಗೂ ಪೊಲೀಸರು ಎಚ್ಚರಿಕೆ ನೀಡಿ, ನಿಯಮ ಮೀರಿದ ಕೆಲ ಕ್ಲಬ್ ಹಾಗೂ ಪಬ್‌ಗಳನ್ನು ಬಂದ್ ಮಾಡಿಸಿದ್ದಾರೆ.

ಇನ್ನು ಕೆಲವು ಕಡೆಗಳಲ್ಲಿ ಅಪ್ರಾಪ್ತರು ಪತ್ತೆಯಾಗಿದ್ದು, ಅಪ್ರಾಪ್ತರ ಪ್ರವೇಶ ತಡೆಯುವ ಉದ್ದೇಶದಿಂದ ಪೊಲೀಸರು ಐಡಿ ಕಾರ್ಡ್‌ಗಳನ್ನು ಪರಿಶೀಲಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ತಿಳಿಸಿದ್ದಾರೆ.

ರಾತ್ರಿ 11 ಗಂಟೆಯ ಬಳಿಕ ನಿಯಮಾನುಸಾರ ಎಲ್ಲಾ ಕ್ಲಬ್, ಪಬ್ ಹಾಗೂ ಸಂಬಂಧಿತ ಸ್ಥಳಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಮುಂಬರುವ ದಾಂಡಿಯಾ ಕಾರ್ಯಕ್ರಮಗಳ ವೇಳೆ ಮಹಿಳೆಯರ ಸುರಕ್ಷತೆಗೂ ವಿಶೇಷ ಆದ್ಯತೆ ನೀಡಲಾಗುವುದು. ಸಿಸಿಟಿವಿ ಮೇಲ್ವಿಚಾರಣೆ ಸೇರಿದಂತೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button