ಬೆಳಗಾವಿ ಪೊಲೀಸರ ಮೃಗೀಯ ವರ್ತನೆ; ವಿಕಲಚೇತನ ವ್ಯಕ್ತಿಯನ್ನು ನಡುರಸ್ತೆಯಲ್ಲಿ ಕೆಡವಿ ಥಳಿತ; ವಿಡಿಯೋ ವೈರಲ್
ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ವಿಕಲಚೇತನ ವ್ಯಕ್ತಿಯೋರ್ವರಿಗೆ ಬೆಳಗಾವಿ ನಗರದ ಉದ್ಯಮಬಾಗ ಪೊಲೀಸರು ಥಳಿಸಿ ಕ್ರೌರ್ಯ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ಥಳಿಸಿದ ವ್ಯಕ್ತಿಯನ್ನು ನಿರಂಜನ ಚೌಗುಲೆ ಎಂದು ಗುರುತಿಸಲಾಗಿದೆ. ವಿಕಲಚೇತನ ವ್ಯಕ್ತಿಯಾಗಿರುವ ನಿರಂಜನ ಚೌಗಲೆಯನ್ನು ಉದ್ಯಮಬಾಗ ಪೊಲೀಸ್ ಠಾಣೆಯ ಐಎಸ್ಐ ಸರ್ದಾರ್ ಮತ್ತಟ್ಟಿ ಹಾಗೂ ಮಲ್ಲಪ್ಪ ಪೂಜಾರಿ ಸೇರಿದಂತೆ ಮೂವರು ಪೊಲೀಸ್ ಪೇದೆಗಳು ಖಾನಾಪುರ ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ತಡರಾತ್ರಿ ಊಟ ತೆಗೆದುಕೊಂಡು ಮನೆಗೆ ಹೊರಟ್ಟಿದ್ದಾಗ ದರ್ಪ ಮೆರೆದಿದ್ದಾರೆ.
ನಿರಂಜನ ಚೌಗುಲೆ ಬಳಿ ಇದ್ದ ಮೊಬೈಲ್ ಹಾಗೂ ಬೈಕ್ ನ್ನು ವಶಕ್ಕೆ ಪಡೆದು ನಡು ರಸ್ತೆಯಲ್ಲಿಯೇ ಲಾಠಿ ಹಾಗೂ ಬೂಟ್ ಏಟು ನೀಡಿದ್ದಾರೆ. ವಿಕಲಚೇತನ ರಸ್ತೆಯಲ್ಲಿ ನರಳಾಡಿ, ಬಿಟ್ಟುಬಿಡುವಂತೆ ಗೋಳಾಡುತ್ತಿದ್ದರೂ ಕರುಣೆ ತೋರದ ಪೊಲೀಸರು ಮನಸೋ ಇಚ್ಚೆ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಕರುಳು ಹಿಂಡುವಂತಿದೆ.
ಈ ಬಗ್ಗೆ ಮಾತನಾಡಿರುವ ನಿರಂಜನ ಚೌಗಲೆ, ನಾನು ಅಂದು ಊಟ ಪಾರ್ಸಲ್ ತೆಗೆದುಕೊಳ್ಳಲು ಹೊಟೇಲ್‌ಗೆ ಹೋಗಿದ್ದೆ. ಊಟ ಕಟ್ಟಿಸಿಕೊಂಡು ಹೊರಡುವಾಗ ಪೋಲಿಸರು ಬಂದು ತಡೆದರು. ಇಷ್ಟೊತ್ತಿಗೆ ಇಲ್ಲೇಕೆ ನಿಂತಿದ್ದೀಯಾ ಎಂದು ಏಕಾಏಕಿ ಹಲ್ಲೆ ಮಾಡಲು ಶುರು ಮಾಡಿದರು. ನಾನು ಅಂಗವಿಕಲ, ಸರಿಯಾಗಿ ನಡೆಯಲು ಆಗಲ್ಲ ಬಿಟ್ಟು ಬಿಡಿ ಎಂದು ಅಗಲಾಚಿದರೂ ಬಿಡದ ಪೊಲೀಸರು ಸುರಿಯುವ ಮಳೆಯಲ್ಲಿ ನೆಲಕ್ಕೆ ಕೆಡವಿ ಬೂಟಿನಿಂದ ಒದ್ದಿದ್ದಾರೆ. ಎರಡು ಲಾಠಿ ಮುರಿಯುವವರೆಗೆ ಹೊಡೆದಿದ್ದಾರೆ. ಕೈ ಮುಗಿದರೂ ಕೇಳಲಿಲ್ಲ, ಹೊಡೆದು ಮೊಬೈಲ್ , ಬೈಕ್ ಕಸಿದುಕೊಂಡು ಹೋದರು. ರಾತ್ರಿ ನಡೆಯಲಾಗದೇ ಬೀದಿಯಲ್ಲಿ ಮಲಗಿ, ಬೆಳಿಗ್ಗೆ ಮನೆಗೆ ಬಂದೆ ಎಂದು ಕಣ್ಣೀರಿಟ್ಟಿದ್ದಾರೆ.
ನನ್ನ ಮೇಲೆ ಒಂದು ಅಪಘಾತದ ಪ್ರಕರಣ ಬಿಟ್ಟರೆ ಯಾವ ಪ್ರಕರಣವೂ ಇಲ್ಲ. ಘಟನೆ ನಡೆದಾಗ ಕುಡಿದಿದ್ದು ನಿಜ, ಟೈಂ ಸಹ ಹೆಚ್ಚಾಗಿತ್ತು, ಆದರೆ ಪೊಲಿಸರು ಈ ರೀತಿ ಹೊಡೆಯುವಂತಹ ತಪ್ಪು ಮಾಡಿರಲಿಲ್ಲ ಎಂದು ಪೊಲೀಸರ ದೌರ್ಜನ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೈಕ್ ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬೈಕ್ ಕಿಕ್ ಹೊಡೆಯುವ ವೇಳೆ ಬಂದ ಪೊಲೀಸರು ಮನಸೋ ಇಚ್ಚೆ ಥಳಿಸಿ, ಬೂಟುಕಾಲಿನಿಂದ ಒದ್ದು ಮೃಗೀಯ ವರ್ತನೆ ತೋರಿದ್ದಾರೆ ಎಂದು ದೂರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ