*ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಗೆ ವೇಗ: ₹5.02 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಮುತಗಾ, ಬಾಳೇಕುಂದ್ರಿ, ಹೊನ್ನಿಹಾಳ, ಬಾಳೇಕುಂದ್ರಿ ಬಿ.ಕೆ., ಸುಳೇಭಾವಿ, ಮಾರಿಹಾಳ ಹಾಗೂ ಸುಳಗಾ ಯಳ್ಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಮೂಲಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಭಾನುವಾರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಒಟ್ಟು ಸುಮಾರು ₹5.02 ಕೋಟಿ ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮುತಗಾ, ಬಾಳೇಕುಂದ್ರಿ ಕೆ.ಎಚ್., ಹೊನ್ನಿಹಾಳ, ಬಾಳೇಕುಂದ್ರಿ ಬಿ.ಕೆ., ಸುಳೇಭಾವಿ ಹಾಗೂ ಮಾರಿಹಾಳ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಸುಳಗಾ ಯಳ್ಳೂರು ಗ್ರಾಮದಲ್ಲಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಮುತಗಾದಲ್ಲಿ ₹90 ಲಕ್ಷದ ಕಾಮಗಾರಿಗಳು
ಮುತಗಾ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸುಮಾರು ₹90 ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ ನೆರವೇರಿಸಿದರು.
ದೀರ್ಘಕಾಲದಿಂದ ಸಮರ್ಪಕ ರಸ್ತೆಗಳ ಕೊರತೆಯಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಎದುರಿಸುತ್ತಿದ್ದ ಸಂಚಾರ ಸಮಸ್ಯೆಗೆ ಈ ಕಾಮಗಾರಿಗಳಿಂದ ಪರಿಹಾರ ದೊರೆಯಲಿದೆ. ಮಳೆಗಾಲದಲ್ಲಿ ನೀರು ನಿಲ್ಲುವುದು ಹಾಗೂ ಚರಂಡಿ ವ್ಯವಸ್ಥೆಯ ಕೊರತೆಯಿಂದ ಉಂಟಾಗುತ್ತಿದ್ದ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಮುತಗಾ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಹಾಗೂ ಕೇಂದ್ರದಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಅಂಗನವಾಡಿಯ ಮೂಲಸೌಕರ್ಯಗಳನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳು ಹಾಗೂ ಕುಂದುಕೊರತೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ಬಾಳೇಕುಂದ್ರಿ ಕೆ.ಎಚ್.ನಲ್ಲಿ ₹75 ಲಕ್ಷದ ರಸ್ತೆ–ಚರಂಡಿ ಕಾಮಗಾರಿ
ಬಾಳೇಕುಂದ್ರಿ ಕೆ.ಎಚ್. ಗ್ರಾಮದ ಆಂತರಿಕ ಹಾಗೂ ಹೊರವಲಯದ ಪ್ರದೇಶಗಳಲ್ಲಿ ಸುಮಾರು ₹75 ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮದ ವಿವಿಧ ಭಾಗಗಳ ಸಂಪರ್ಕವನ್ನು ಸುಧಾರಿಸುವುದರೊಂದಿಗೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಹಾಗೂ ನೈರ್ಮಲ್ಯ ವ್ಯವಸ್ಥೆಯನ್ನು ಬಲಪಡಿಸುವುದು ಕಾಮಗಾರಿಗಳ ಉದ್ದೇಶವಾಗಿದೆ.
ಹೊನ್ನಿಹಾಳದಲ್ಲಿ ₹46 ಲಕ್ಷದ ಅಭಿವೃದ್ಧಿ ಕಾಮಗಾರಿ
ಹೊನ್ನಿಹಾಳ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸುಮಾರು ₹46 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಸಾರ್ವಜನಿಕರ ಸುಗಮ ಸಂಚಾರ ಹಾಗೂ ನೈರ್ಮಲ್ಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದ್ದು, ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಮೂಲಸೌಕರ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಾಳೇಕುಂದ್ರಿ ಬಿ.ಕೆ. ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸುಮಾರು ₹96 ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ರಸ್ತೆ ಹಾಗೂ ಚರಂಡಿ ವ್ಯವಸ್ಥೆಯ ಸುಧಾರಣೆಯಿಂದ ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ಮಳೆನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸಿದಂತಾಗಲಿದೆ.
ಸುಳೇಭಾವಿಯಲ್ಲಿ ₹90 ಲಕ್ಷದ ರಸ್ತೆ–ಚರಂಡಿ ಕಾಮಗಾರಿ
ಸುಳೇಭಾವಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸುಮಾರು ₹90 ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಕಾಲೋನಿಗಳಲ್ಲಿ ಸುಸಜ್ಜಿತ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರ ಸಂಚಾರ ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
ಮಾರಿಹಾಳದಲ್ಲಿ ₹1.05 ಕೋಟಿ ವೆಚ್ಚದ ಮೂರು ರಸ್ತೆ ಕಾಮಗಾರಿಗಳಿಗೆ ಚಾಲನೆ
ಮಾರಿಹಾಳ ಗ್ರಾಮದಿಂದ ರೈತರ ಹೊಲಗದ್ದೆಗಳಿಗೆ ತೆರಳುವ ಹಳ್ಳಿಮಾರ್ ರಸ್ತೆ ಸೇರಿದಂತೆ ಇನ್ನಿತರ ಎರಡು ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಸುಮಾರು ₹1.05 ಕೋಟಿ ವೆಚ್ಚದಲ್ಲಿ ಈ ಮೂರು ರಸ್ತೆ ಕಾಮಗಾರಿಗಳು ನಡೆಯಲಿದ್ದು, ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
ರೈತರು ತಮ್ಮ ಹೊಲಗಳಿಗೆ ಸುಲಭವಾಗಿ ತೆರಳಲು, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಂಚಾರ ವ್ಯವಸ್ಥೆ ಸುಧಾರಿಸಲು ಹಾಗೂ ಗ್ರಾಮೀಣ ಸಂಪರ್ಕವನ್ನು ಬಲಪಡಿಸಲು ಈ ರಸ್ತೆ ಕಾಮಗಾರಿಗಳು ಮಹತ್ವದ್ದಾಗಿವೆ.
ಈ ವೇಳೆ ಗ್ರಾಮದ ಹಿರಿಯರು, ರೈತರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ
ಇದಕ್ಕೂ ಮೊದಲು ಮಾರಿಹಾಳ ಗ್ರಾಮದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಮುಂದಿನ ವರ್ಷ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಗ್ರಾಮದಲ್ಲಿ ಅಗತ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಸಿದರು.

ಸುಳಗಾ ಯಳ್ಳೂರಿನಲ್ಲಿ ₹1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಸುಳಗಾ ಯಳ್ಳೂರು ಗ್ರಾಮದಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಗ್ರಾಮದೊಳಗಿನ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮದ ಆಂತರಿಕ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಅಭಿವೃದ್ಧಿಯೇ ಆದ್ಯತೆ
ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, “ಸಾರ್ವಜನಿಕರ ಸುಗಮ ಸಂಚಾರ, ಉತ್ತಮ ನೈರ್ಮಲ್ಯ ಹಾಗೂ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಮೂಲ ಉದ್ದೇಶ. ಕ್ಷೇತ್ರದ ಯಾವುದೇ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಬಾರದು. ಜನರ ಅಗತ್ಯಗಳಿಗೆ ಸ್ಪಂದಿಸಿ ಹಂತ ಹಂತವಾಗಿ ಎಲ್ಲ ಗ್ರಾಮಗಳಲ್ಲೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು” ಎಂದು ಹೇಳಿದರು.
ರಸ್ತೆ, ಚರಂಡಿ ಹಾಗೂ ಗ್ರಾಮೀಣ ಸಂಪರ್ಕ ವ್ಯವಸ್ಥೆ ಸುಧಾರಿಸುವ ಮೂಲಕ ಜನರ ದೈನಂದಿನ ಬದುಕನ್ನು ಸುಗಮಗೊಳಿಸುವುದರ ಜೊತೆಗೆ, ರೈತರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿವಿಧ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು, ಮಹಿಳೆಯರು, ರೈತರು ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




