ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮೇಲ್ಮನೆಗೆ ತಿಳಿಸಿದರು.
ಸದಸ್ಯ ವಿ.ಎಸ್.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿರುವ ೪ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹಾಗೂ ಬೊಧಕೇತರ ಹುದ್ದೆಗಳು ಸೇರಿದಂತೆ 5818 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 2673 ಖಾಲಿ ಹುದ್ದೆಗಳಿವೆ. ವಿದ್ಯಾರ್ಥಿಗಳ ಬೋಧನೆ ತೊಂದರೆಯಾಗದಂತೆ ಹೊರ ಗುತ್ತಿಗೆ ಆಧಾರದ ಮೇಲೆ ಅಧ್ಯಾಪಕರ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಹೊರಡಿಸಿದ ನೇಮಕಾತಿ ಅಧಿಸೂಚನೆಯಲ್ಲಿ ಉಂಟಾಗಿರುವ ವ್ಯತ್ಯಯ ಕುರಿತಂತೆ ಅಧ್ಯಾಪಕರ ಸಂಘದೊಂದಿಗೆ ಈಗಾಗಲೇ ರಾಜ್ಯಪಾಲರು ಸಭೆ ನಡೆಸಿ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಖುದ್ದಾಗಿ ನಾನು ವಿವಿಗೆ ಭೇಟಿ ನೀಡಿ ಅಧ್ಯಾಪಕರ ಸಂಘ ಹಾಗೂ ಕುಲಪತಿಗಳೊಂದಿಗೆ ಚರ್ಚಿಸಿ ನಿಯಮಾನುಸಾರ ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಕೃಷಿ ವಿ.ವಿ.ಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಕೃಷಿ ಸಂಶೋಧನ ಕೇಂದ್ರಗಳಲ್ಲಿ ಐ.ಸಿ.ಎ.ಆರ್ ನಿಂದ ಶೇ.100 ರಷ್ಟು ಅನುದಾನಿತ ಖಾಲಿ ಇರುವ 49 ಬೋಧಕರ ಹಾಗೂ 83 ಬೋಧಕೇತರ ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಲಾಗಿದೆ. ಧಾರವಾಡ ಕೃಷಿ ವಿ.ವಿ.ಯಿಂದ ಪ್ರಸ್ತಾವನೆ ಸ್ವೀಕೃತವಾಗಿದೆ ಎಂದು ತಿಳಿಸಿದರು.
ಎಸ್.ಸಿ ಹಾಗೂ ಎಸ್.ಟಿ ಫಲಾನುಭವಿಗಳ ಅನುದಾನ ಹೆಚ್ಚಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಕೋವಿಡ್ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಯಾವುದೇ ಯೋಜನೆಗಳು ಸ್ಥಗಿತಗೊಂಡಿರುವುದಿಲ್ಲ. ಸ್ವಯಂ ಉದ್ಯೋಗ ಯೋಜನೆಯಡಿ ಹೆಚ್ಚು ಜನರಿಗೆ ನೆರವು ನೀಡಲು ಸಾಲ ಮತ್ತು ಸಹಾಯ ಧನ ನೀಡುವ ಮೊತ್ತವನ್ನು ಪರಿಷ್ಕರಿಸಲಾಗಿದೆ. ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಯು.ಬಿ.ವೆಂಕಟೇಶ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕೋವಿಡ್-19 ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸಿತ್ತಿರುವ ಯಾವುದೇ ಯೋಜನೆ ಕುಂಠಿತಗೊಂಡಿರುವುದಿಲ್ಲ. ಆದರೆ ಕೋವಿಡ್-19 ಹಿನ್ನಲೆಯಲ್ಲಿ ನಿಗಮದಿಂದ ಅನುಷ್ಠಾನ ಮಾಡುತ್ತಿರುವ ಸ್ವಯಂ ಉದ್ಯೋಗ ಯೋಜನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳಿಗೆ ಸಹಾಯಧನ ಮೊತ್ತವನ್ನು ಪರಿಷ್ಕರಿಸಲಾಗಿದೆ. ಕಳೆದ ಎರೆಡು ವರ್ಷದಲ್ಲಿ 7581 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಪೈಕಿ 7464 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಯಾವುದೇ ಯೋಜನೆಗಳು ಸ್ಥಗಿತಗೊಂಡಿಲ್ಲ ಎಂದು ತಿಳಿಸಿದರು.
ಕಾಫಿ ತೋಟದ ಕಾರ್ಮಿಕರಿಗೆ ಆರೋಗ್ಯ ವಿಮೆ; ಕೇಂದ್ರದಿಂದ ನೆರವಿಗೆ ಕ್ರಮ: ಸಚಿವ ಮುನಿರತ್ನ
ರಾಜ್ಯದಲ್ಲಿರುವ ಸಣ್ಣ ಕಾಫಿ ಬೆಳೆಗಾರರು ಹಾಗೂ ಕಾಫಿ ತೋಟಗಳ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಕುರಿತಂತೆ ಕೇಂದ್ರ ನೆರವು ಪಡೆದು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ತೋಟಗಾರಿಕೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಮುನಿರತ್ನ ಅವರು ವಿಧಾನ ಪರಿಷತ್‌ಗೆ ತಿಳಿಸಿದರು.
ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕಾಫಿ ಮಂಡಳಿ ವತಿಯಿಂದ ಸಣ್ಣ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸುವ ಪ್ರಸ್ತಾವ ಸರ್ಕಾರ ಮುಂದಿಲ್ಲ. ಆದಾಗ್ಯೂ ಪ್ಲಾಂಟೇಷನ್ ಕಾರ್ಮಿಕ ಕಾಯ್ದೆ 1951ರ ಅವಕಾಶಗಳ ವ್ಯಾಪ್ತಿಗೆ ಒಳಪಟ್ಟಿದ್ದು ಸದರಿ ಕಾಯ್ದೆಯಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ರಾಜ್ಯ ರಸ್ತೆ ಸಾರಿಗೆ ನಿಗಮ ಖಾಸಗೀಕರಣ ಇಲ್ಲ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್‌ನಲ್ಲಿಂದು ಸದಸ್ಯ ಮುನಿರಾಜುಗೌಡ ಅವರ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಅವರು ಬೆಂಗಳೂರು ಬಿ.ಎಂ.ಟಿ.ಸಿ ಸಂಸ್ಥೆಯು ನಷ್ಟದಲ್ಲಿದ್ದರೂ ಖಾಸಗೀಕರಣ ಮಾಡುವುದಿಲ್ಲ. ಈ ಸಂಸ್ಥೆಯ ಹಳೇಯ ಬಸ್ಸುಗಳು ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಕಾಲ ಕಾಲಕ್ಕೆ ಹರಾಜು ಮಾಡಲಾಗುತ್ತದೆ. ಕೋವಿಡ್ ಹಿನ್ನಲೆಯಲ್ಲಿ ಬಿ.ಎಂ.ಟಿ.ಸಿ ವ್ಯಾಪ್ತಿಯಲ್ಲಿ ಹವಾನಿಯಂತ್ರಿತ ಬಸ್‌ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕಾರ್ಯಚರಣೆಗೊಳ್ಳುತ್ತಿದೆ ಎಂದು ತಿಳಿಸಿದರು.
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ನಾಲ್ಕನೇ ಹಂತದ ಕೃಷ್ಣಾ ಮೇಲ್ಡಂಡೆ, ಮಹದಾಯಿ, ಎತ್ತಿನ ಹೊಳೆ ಹಾಗೂ ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್‌ಲ್ಲಿಂದು 2021-22ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಧನ ವಿನಯೋಗ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದರು.
ಅನುಷ್ಠಾನದ ವಿಳಂಬದಿಂದಾಗಿ ನೀರಾವರಿ ಯೋಜನೆಗಳ ವೆಚ್ಚ ಅಧಿಕವಾಗುತ್ತಿದೆ. ಯೋಜನೆಗಳ ಭೂ ಸ್ವಾಧೀನ ಪರಿಹಾರ ಹಾಗೂ ಪುರ್ನವಸತಿವಾಗಿ ಹಣ ಬಿಡುಗಡೆ ಮಾಡಲಾಗಿದೆ. ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಲಾಗುತ್ತಿದೆ. ಎತ್ತಿನ ಹೊಳೆ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಮೇಕೆದಾಟು ಯೋಜನೆ ಬಗ್ಗೆ ಬದ್ದತೆಯಿದೆ. ಕಾವೇರಿ ನದಿ ಪ್ರಾಧಿಕಾರದಿಂದ ಅನುಮತಿ ಪಡೆದು ಅಣೆಕಟ್ಟು ನಿರ್ಮಿಸಲಾಗುವುದು. ಈಗಾಗಲೇ ಪರಿಸರ ಇಲಾಖೆ ಅನುಮತಿ ಪತ್ರ ಪಡೆಯಲಾಗಿದೆ ಎಂದರು.
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ 5 ವರ್ಷದವರೆಗೆ ಜಿ.ಎಸ್.ಟಿ. ಪರಿಹಾರ ನೀಡಲು ನಿರ್ಧರಿಸಿದಾಗ ಸಂಸತ್ತಿನಲ್ಲಿ ಎಲ್ಲಾ ರಾಜ್ಯಗಳು ಒಪ್ಪಿಕೊಂಡಿವೆ. ಕೇಂದ್ರ ಸರ್ಕಾರ 2017 ರಿಂದ 2021 ನವೆಂಬರ್ ವರೆಗೆ ಒಟ್ಟು 50734 ಕೋಟಿ ರೂಪಾಯಿಗಳ ಜಿ.ಎಸ್.ಟಿ ತೆರಿಗೆ ಸಂಗ್ರಹದ ಪಾಲನ್ನು ರಾಜ್ಯಕ್ಕೆ ನೀಡಿದೆ. ಕೋವಿಡ್ ಸಂದರ್ಭದಲ್ಲಿಯೂ ಕಂದಾಯ ಸಂಗ್ರಹಣೆಗೆ ಒತ್ತು ನೀಡಲಾಗಿದೆ. ಕಂದಾಯ, ತೆರಿಗೆ ಸಂಗ್ರಹಿಸುವ ಇಲಾಖೆಗಳ ಉನ್ನತ ಮಟ್ಟದ ಸಭೆ ನಡೆಸಿ ಸೂಕ್ಷ್ಮ ಮಟ್ಟದ ಪರಿಶೀಲನೆ ಮಾಡಿ ಹೊಸ ತೆರಿಗೆಗಳ ನೋಂದಣಿಗೆ ಸೂಚಿಸಲಾಗಿದೆ. ಜಿ.ಎಸ್.ಟಿ.ಯಿಂದ ಹೊರಗುಳಿದಿದ್ದ ಅಡಿಕೆಯ ಮೇಲೆ ಜಿ.ಎಸ್.ಟಿ. ಹಾಕಲು ಸೂಚಿಸಿದ ಒಂದು ವಾರದ ಅವಧಿಯೊಳಗೆ 8 ಕೋಟಿ ರೂ. ಅಧಿಕ ತೆರಿಗೆ ಸಂಗ್ರಹವಾಗಿದೆ. ಬರುವ ಮೂರು ತಿಂಗಳಲ್ಲಿ ಪರಿಷ್ಕೃತ ಗುರಿ ನಿಗದಿಪಡಿಸಿ ಕಂದಾಯ ಸಂಗ್ರಹಣೆಗೆ ಒತ್ತು ನೀಡಲಾಗುವುದು. ಸರ್ಕಾರ ವಿವಿಧ ಇಲಾಖೆಗಳಲ್ಲಿ ಶೇ.೫ ರಷ್ಟು ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ.
ಮುಂದಿನ ಅಯವ್ಯಯದಲ್ಲಿ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಹಾಗೂ ಇತರೆ ಯೋಜನೆಗಳ ಹಣ ಬಿಡುಗಡೆ ಮಾಡಲಾಗುವುದು. ಅವಧಿ ಪೂರ್ಣಗೊಳ್ಳುತ್ತಿರುವ ವಿಧಾನ ಪರಿಷತ್ ಸದಸ್ಯರು ರೂಪಿಸಿದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಹಣಕಾಸು ಇಲಾಖೆ 15,000 ಶಿಕ್ಷಕರ ನೇಮಕಾತಿ ಅನುಮತಿ ನೀಡಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ 10,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್‌ನಲ್ಲಿ 2021-22 ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಧನ ವಿನಿಯೋಗ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ: ಸಚಿವ ಪ್ರಭು ಚವ್ಹಾಣ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ