ಬೆಳೆಹಾನಿ ಪರಿಹಾರ ಧನ ಹೆಚ್ಚಳ; ಖಾಸಗಿ ಶಾಲೆಗಳ ಸರ್ಕಾರಿ ವೇತನಾನುದಾನಕ್ಕೂ ಕ್ರಮ; ಸಿಎಂ ಬೊಮ್ಮಾಯಿ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಹಣಕಾಸು ಪರಿಸ್ಥಿತಿ ಅವಲೋಕಿಸಿ 1995 ಕ್ಕೂ ಮುನ್ನ ಹಾಗೂ ನಂತರದ ಖಾಸಗಿ ಶಾಲೆಗಳನ್ನು ಸರ್ಕಾರದ ವೇತನಾನುದಾನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಬೆಳಗಾವಿ ಸುವರ್ಣ ಸೌಧ ಸಮಿತಿ ಸಭಾಂಗಣದಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ. ಎಸ್ . ಹೊರಟ್ಟಿ ಅಧ್ಯಕ್ಷತೆಯಲ್ಲಿ, ಜರುಗಿದ ಖಾಸಗಿ ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.
ಜನವರಿ 30 ರ ಒಳಗಾಗಿ 1995 ಕ್ಕೂ ಮುನ್ನ ಸ್ಥಾಪಿಸಿದ ಖಾಸಗಿ ಶಾಲೆಗಳನ್ನು ಸರ್ಕಾರದ ಸಹಾಯಧನಕ್ಕೆ ಒಳಪಡಿಸಲು ಹಣಕಾಸು ಇಲಾಖೆಗೆ ಸೂಕ್ತ ದಾಖಲೆ ಹಾಗೂ ಅಂಕೆ-ಸಂಖ್ಯೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಶಾಶ್ವತ ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಹಣಕಾಸು ಪರಿಸ್ಥಿತಿ ಸುಧಾರಿಸಿದರೆ ಇವುಗಳಿಗೂ ಸಹ ಸಹಾಯಧನ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಅನುದಾನಿತ ಶಾಲೆಗಳ 500 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಜಾಹಿರಾತು ನೀತಿ ನಿಯಮ ಪಾಲನೆಯಾಗಿಲ್ಲ ಎಂದು ಶಿಕ್ಷಣ ಇಲಾಖೆ ತಡೆ ಹಿಡಿದಿದೆ. ಶಾಲಾ ಆಡಳಿತ ಮಂಡಳಿ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ ಒಂದೊಂದು ಪತ್ರಿಕೆಯಲ್ಲಿ ನೇಮಕಾತಿ ಕುರಿತು ಜಾಹಿರಾತು ನೀಡಿವೆ. ಆದರೆ ಪ್ರತಿಕೆಗಳ ರಾಜ್ಯಪುಟಗಳಲ್ಲಿವೇ ಜಾಹಿರಾತು ಪ್ರಕಟವಾಗಬೇಕು ಎಂದು ಅಧಿಕಾರಿಗಳು ಕಡ್ಡಾಯ ಮಾಡಿ ನೇಮಕಾತಿಗೆ ತಡೆ ನೀಡಿದ್ದಾರೆ. ಇದನ್ನು ತಕ್ಷಣವೇ ಸರಿಪಡಿಸಬೇಕು ಎಂದು ಸಭಾಪತಿ ಬಸವಾರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಸಭಾಪತಿಗಳ ಮಾತಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ನೇಮಕಾತಿ ಜಾಹಿರಾತು ನೀಡಿರುವ ಶಾಲಾ ಆಡಳಿತ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಯಲು ಅನುಮತಿ ನೀಡಿ. ಇಂತಹದೇ ಪುಟದಲ್ಲಿ ಜಾಹಿರಾತು ಬರಬೇಕು ಎಂಬ ನಿಯಮವಿಲ್ಲ. ಯಾವುದೇ ಪುಟದಲ್ಲಿ ಜಾಹಿರಾತು ಪ್ರಕಟಗೊಂಡರು ಅದನ್ನು ಪರಿಗಣಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಪ್ರಮಾಣ ಪತ್ರ ಪಡೆಯುವ ನಿಯಮಗಳನ್ನು ಸರಳಗೊಳಿಸಿ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದAತೆ ಶಿಕ್ಷಣ ಸಂಸ್ಥೆಗಳಿAದ ಇಂಡೆಮ್ನಿಟಿ ಬಾಂಡ್(ನಷ್ಟ ಪರಿಹಾರ) ಪಡೆದು ಶಾಲೆಗಳಿಗೆ ಮಾನ್ಯತೆ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
150 ಜನ ಸಿಬ್ಬಂದಿ ಖಾಯಂಮಾತಿ ಕ್ರಮ: ಶಿಕ್ಷಣ ಇಲಾಖೆಯಲ್ಲಿ 1997-98 ನೇ ಸಾಲಿನಲ್ಲಿ ಗುತ್ತಿಗೆ ಆಧಾರದ ಮೇಲೆ ಡಿ.ಪಿ.ಇ.ಪಿ.ಯೋಜನೆಯಡಿ ನೇಮಕಗೊಂಡ 150 ಜನ ಸಿಬ್ಬಂದಿಯನ್ನು ಸಕ್ರಮಗೊಳಿಸುವ ಕುರಿತಂತೆ ಕಾನೂನಾತ್ಮಕ ವಿಷಯಗಳನ್ನು ಪರಿಶೀಲಿಸಿ ಖಾಯಂಮಾತಿಗೆ ಕ್ರಮಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.
ಎನ್.ಪಿ.ಎಸ್. ಯೋಜನೆಯಡಿ ಖಾಸಗಿ ಶಾಲಾ ಶಿಕ್ಷಕರು: ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಖಾಸಗಿ ವ್ಯಕ್ತಿಗಳು ಸಹ ಪ್ರಾನ್ ಖಾತೆ ತೆರೆದು ಉಳಿತಾಯ ಮಾಡಬಹುದು. ಖಾಸಗಿ ಶಾಲಾ ಶಿಕ್ಷಕರನ್ನು ಸಹ ಎನ್.ಪಿ.ಎಸ್.ಯೋಜನೆಯಡಿ ತರಬೇಕು. ಶಾಲಾ ಆಡಳಿತ ಮಂಡಳಿಗಳು ಉದ್ಯೋಗಿಯ ವೇತನದಲ್ಲಿ ಶೇ.10 ರಷ್ಟು ಹಣವನ್ನು ಕಟಾಯಿಸಿ, ಇದಕ್ಕೆ ಆಡಳಿತ ಮಂಡಳಿಯಿಂದ ಶೇ.10 ರಷ್ಟು ಹಣವನ್ನು ತುಂಬಬೇಕು. ಈ ಕುರಿತು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ತಿಳಿಸಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳೆ ಹಾನಿ: 14ಲಕ್ಷ ರೈತರಿಗೆ 926 ಕೋಟಿ ರೂ. ಪರಿಹಾರ ಬಿಡುಗಡೆ: ಸಚಿವ ಆರ್.ಅಶೋಕ್
ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ 14 ಲಕ್ಷ ರೈತರ ಖಾತೆಗೆ 926.43 ಕೋಟಿ ರೂ.ಪರಿಹಾರ ಧನವನ್ನು ತಿಂಗಳ ಒಳಗಾಗಿ ಜಮಾ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಸದನದಲ್ಲಿ ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಅತಿವೃಷ್ಟಿಯಿಂದ 12.52 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಸಂಭವಿಸಿದ್ದು, ತಕ್ಷಣ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಪರಿಹಾರವನ್ನು ಒದಗಿಸಲಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮೊದಲ ಬಾರಿ 841.57 ಕೋಟಿ ರೂ. ಮತ್ತು ಎರಡನೇ ಬಾರಿ 128.92 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಎರಡು ಬಾರಿ ಕೇಂದ್ರ ತಂಡ ಆಗಮಿಸಿ ಸಮೀಕ್ಷೆ ಕಾರ್ಯ ನಡೆಸಿದೆ ಎಂದು ಹೇಳಿದರು.
ಅತಿವೃಷ್ಟಿಯಿಂದ 23,716 ಮನೆಗಳಿಗೆ ಹಾನಿ ಸಂಭವಿಸಿದ್ದು, 332.87 ಕೋಟಿ ರೂ. ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಸಂಪೂರ್ಣ ಹಾನಿಗೀಡಾದ ಮನೆಗಳಿಗೆ 5ಲಕ್ಷ ರೂ, ತೀವ್ರ ಹಾನಿಗೀಡಾದ ಮನೆಗಳಿಗೆ 3ಲಕ್ಷ ರೂ. ಹಾಗೂ ಭಾಗಶಃ ಹಾನಿಗೀಡಾದ ಮನೆಗಳಿಗೆ 50 ಸಾವಿರ ರೂ. ಪರಿಹಾರ ಒದಗಿಸಲಾಗುತ್ತಿದೆ.
ಕೊಡಗಿನಲ್ಲಿ ಹಾನಿಗೀಡಾದ ಕಾಫಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ.ನಂತೆ ಒಟ್ಟು 38.80 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಅತಿವೃಷ್ಟಿಯಿಂದ 62 ಜೀವ ಹಾನಿ ಸಂಭವಿಸಿದ್ದು, 945 ಜಾನುವಾರುಗಳು ಸಾವಿಗೀಡಾಗಿವೆ. 54,716 ಮನೆ, 3306 ಸೇತುವೆಗಳಿಗೆ, 995 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಸಂತ್ರಸ್ತರ ನೆರವಿಗೆ ಧಾವಿಸಿ ಪರಿಹಾರವನ್ನು ಪ್ರಾಮಾಣಿಕವಾಗಿ ಒದಗಿಸಿದೆ. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಊಟ ಉಪಾಹಾರದ ವ್ಯವಸ್ಥೆಯನ್ನು ಸರ್ಕಾರ ಸ್ಥಳೀಯವಾಗಿ ಕೈಗೊಂಡಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ 15ನೇ ಹಣಕಾಸು ಯೋಜನೆಯಡಿ 5270 ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಹೆಚ್ಚಿನ ಪರಿಹಾರ ಕೋರಿ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಫಾಗಿಂಗ್: ಶೀಘ್ರ ಟೆಂಡರ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಧೂಮೀಕರಣ (ಫಾಗಿಂಗ್) ಕೈಗೊಳ್ಳಲು ಎಲ್ಲಾ ವಲಯಗಳಲ್ಲಿ ಶೀಘ್ರವೇ ಟೆಂಡರ್ ಕರೆದು ಕ್ರಮವಹಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿಂದು ಶೂನ್ಯ ವೇಳೆಯಲ್ಲಿ ಸದಸ್ಯ ಯು.ಬಿ. ವೆಂಕಟೇಶ್ ಅವರು ಗಮನ ಸೆಳೆದ ವಿಷಯಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿಗಳು ಮಾಧ್ಯಮದಲ್ಲಿ ಬಿತ್ತರವಾದ ವರದಿ ಕುರಿತಂತೆ ಎಲ್ಲಾ ವಲಯಗಳ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಯಲಹಂಕ ವಲಯದಲ್ಲಿ ಟೆಂಡರ್ ಮೂಲಕ ಸೊಳ್ಳೆ ನಿಯಂತ್ರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ರಾಜರಾಜೇಶ್ವರಿ ನಗರದಲ್ಲಿ ಟೆಂಡರ್ ಕರೆಯಲು ಅನುಮೋದನೆಗಾಗಿ ಕಡತ ಸಲ್ಲಿಸಲಾಗಿದೆ. ಉಳಿದ ವಲಯಗಳಲ್ಲಿ ವಾರ್ಡುವಾರು ಕೊಟೇಷನ್ ಮುಖಾಂತರ ಕಾರ್ಯಾದೇಶ ನೀಡಿ ಸೊಳ್ಳೆ ನಿಯಂತ್ರಣ ಕಾರ್ಯನಿರ್ವಹಿಸಲಾಗುತ್ತದೆ. ಎಲ್ಲಾ ವಲಯಗಳಿಗೆ ಕೆಟಿಪಿಪಿ ನಿಯಮಾನುಸಾರ ಟೆಂಡರ್ ಮೂಲಕ ಫಾಗಿಂಗ್ ಕೈಗೊಳ್ಳಲು ಟೆಂಡರ್ ಸಿದ್ಧತಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರವೇ ಟೆಂಡರ್ ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಎಸ್.ಟಿ.ಗೆ ಕಾಡುಗೊಲ್ಲರ ಸೇರ್ಪಡೆ: ಕೇಂದ್ರಕ್ಕೆ ಶೀಘ್ರ ಸ್ಪಷ್ಟನೆ: ಸಚಿವ ಜೆ.ಸಿ.ಮಾಧುಸ್ವಾಮಿ
ಹಿಂದುಳಿದ ಬುಡಕಟ್ಟಿಗೆ ಸೇರಿರುವ ಅನಕ್ಷರತೆ, ಪಶುಪಾಲನೆ ವೃತ್ತಿನಿರತರಾಗಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಠ ಪಂಗಡ (ಎಸ್.ಟಿ)ಕ್ಕೆ ಸೇರಿಸಲು ಕೇಂದ್ರ ಸರ್ಕಾರ ಕೆಲವು ಸ್ಪಷ್ಟನೆಗಳನ್ನು ಕೇಳಿ ಪತ್ರ ಬರೆದಿದೆ.ಕುಲಶಾಸ್ತಿçÃಯ ಅಧ್ಯಯನ ಮಾಡಿರುವ ತಜ್ಞರ ಮೂಲಕ ಮಾಹಿತಿ ಪಡೆದು ಕೇಂದ್ರಕ್ಕೆ ಶೀಘ್ರ ಸ್ಪಷ್ಟನೆಗಳನ್ನು ಕಳುಹಿಸಲಾಗುವುದು.ಕಾಡುಗೊಲ್ಲರ ಹಿತರಕ್ಷಣೆ ಹಾಗೂ ಪೂರ್ಣ ಪ್ರಮಾಣದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಕಂಕಣಬದ್ಧವಾಗಿದೆ ಎಂದು ಕಾನೂನು,ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.
ವಿಧಾನಸಭೆಯಲ್ಲಿಂದು ನಿಯಮ 69ರಡಿ ಶಾಸಕರಾದ ಪೂರ್ಣಿಮಾ, ಕೆ.ಎಂ. ಶಿವಲಿಂಗೇಗೌಡ ಅವರು ನಡೆಸಿದ ಚರ್ಚೆಗೆ ಉತ್ತರ ಒದಗಿಸಿ ಮಾತನಾಡಿದರು.
ಕಾಡುಗೊಲ್ಲರನ್ನು ಎಸ್.ಟಿ. ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿ 2010 ರಿಂದಲೂ ಹೋರಾಟ ನಡೆಯುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದ ಡಾ. ಅನ್ನಪೂರ್ಣಮ್ಮ ಅವರ ನೇತೃತ್ವದಲ್ಲಿ ಕುಲಶಾಸ್ತ್ರಿಯ ಅಧ್ಯಯನ ಮಾಡಿ ಈ ಹಿಂದೆ 2014 ರಲ್ಲಿ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಬಹಳ ದೀರ್ಘ ಅವಧಿಯ ನಂತರ ಇತ್ತೀಚೆಗೆ ಕೇಂದ್ರ ಸರ್ಕಾರವು ಪತ್ರ ಬರೆದು ಧಾರ್ಮಿಕ ಮತ್ತು ವೈವಾಹಿಕ ಆಚರಣೆಗಳಲ್ಲಿ ಈ ಸಮುದಾಯವು ಹಿಂದೂ ಧರ್ಮಕ್ಕೆ ಹೋಲುವ ಆಚರಣೆಗಳನ್ನು ರೂಢಿಸಿಕೊಂಡಿದೆ ಎಂದು ತಿಳಿಸಿದೆ. ಇದೀಗ ಮತ್ತೆ ತಜ್ಞರ ಸಮಿತಿಯ ಮೂಲಕ ಕಾಡುಗೊಲ್ಲರು ಹಿಂದೂಗಳಿಗಿಂತ ಎಲ್ಲ ಆಚರಣೆಗಲ್ಲಿ ಶೇ. ನೂರಕ್ಕೆ ನೂರರಷ್ಟು ಭಿನ್ನರಾಗಿದ್ದಾರೆ. ರೂಢಿಗಳು, ಆಚರಣೆಗಳಲ್ಲಿ ಬುಡಕಟ್ಟು ಸಂಸ್ಕೃತಿಯಿದೆ. ಪತಿ ಮರಣ ಹೊಂದಿದರೂ ಸಹ ಮಹಿಳೆಯ ಬಳೆ ಒಡೆಯುವ, ಕುಂಕುಮ ಅಳಿಸಿ ವಿಧವೆ ಮಾಡುವ ಪದ್ಧತಿ ಇಲ್ಲದ ಏಕೈಕ ಸಮಾಜ ಕಾಡುಗೊಲ್ಲ ಜನಾಂಗವಾಗಿದೆ. ಸುಲಭವಾಗಿ ಬೆಂಕಿ, ಬಿಸಿಲು ಬೀಳದಿರುವ ಜಾಗೆಯಲ್ಲಿ ಅವರ ವಾಸಸ್ಥಳಗಳಿರುತ್ತವೆ. ಸಂಪೂರ್ಣವಾಗಿ ಕುರಿ ಕಾಯುವ ವೃತ್ತಿಯನ್ನೇ ಈ ಸಮುದಾಯ ಅವಲಂಬಿಸಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ತಜ್ಞರ ಮೂಲಕ ವರದಿ ಪಡೆದು ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಸಂಬಂಧಿಸಿದ ರಿಜಿಸ್ಟ್ರಾರ್ ಜನರಲ್ ಅವರಿಗೆ ಸ್ಪಷ್ಟನೆ ನಿಡಲಾಗುವುದು. ಎಲ್ಲೂ ನೆಲೆಯಿಲ್ಲದ ಈ ಸಮುದಾಯದ ಜೊತೆಗೆ ಸರ್ಕಾರವಿದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸರ್ಕಾರ ಬದ್ಧವಾಗಿದೆ.ವಸತಿ ಸಚಿವರಾದ ವಿ.ಸೋಮಣ್ಣನವರು ವಿಶೇಷ ಕಾಳಜಿವಹಿಸಿ ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕಾಡುಗೊಲ್ಲರಿಗೆ ಸುಮಾರು 20 ಸಾವಿರಕ್ಕೂ ಅಧಿಕ ಮನೆಗಳನ್ನು ಒದಗಿಸಿದ್ದಾರೆ. ಗೊಲ್ಲರಹಟ್ಟಿಗಳಿಗೆ ಕುಡಿಯುವ ನೀರು,ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಕೂಡಲೇ ಪೂರ್ಣ ಪ್ರಮಾಣದ ನಿಗಮ ಸ್ಥಾಪಿಸಲಾಗುವುದು ಎಂದರು.
ಇದಕ್ಕೂ ಮುನ್ನ ಶಾಸಕಿ ಕೆ.ಪೂರ್ಣಿಮಾ,ಕೆ.ಎಂ.ಶಿವಲಿಂಗೇಗೌಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಡುಗೊಲ್ಲ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳನ್ನು ಸದನಕ್ಕೆ ವಿವರಿಸಿದರು.
ರೈತರ ಬೆಳೆ ಪರಿಹಾರ ಧನದಲ್ಲಿ ಹೆಚ್ಚಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಪ್ರಸ್ತುತ ನೀರಾವರಿ ವ್ಯಾಪ್ತಿಯಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ 13,500ರೂ. ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ 11,500ರೂ. ನೀಡಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಹೆಕ್ಟೇರ್‌ಗೆ 25,500ರೂ ದೊರೆಯಲಿದೆ. ಒಣ ಬೇಸಾಯ ಜಮೀನಿನಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ 6800 ರೂ ನೀಡಲಾಗುತ್ತಿದ್ದು, ಹೆಚ್ಚುವರಿಯಾಗಿ ಇನ್ನೂ 6800 ರೂ. ನೀಡಲು ತೀರ್ಮಾನಿಸಲಾಗಿದೆ.
ಅತಿವೃಷ್ಟಿಯಿಂದ 12.69 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಉಂಟಾಗಿದ್ದು ಪ್ರತಿಯೊಬ್ಬ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತವನ್ನು ಜಮಾ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1200 ಕೋಟಿ ರೂ. ಹೊರೆ ಉಂಟಾಗಲಿದೆ ಎಂದು ಅವರು ಹೇಳಿದರು.
ಇದೇ ರೀತಿ ಅತಿವೃಷ್ಟಿಯಿಂದ ಹಾನಿಗೀಡಾದ ತೋಟಗಾರಿಕಾ ಬೆಳೆಗಳಿಗೆ ಪ್ರಸ್ತುತ ಹೆಕ್ಟೇರ್‌ಗೆ 18 ಸಾವಿರ ರೂ. ಪರಿಹಾರ ನೀಡಲಾಗುತ್ತಿದ್ದು, ಇದಕ್ಕೆ ಹೆಚ್ಚುವರಿಯಾಗಿ 10ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ ಎಂದರು.
ಬೆಳಗಾವಿ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿ ಸಂಭವಿಸಿದ್ದು, ಪರಿಹಾರ ನೀಡಲು ಬಿಟ್ಟು ಹೋಗಿದ್ದ 7600 ಮನೆಗಳಿಗೆ ಪರಿಹಾರ ಒದಗಿಸಲು ಹೊಸದಾಗಿ ಅನುಮೋದನೆ ನೀಡಲಾಗಿದ್ದು, ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ. ಪೂರ್ಣ ಹಾನಿಗೀಡಾಗಿದ್ದ 36698 ಮನೆಗಳ ಪೈಕಿ 18589 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 7097 ಮನೆಗಳು ಬಹುತೇಕ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ಕುಡಚಿ; 7 ಬಾಂದಾರಗಳ ನಿರ್ಮಾಣಕ್ಕೆ ಪ್ರಸ್ತಾವ; ಸಚಿವ ಜೆ.ಸಿ.ಮಾಧುಸ್ವಾಮಿ
ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರದಲ್ಲಿ 13.50 ಕೋಟಿ ರೂ.ವೆಚ್ಚದಲ್ಲಿ 7 ಸರಣಿ ಬಾಂದಾರ, ಚೆಕ್‌ಡ್ಯಾಮುಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ. ಇದರಲ್ಲಿ 5 ಕೋಟಿ ರೂ.ವೆಚ್ಚದಲ್ಲಿ 2 ಸರಣಿ ಬಾಂದಾರುಗಳನ್ನು ನಿರ್ಮಿಸುವ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಕುಡಚಿ ಮತಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯ 4 ಕೆರೆಗಳಿವೆ. 2019-20 ರಲ್ಲಿ 80 ಲಕ್ಷ ರೂ.ವೆಚ್ಚದಲ್ಲಿ ಈ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 13.50 ಕೋಟಿ ರೂ.ವೆಚ್ಚದಲ್ಲಿ 7 ಸರಣಿ ಬಾಂದಾರಗಳನ್ನು ನಿರ್ಮಿಸುವ ಪ್ರಸ್ತಾವ ಇದೆ. ಇವುಗಳಲ್ಲಿ 5 ಕೋಟಿ ರೂ.ವೆಚ್ಚದಲ್ಲಿ 2 ಸರಣಿ ಬಾಂದಾರಗಳನ್ನು ನಿರ್ಮಿಸಲು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಬಾಕಿ ಉಳಿದ 5 ಕಾಮಗಾರಿಗಳನ್ನು ಅನುದಾನ ಲಭ್ಯತೆ ಆಧರಿಸಿ ಕೈಗೊಳ್ಳಲಾಗುವುದು ಎಂದರು.
ಇಂಡಿ ಏತ ನೀರಾವರಿ ಯೋಜನೆ ಹೊಸ ಪಂಪ್‌ಗಳ ಖರೀದಿಗೆ ಟೆಂಡರ್: ಸಚಿವ ಗೋವಿಂದ ಕಾರಜೋಳ
ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಏತ ನೀರಾವರಿ ಯೋಜನೆಯ ಸವಕಳಿಗೊಂಡ ಹಾಗೂ ದುರಸ್ತಿ ಅಗತ್ಯವಿರುವ ಪಂಪ್‌ಗಳನ್ನು ಬದಲಿಸಿ, ೧೦ ಕೋಟಿ ರೂ.ವೆಚ್ಚದಲ್ಲಿ ೨ ಹೊಸ ಪಂಪ್‌ಗಳ ಅಳವಡಿಕೆಗಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಸಿಂದಗಿ ಕ್ಷೇತ್ರದ ಶಾಸಕ ರಮೇಶ ಭೂಸನೂರ ಅವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಯೋಜನೆಯ ಹಂತ ೨ ರ ವ್ಯಾಪ್ತಿಯ ೦ ದಿಂದ ೯೭.೩೦ ಕಿ.ಮೀ.ವರೆಗೆ ೬ ಪಂಪ್‌ಗಳು, ಹಂತ ೩ ರ ವ್ಯಾಪ್ತಿಯ ೯೭.೩೦ ಕಿ.ಮೀ.ಯಿಂದ ೧೪೭ ನೇ ಕಿ.ಮೀ ವರೆಗೆ ನೀರಾವರಿ ಕಲ್ಪಿಸಲು ೨ ಪಂಪ್‌ಗಳನ್ನು ಅಳವಡಿಸಲಾಗಿದೆ. ಈಗಾಗಲೇ ಅಳವಡಿಸಿದ ಪಂಪ್‌ಗಳ ಸತತ ಬಳಕೆ ಹಾಗೂ ವಿದ್ಯುತ್ ವ್ಯತ್ಯಯದ ಕಾರಣಗಳಿಂದ ಯೋಜನೆಯ ಕಾಲುವೆಗಳ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ಇದನ್ನು ಸರಿದೂಗಿಸಲು ಅಚ್ಚುಕಟ್ಟಿನ ಬೇಡಿಕೆಯನುಸಾರ ಗರಿಷ್ಠ ಮೋಟಾರುಗಳನ್ನು ಚಾಲನೆಯಲ್ಲಿಟ್ಟು ನೀರು ಪೂರೈಸಲಾಗುತ್ತಿದೆ. ಈ ಸಮಸ್ಯೆ ನಿವಾರಿಸಲು ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್‌ಎಸ್) ಅಧ್ಯಯನ ಕೈಗೊಂಡು ನೀಡಿರುವ ಸಂಪ್ ಮಾಡೆಲ್ ಸ್ಟಡಿ ವರದಿ ಆಧರಿಸಿ ಪಂಪ್ ಮೋಟಾರುಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ.ಸವಕಳಿಗೊಂಡ ಹಾಗೂ ದುರಸ್ತಿ ಅಗತ್ಯವಿರುವ ಪಂಪ್‌ಗಳನ್ನು ಕ್ರಮೇಣ ಬದಲಿಸುವ ಸಲುವಾಗಿ ಹೊಸ ಪಂಪ್‌ಗಳ ಖರೀದಿಗೆ ಕೃಷ್ಣಾ ಭಾಗ್ಯ ಜಲನಿಗಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ೨೦೨೧-೨೨ ನೇ ಸಾಲಿನಲ್ಲಿ ೨ ಪಂಪ್‌ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.ಉಳಿದ ಸವಕಳಿ ಪಂಪ್‌ಗಳನ್ನು ಮುಂದಿನ ಕ್ಲೋಜರ್ ಅವಧಿಯೊಳಗಾಗಿ ಬದಲಾಯಿಸಲಾಗುವುದು ಎಂದರು.
ಇದೇ ವಿಷಯದ ಕುರಿತು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ,ಹುನಗುಂದ ಶಾಸಕ ದೊಡ್ಡನಗೌಡ ಅವರು ಕೂಡ ಸದನದಲ್ಲಿ ಮಾತನಾಡಲು ಮುಂದಾದರು. ಸಮಯದ ಕೊರತೆಯಿಂದ ಸಭಾಧ್ಯಕ್ಷರು ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಿದರು.
ಮದ್ಯ ಮಾರಾಟ ಗುರಿ ನಿಗದಿ ಧೋರಣೆ ಕೈಬಿಡಿ ಸಭಾಧ್ಯಕ್ಷ ಕಾಗೇರಿ ಸಲಹೆ
ಮದ್ಯ ಮಾರಾಟ ಮಾಡಲು ಗುರಿ ನಿಗದಿ ಮಾಡುವ ಧೋರಣೆಯನ್ನು ಸರ್ಕಾರ ಕೈಬಿಡಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ ಪ್ರಸಂಗ ವಿಧಾನಸಭೆಯಲ್ಲಿಂದು ಜರುಗಿತು.
ಪ್ರಶ್ನೋತ್ತರ ವೇಳೆಯಲ್ಲಿ ಸಂಡೂರು ಶಾಸಕ ಈ.ತುಕಾರಾಂ ಅವರು ತಮ್ಮ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.ಅಬಕಾರಿ ಇಲಾಖೆಯು ಪ್ರತಿಯೊಂದು ಮದ್ಯದಂಗಡಿಗೆ ಗುರಿ ನಿಗದಿಪಡಿಸಿರುವುದೇ ಇದಕ್ಕೆ ಕಾರಣವಾಗಿದೆ. ಮದ್ಯ ಮಾರಾಟದ ಮೂಲಕ ಪ್ರತಿ ತಿಂಗಳು ನಿಗದಿಪಡಿಸಿದ ತೆರಿಗೆ ಸಂಗ್ರಹದ ಗುರಿ ತಲುಪಲೇಬೇಕು ಎಂದು ಆರ್ಥಿಕ ಇಲಾಖೆಯು ಅಬಕಾರಿ ಇಲಾಖೆಯ ಮೇಲೆ ಒತ್ತಡ ಹಾಕುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮುಕ್ತವಾಗಿ ಮದ್ಯ ಮಾರಾಟವಾಗುತ್ತಿದೆ. ಬಡಕುಟುಂಬಗಳ ಮಹಿಳೆಯರು, ಮಕ್ಕಳು, ಕಾರ್ಮಿಕರು ಇದರ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಬೇರೆ ಯಾವುದಾದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿತಗೊಳಿಸಲಿ ಆದರೆ ಅಬಕಾರಿ ಮಾರಾಟಕ್ಕೆ ಗುರಿ ನಿಗದಿ ಮಾಡುವುದು ಬೇಡ ಎಂದರು.
ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಹಣಕಾಸು ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿ, ಮುಖ್ಯಮಂತ್ರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆರ್ಥಿಕ ಗುರಿ ನಿಗದಿಪಡಿಸದೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ನಂತರ ಅಬಕಾರಿ ಸಚಿವ ಕೆ.ಗೋಪಾಲಯ್ಯ ಉತ್ತರಿಸಿ, ಅಕ್ರಮ ಮದ್ಯ ಮಾರಾಟ ತಡೆಗೆ ಸರ್ಕಾರ ಬದ್ಧವಾಗಿದೆ. ಈ ಕುರಿತು ಉತ್ತರ ಕರ್ನಾಟಕದ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರ ಸಭೆಯನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಸಂಡೂರು ತಾಲೂಕಿನಲ್ಲಿ ಅಕ್ರಮ ಮದ್ಯ ತಡೆಗೆ ಕಳೆದ ಮೂರು ವರ್ಷಗಳಲ್ಲಿ ೨೩೧ ದಾಲಿಗಳನ್ನು ನಡೆಸಿ,ಅಕ್ರಮ ಮದ್ಯ ವಶಪಡಿಸಿಕೊಂಡು, ೧೩ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಗಳ ಶಿಕ್ಷಕರ ನೇಮಕಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಿದೆ. ೨೦೦ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಿ ನಿರ್ವಹಿಸಲಾಗುತ್ತಿದೆ. ಈ ಶಾಲೆಗೆಳಲ್ಲಿ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿ,ಮಾತನಾಡಿದರು.
ಶಾಲೆಗಳಿಂದ ಹೊರಗುಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲು ಈಗಾಗಲೇ ಮುಚ್ಚಲ್ಪಟ್ಟ ಸರ್ಕಾರಿ ಉರ್ದು ಶಾಲೆಗಳ ಜಾಗದಲ್ಲಿ ೨೦೦ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಹೊಸದಾಗಿ ಶಾಳೆಗಳನ್ನು ಪ್ರಾರಂಭಿಸಲು ಜನಪ್ರತಿನಿಧಿಗಳಿಂದ ಪ್ರಸ್ತಾವನೆಗಳು ಬಂದಿವೆ. ಇವುಗಳ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಅಲ್ಲಿಯವರೆಗೂ ಅತಿಥಿ ಶಿಕ್ಷಕರ ಮೂಲಕ ಶಾಲೆಗಳನ್ನು ನಡೆಸಲಾಗುವುದು ಎಂದರು.
ಇದೇ ವೇಳೆಯಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ತಮ್ಮ ಕ್ಷೇತ್ರದಲ್ಲಿ ೭ ಶಾದಿ ಮಹಲ್‌ಗಳು ಮಂಜೂರಾಗಿದ್ದರೂ ಕೂಡ ಅನುದಾನ ಬಿಡುಗಡೆಯಾಗದಿರುವ ಕುರಿತು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ಕೋವಿಡ್ ಲಾಕ್‌ಡೌನ್ ಕಾರಣದಿಂದ ಹಲವಾರು ಅನುದಾನಗಳನ್ನು ಕಡಿತಗೊಳಿಸಲಾಗಿದೆ. ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಒದಗಿಸಲಾಗುವುದು ಎಂದರು.
ವಿಧಾನಮಂಡಲದ ಅಧಿವೇಶನದಲ್ಲಿ ಮಂಗಳವಾರದ ಕಲಾಪಗಳ ಸುದ್ದಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ