Belagavi NewsBelgaum NewsKannada NewsKarnataka NewsLatestPolitics

*ಬೆಳಗಾವಿ ಅಧಿವೇಶನಕ್ಕೆ ತೆರೆ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ*

17 ವಿಧೇಯಕಗಳ ಅಂಗೀಕಾರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನಕ್ಕೆ ತೆರೆಬಿದ್ದಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.

ಡಿಸೆಂಬರ್ 4ರಿಂದ ಆರಂಭವಾಗಿದ್ದ ಚಳಿಗಾಲದ ಅಧಿವೇಶನ ಇಂದು ಮುಕ್ತಾಯಗೊಂಡಿದೆ. ಅಧಿವೇಶನದ ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಈ ಬಾರಿ ಅಧಿವೇಶನದಲ್ಲಿ ದೀರ್ಘಾವಧಿ ಚರ್ಚೆಯಾಗಿದ್ದು, 17 ಬಿಲ್ ಗಳನ್ನು ಅಂಗೀಕರಿಸಲಾಗಿದೆ ಎಂದರು.

150 ಗಮನ ಸೆಳೆಯುವ ಸೂಚನೆ ಚರ್ಚೆಯಾಗಿದ್ದು ಬೆಳಗಾವಿ ಅಧಿವೇಶನ ಸಂತಸ ತಂದಿದೆ ಎಂದರು. ಉತ್ತರ ಕರ್ನಾಟಕ ಅಭಿವೃದ್ದಿ ಕುರಿತು 11 ಗಂಟೆ 11 ನಿಮಿಷ ಚರ್ಚೆಯಾಗಿದೆ. ಮುಖ್ಯಮಂತ್ರಿಗಳು ಉತ್ತರವನ್ನೂ ಕೊಟ್ಟಿದ್ದಾರೆ. ಎರಡು ದಿನಗಳ ಕಾಲ ಬರಗಾಲದ ಮೇಲೆ ಚರ್ಚೆಯಾಗಿದ್ದು, ಇದಕ್ಕೆ ಕಂದಾಯ ಸಚಿವರು ಉತ್ತರ ನೀಡಿದ್ದಾರೆ.

ಅಧಿವೇಶನದಲ್ಲಿ ಕಲಾಪಕ್ಕೆ ಶಾಸಕರು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ಆರೋಪವಿತ್ತು, ಈಬಾರಿ ಅದನ್ನು ತಪ್ಪಿಸಿದ್ದೇವೆ ಎಂದು ಹೇಳಿದರು.

ರಾಜ್ಯದ 04 ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕೃತ ನಿರ್ಣಯ,ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಬೆಳಗಾವಿಗೆ ಆಗಮಿಸಿದ ಶತಮಾನೋತ್ಸವದ ಸಂಭ್ರಮದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕುರಿತು ಖಾಸಗಿ ಸದಸ್ಯರ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ.


ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ಹಾಗೂ ಮಧ್ಯಂತರ ವರದಿ, ಸಾರ್ವಜನಿಕ ಉದ್ಯಮಗಳ ಸಮಿತಿಯ 136ನೇ ವರದಿ, ಕರ್ನಾಟಕ ವಿಧಾನಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2023-24 ನೇ ಸಾಲಿನ ಮೊದಲನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಒಟ್ಟು 09 ಅಧಿಸೂಚನೆಗಳು, 03 ಅಧ್ಯಾದೇಶಗಳು ಮತ್ತು 61 ವಾರ್ಷಿಕ ವರದಿಗಳು, 105 ಲೆಕ್ಕ ಪರಿಶೋಧನಾ ವರದಿಗಳು ಹಾಗೂ 01 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.


ನಿಯಮ 60 ರಡಿಯಲ್ಲಿ ನೀಡಿದ್ದ 04 ಸೂಚನೆಗಳ ಪೈಕಿ 03 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, ಒಟ್ಟು 05 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ. ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಾಲ್ಕು ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲು ಸಭಾಧ್ಯಕ್ಷರಿಗೆ ಸದನವು ಅಧಿಕಾರ ನೀಡಲಾಗಿದೆ.


ಒಟ್ಟು 3038 ಪ್ರಶ್ನೆಗಳನ್ನು ಶಾಸಕರಿಂದ ಸ್ವೀಕರಿಸಲಾಗಿದೆ. ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 148 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2206 ಪ್ರಶ್ನೆಗಳ ಪೈಕಿ 2010 ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲಾಗಿದೆ. ನಿಯಮ 351 ರಡಿಯಲ್ಲಿ 200 ಸೂಚನೆಗಳನ್ನು ಅಂಗೀಕರಿಸಿದ್ದು, 110 ಸೂಚನೆಗಳ ಉತ್ತರಗಳನ್ನು ನೀಡಲಾಗಿದೆ. ಗಮನ ಸೆಳೆಯುವ 174 ಸೂಚನೆಗಳ ಪೈಕಿ 140 ಸೂಚನೆಗಳನ್ನು ಸದನದಲ್ಲಿ ಚರ್ಚಿಸಲಾಗಿದೆ. ಒಟ್ಟಾರೆಯಾಗಿ 197 ಸೂಚನೆಗಳಿಗೆ ಉತ್ತರವನ್ನು ನೀಡಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 31 ಸೂಚನೆಗಳನ್ನು ಚರ್ಚಿಸಲಾಗಿದೆ. 18 ಅರ್ಜಿಗಳನ್ನು ಒಪ್ಪಿಸಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button