ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ ಮೂರು ವರ್ಷಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತಂತೆ 915 ಪ್ರಕರಣಗಳು ಮಹಿಳೆಯರ ಮೇಲೆ ದೌರ್ಜನ್ಯ ಕುರಿತಂತೆ 7304 ಪ್ರಕರಣಗಳು ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಆಚಾರ ಹಾಲಪ್ಪ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 7304 ಪ್ರಕರಣಗಳು ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲಿ ದಾಖಲಾಗಿವೆ. ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತಂತೆ 915 ಪ್ರಕರಣಗಳು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದಾಖಲಾಗಿರುವುದಾಗಿ ಮಾಹಿತಿ ಒದಗಿಸಿದ್ದಾರೆ.
ರಾಜ್ಯದಲ್ಲಿ 2018ರಿಂದ 2021 ರವರೆಗೆ 1968 ಅತ್ಯಾಚಾರ ಪ್ರಕರಣಗಳು, 18,714 ಲೈಂಗಿಕ ದೌರ್ಜನ್ಯ ಪ್ರಕರಣಗಳು, 713 ವರದಕ್ಷಣೆ ಸಾವು ಪ್ರಕರಣಗಳು, 6542 ವರದಕ್ಷಿಣೆ ಕುರುಕುಳ ಪ್ರಕರಣಗಳು ಹಾಗೂ 8609 ಗಂಡ ಹಾಗೂ ಗಂಡನ ಮನೆಯವರಿಂದ ಕಿರುಕುಳ ಎಸಗಿದ ಪ್ರಕರಣಗಳು ದಾಖಲಾಗಿವೆ. ಒಳಾಡಳಿತ ಇಲಾಖೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಿಂದ 2021ರ ಅವಧಿಯಲ್ಲಿ ಜೆ.ಜೆ. ಆ್ಯಕ್ಟ್ ನಡಿ 205 ಪ್ರಕರಣಗಳು, ಬಾಲ್ಯ ವಿವಾಹ ಕಾಯ್ದೆಯಡಿ 585 ಪ್ರಕರಣಗಳು, ಬಾಲಕಾರ್ಮಿಕ ಪದ್ಧತಿ ಕಾಯ್ದೆ ಉಲ್ಲಂಘನೆಯಡಿ 249 ಪ್ರಕರಣಗಳು, ಮಕ್ಕಳ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ 2510 ಪ್ರಕರಣಗಳು ಹಾಗೂ 6358 ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಕುರಿತು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಮಹಿಳೆಯರ ಮೇಲಿನ ಪ್ರಕರಣಗಳ ವಿಚಾರಣೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕ್ರಮವಹಿಸುತ್ತಿದೆ. ದೌರ್ಜನ್ಯಕ್ಕೊಳಗಾಗ ಎಲ್ಲಾ ಪ್ರಕರಣಗಳಿಗೆ ಒಳಾಡಳಿತ ಇಲಾಖೆಯಿಂದ ಆರ್ಥಿಕ ಪರಿಹಾರವನ್ನು ನೀಡಲಾಗುತ್ತಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕ್ರಮಕೈಗೊಳ್ಳುತ್ತಿದೆ. ಬಾಲನ್ಯಾಯ ಕಾಯ್ದೆ 2015, ಬಾಲ ನ್ಯಾಯ ನಿಯಮ 2016, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012 ಹಾಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ನಿಯಮ 2020, ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಕಾಯಿದೆ 2005, ಬಾಲಕಾರ್ಮಿಕ ನಿಷೇಧ ಕಾಯ್ದೆ 2006 ಹಾಗೂ ಬಾಲ್ಯ ವಿವಾಹ ನಿಷೇಧ ನಿಯಮ 2016 ಹಾಗೂ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಮಾರ್ಗಸೂಚಿ 2014ರನ್ವಯ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಕುರಿತಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಮಕ್ಕಳ ರಕ್ಷಣೆಗಾಗಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಮಾನ್ಯ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆ, ಬಾಲಹಿತೈಷಿ ಯೋಜನೆ, ಉಪಕಾರ್ ಯೋಜನೆ ಮತ್ತು ವಿಶೇಷ ಪಾಲನಾ ಯೋಜನೆ ಹಾಗೂ ಪ್ರಯೋಜಕತ್ವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗೂ ಕಲ್ಯಾಣಕ್ಕಾಗಿ ಸರ್ಕಾರ ಆದ್ಯತೆ ನೀಡಿದೆ ಎಂದು ಉತ್ತರಿಸಿದ್ದಾರೆ.
ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪುನ:ಶ್ಚೇತನಕ್ಕೆ ಕ್ರಮ: ಸಚಿವ ನಾಗರಾಜು
ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಪುನ:ಶ್ಚೇತನಕ್ಕೆ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಎನ್. ನಾಗರಾಜು ಎಂ.ಟಿ.ಬಿ. ಅವರು ತಿಳಿಸಿದ್ದಾರೆ.
ಸದಸ್ಯ ಪ್ರಕಾಶ ರಾಠೋಡ ಅವರ ಪ್ರಶ್ನೆಗೆ ಉತ್ತರ ನೀಡಿರುವ ಅವರು ರಾಜ್ಯದಲ್ಲಿ 60 ಸಾರ್ವಜನಿಕ ಉದ್ದಿಮೆಗಳಿವೆ. ಈ ಉದ್ಯಮಗಳಲ್ಲಿ 1,94,439 ಜನ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 21 ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆ. ಸಾರ್ವಜನಿಕ ಸಾರಿಗೆ, ವಿದ್ಯುತ್ ಪ್ರಸರಣ, ನೀರಾವರಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರದ ಉದ್ದಿಮೆಗಳು ನಷ್ಟದಲ್ಲಿವೆ. ಈ ಉದ್ದಿಮೆಗಳ ಪುನ:ಶ್ಚೇತನಕ್ಕೆ ಸಂಬಂಧಪಟ್ಟ ಆಡಳಿತ ಇಲಾಖೆಗಳು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿವೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮೂಖಾಂತರ ನಷ್ಟದಲ್ಲಿರುವ ಉದ್ದಿಮೆಗಳ ಮೌಲ್ಯಮಾಪನ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಉದ್ದಿಮೆಗಳ ಅಧಿಕಾರಿ ಹಾಗೂ ನೌಕರರ ವರ್ಗದವರ ಕಾರ್ಯಕ್ಷಮತೆ ಸಾಮರ್ಥ್ಯ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 2.14 ಲಕ್ಷ ಸಣ್ಣ ಕೈಗಾರಿಕೆ ನೋಂದಣಿ: ಸಚಿವ ಎನ್. ನಾಗರಾಜು
ಕಳೆದ ಮೂರು ವರ್ಷಗಳಲ್ಲಿ ಭಾರತ ಸರ್ಕಾರದ ಉದ್ಯೋಗ ಆಧಾರ್ ಮೆಮೊರಾಂಡಮ್ ಪೋರ್ಟಲ್‍ನಲ್ಲಿ 2,14,992 ಸೂಕ್ಷ್ಮ, ಸಣ್ಣ, ಮತ್ತು ಕೈಗಾರಿಕೆಗಳು ನೋಂದಣಿಯಾಗಿವೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಎನ್. ನಾಗರಾಜು ಎಂ.ಟಿ.ಬಿ. ಅವರು ತಿಳಿಸಿದ್ದಾರೆ.
ಸದಸ್ಯ ಹೆಚ್.ಎಂ. ರಮೇಶಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು 2017-18ನೇ ಸಾಲಿನಲ್ಲಿ 48,482, 2018-19ರಲ್ಲಿ 69,278 ಹಾಗೂ 2019-20 ರಲ್ಲಿ 97,232 ಸಣ್ಣ ಉದ್ದಿಮೆಗಳು ನೊಂದಣಿಯಾಗಿವೆ. ಈ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಕೆ.ಐ.ಎ.ಡಿ.ಬಿ. ವತಿಯಿಂದ ಕೈಗಾರಿಕಾ ಪ್ರದೇಶಕ್ಕಾಗಿ 5208 ಎಕರೆ, ಏಕ ಘಟಕ ಸಂಕೀರ್ಣಗಳಿಗಾಗಿ 4668 ಎಕರೆ ಒಳಗೊಂಡಂತೆ 9876.23 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರೌಢಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆ ಮಿತಿ ಶೇ. 7ಕ್ಕೆ ಹೆಚ್ಚಿಸಲು ಅರುಣ ಶಹಾಪುರ ಮನವಿ
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ವರ್ಗಾವಣೆ ಶೇ. 2ರ ಮಿತಿಯನ್ನು ತೆಗೆದು ಹಾಕಿ ಶೇ. 7 ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಬೇಕೆಂದು ಸದಸ್ಯ ಅರುಣ ಶಹಾಪುರ ಅವರು ವಿಧಾನ ಪರಿಷತ್ತಿನಲ್ಲಿಂದು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ರಾಜ್ಯದಲ್ಲಿ ಸಾವಿರಕ್ಕಿಂತ ಹೆಚ್ಚು ಪ್ರೌಢಶಾಲೆಗಳಿವೆ. ಶೇ. 2ರಷ್ಟು ಪ್ರಮಾಣದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಕೇವಲ 81 ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ವರ್ಗಾವಣೆಗೆ ಅವಕಾಶ ಸಿಗಲಿದೆ. ವೃಂದ ಬಲ ಪರಿಗಣಿಸುವಾಗ ಸಹ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರನ್ನು ಬೇರೆ ಬೇರೆಯಾಗಿ ಪರಿಗಣಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನಾಲ್ಕು ವಿಧೇಯಕಗಳ ಅಂಗೀಕಾರ
ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಹೆಸರಿಸುವ 2021ಸಾಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಅವರ ಪರವಾಗಿ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ಅವರು ಮಂಡಿಸಿದರು.
ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ನೆರವಿನ ಉದ್ದೇಶದ ತೆರಿಗೆ ಸುಧಾರಣೆಯ 2021ನೇ ಸಾಲಿನ ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ)ವಿಧೇಯಕವನ್ನು ಸಚಿವರಾದ ಬಿ.ಎ. ಬಸವರಾಜು ಅವರು ಮಂಡಿಸಿದರು.
ದಕ್ಷಿಣ ಭಾರತದ ಮೊದಲ ಆಯುಷ್ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತ 2021 ನೇ ಸಾಲಿನ ಕರ್ನಾಟಕ ರಾಜ್ಯ ಆಯುμï ವಿಶ್ವವಿದ್ಯಾಲಯ ವಿಧೇಯಕವನ್ನು ಆರೋಗ್ಯ ಡಾ ಕೆ. ಸುಧಾಕರ್ ಅವರು ಮಂಡಿಸಿದರು.
ಇದೇ ರೀತಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಅನುಕೂಲ ಕಲ್ಪಿಸುವ 2021ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ಎರಡನೆಯ ತಿದ್ದುಪಡಿ) ವಿಧೇಯಕವನ್ನು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ಮಂಡಿಸಿದರು. ಎಲ್ಲಾ ವಿಧೇಯಕಗಳನ್ನು ಪರ್ಯಾಲೋಚಿಸಿ ಧ್ವನಿಮತದಿಂದ ಅಂಗೀಕರಿಸಲಾಯಿತು.
ಇದೇ ವೇಳೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಅಥವಾ ಒಂದೇ ಭಾಗಗಳಿಗೆ ಹೆಚ್ಚು ಸೀಮಿತವಾಗದೆ ಎಲ್ಲಾ ಜಿಲ್ಲೆಗಳನ್ನು ಸಮನಾಗಿ ಪರಿಗಣಿಸುವ ಕುರಿತು ಅವಲೋಕಿಸಿ ನಿರ್ಧರಿಸಬೇಕು. ಇದಕ್ಕೊಂದು ಸಮಿತಿ ಇದ್ದರೆ ಸೂಕ್ತ ಎಂದು ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ಶಾಸಕರಾದ ಬಂಡೆಪ್ಪ ಖಾಶಂಪುರ ಹಾಗೂ ಕೆಲ ಇತರ ಶಾಸಕರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ತೆರಿಗೆ-ರಾಜಧನ ಸೋರಿಕೆ, ಒವರ್ ಲೋಡಿಂಗ್ ತಡೆಗೆ ಅಗತ್ಯ ಕ್ರಮದ ಭರವಸೆ
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 301 ಅನಧಿಕೃತವಾಗಿ ಗ್ರಾನೈಟ್ ಗಣಿಚಟುವಟಿಕೆ ಪ್ರಕರಣಗಳನ್ನು ಪತ್ತೆ ಹಚ್ಚಿ ಅಂತವರ ವಿರುದ್ಧ ಗಣಿ ಮತ್ತು ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ,1957 ಮತ್ತು ಕರ್ನಾಟಕ ಉಪಖನಿಜ ರಿಯಾಯ್ತಿ ನಿಯಮಗಳು 1994ರಂತೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಆಚಾರ ಹಾಲಪ್ಪ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯರಾದ ಡಾ.ತೇಜಸ್ವಿನಿಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಆಚಾರ ಹಾಲಪ್ಪ ಅವರು 4327.82ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇಲಾಖೆಯಲ್ಲಿ ತೆರಿಗೆ-ರಾಜಧನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಲಾರಿಗಳಲ್ಲಿ ಒವರ್ ಲೋಡಿಂಗ್ ಹಾಕಿಕೊಂಡು ಟ್ರಾನ್ಸ್‍ಪೋರ್ಟ್ ಮಾಡುತ್ತಿರುವುದರ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ಸದನಕ್ಕೆ ಭರವಸೆ ನೀಡಿದರು.
*1761897 ಕ್ಯೂಬಿಕ್ ಮೀಟರ್ ಗ್ರ್ಯಾನೈಟ್ ಶಿಲಾ ದಿಮ್ಮಿ ಮಾರಾಟ: ರಾಜ್ಯದಲ್ಲಿ 2017-18ರಿಂದ 2021-22ರವರೆಗೆ 1272759 ಕ್ಯೂಬಿಕ್ ಮೀಟರ್ ಸ್ಥಳೀಯವಾಗಿ ಮಾರಾಟ ಮಾಡಲಾಗಿದ್ದು,236.87 ಕೋಟಿ ರೂ. ರಾಜಧನ ಬಂದಿದೆ. ಅದೇ ರೀತಿ 489138 ಕ್ಯೂಬಿಕ್ ಮೀಟರ್ ಗ್ರಾನೈಟ್ ಶಿಲೆಯನ್ನು ರಫ್ತು ಮಾಡಲಾಗಿದ್ದು, 136.11 ಕೋಟಿ ರಾಜಧನ ಸಂಗ್ರಹವಾಗಿರುವುದು ಸೇರಿದಂತೆ ಒಟ್ಟು 1761897 ಕ್ಯೂಬಿಕ್ ಮೀಟರ್ ಗ್ರಾನೈಟ್ ಶಿಲೆ ಮಾರಾಟವಾಗಿದ್ದು 372.98ಕೋಟಿ ರೂ. ರಾಜಧನ ಬಂದಿದೆ ಎಂದು ಸಚಿವ ಆಚಾರ ಹಾಲಪ್ಪ ಅವರು ವಿವರಿಸಿದರು.
ಮಂಜೂರಾತಿ ನೀಡಿರುವ 581 ಗುತ್ತಿಗೆ ಪ್ರದೇಶಗಳಲ್ಲಿ ಅನುಮೋದಿತ ಕ್ವಾರಿಯಿಂಗ್ ಪ್ಲಾನ್/ಪರಿಸರ ಅನುಮತಿ ಪತ್ರದ ಪ್ರಕಾರ ವಾರ್ಷಿಕವಾಗಿ ಮಾರಾಟಕ್ಕೆ ಯೋಗ್ಯವಾದ ಗ್ರಾನೈಟ್ ಶಿಲಾ ದಿಮ್ಮಿ ಮಾರಾಟ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ ರಾಜ್ಯದಲ್ಲಿ ಗ್ರಾನೈಟ್ ಗಣಿಗಾರಿಕೆಗಾಗಿ 581 ಗುತ್ತಿಗೆಗಳನ್ನು 3090.25 ಎಕರೆ ಪ್ರದೇಶದಲ್ಲಿ ಮಂಜೂರು ಮಾಡಲಾಗಿದ್ದು, ಈ ಪೈಕಿ 365 ಗುತ್ತಿಗೆಗಳು 2029.05 ಎಕರೆ ಪ್ರದೇಶಗಳಲ್ಲಿ ಗಣಿ ಕಾರ್ಯ ನಡೆಯುತ್ತಿದ್ದು,216 ಗುತ್ತಿಗೆಗಳು 1061 ಎಕರೆ ಪ್ರದೇಶದಲ್ಲಿ ನಿಷ್ಕ್ರೀಯವಾಗಿರುತ್ತವೆ ಎಂದು ವಿವರಿಸಿದ ಸಚಿವ ಆಚಾರ ಅವರು ಎಕ್ಸಿಮ್ ನೀತಿ ಅನ್ವಯ ಕೇಂದ್ರವು ಖನಿಜ/ಉಪಖನಿಜಗಳನ್ನು ರಫ್ತು ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು, ಈ ವ್ಯವಹಾರವು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರಿಮಿತಿಗೆ ಒಳಪಡುವುದಿಲ್ಲ. ಆದ್ದರಿಂದ ಗ್ರಾನೈಟ್ ರಫ್ತಿನಿಂದ ಬಂದಂತಹ ವಿದೇಶಿ ವಿನಿಮಯ ವಿವರಗಳು ಇಲಾಖೆಯಲ್ಲಿ ಲಭ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
*ಕಲ್ಲು ಗಣಿಗಾರಿಕೆದಾರರಿಗೆ ವೈಜ್ಞಾನಿಕ ಭೂಗರ್ಭ ರಚನೆ ಕುರಿತು ಅಗತ್ಯ ತಿಳಿವಳಿಕೆ: ಕಲ್ಲು ಗಣಿಗಾರಿಕೆದಾರರಿಗೆ ಕಲ್ಲು ಗಣಿಗುತ್ತಿಗೆ ಪ್ರದೇಶದಲ್ಲಿ ಅನುಮೋದಿತ ಕ್ವಾರಿಯಿಂಗ್ ಪ್ಲಾನ್ ಪ್ರಕಾರ ಹಾಗೂ ನಿಯಮ 8(ಯು)ರ ಪ್ರಕಾರ ಪರಿಸರಕ್ಕೆ ಹಾನಿಯಾಗದಂತೆ ಗಣಿಗಾರಿಕೆ ನಡೆಸಲು ಗುತ್ತಿಗೆದಾರರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಸಚಿವ ಆಚಾರ ಹಾಲಪ್ಪ ಅವರು ವಿವರಿಸಿದರು.
ಕಲ್ಲುಗಣಿಗಾರಿಕೆ ಅನುಮತಿ ಕೋರಿದ ತಕ್ಷಣ ಅರ್ಜಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಆಚಾರ ಹಾಲಪ್ಪ ಅವರು ಸುಪ್ರೀಂಕೋರ್ಟ್ ಆದೇಶದ ಅನುಸಾರ ಕಲ್ಲು ಗಣಿಗುತ್ತಿಗೆ ಮಂಜೂರು ಮಾಡಲು ಪರಿಸರ ಅನುಮತಿ ಪತ್ರ ಕಡ್ಡಾಯಗೊಳಿಸಿದೆ.
ಪರಿಸರ ಅನುಮತಿ ಪತ್ರ ಪಡೆಯಲು ಅನುಮೋದಿತ ಕ್ವಾರಿಯಿಂಗ್ ಪ್ಲಾನ್ ಮತ್ತು ಮೈನ್ ಕ್ಲೋಷರ್ ಪ್ಲಾನ್ ಅವಶ್ಯವಿರುತ್ತದೆ. ಪರಿಸರ ಇಲಾಖೆಯಿಂದ ಅನುಮತಿ ಪತ್ರ ಸಲ್ಲಿಸಿದ ನಂತರವೇ ಕಲ್ಲುಗಣಿಗುತ್ತಿಗೆ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿಯಂತೆ ಭೂಕಂಪನಗಳನ್ನು ಮಾಪನ ಮಾಡಲಾಗುತ್ತಿದೆ. ಕಲಬುಗರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಾಗಾರದಲ್ಲಿ ವಿಷಯ ತಜ್ಞರು ಭಾಗವಹಿಸಿ ವರದಿ ಸಿದ್ದಗೊಳಿಸಿ ಸರಕಾರಕ್ಕೆ ಸಲ್ಲಿಸಿದ್ದು, ಕಂದಾಯ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ ಎಂದರು.
2013-24ನೇ ಸಾಲಿನಲ್ಲಿ ನಡೆದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೈಗೊಂಡ 5ನೇ ಸಣ್ಣ ನೀರಾವರಿ ಗಣತಿಯಂತೆ ರಾಜ್ಯದಲ್ಲಿ 1216000 ಬಾವಿ ಮತ್ತು ಕೊಳವೆಬಾವಿಗಳಿವೆ ಎಂದು ಅವರು ಸ್ಪಷ್ಟಪಡಿಸಿದರು.
ಹಿರಿಯ ನಾಗರಿಕರ ಪ್ರಕರಣಗಳು ಆದ್ಯತೆ ಮೇರೆಗೆ ಇತ್ಯರ್ಥಕ್ಕೆ ಸೂಚನೆ
ರಾಜ್ಯದಲ್ಲಿ ಹಿರಿಯ ನಾಗರಿಕರಿಗೆ ನಿಗದಿಪಡಿಸಿದ ಅವಧಿಯಲ್ಲಿ ಮಾಸಾಶನ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಮತ್ತು ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಎಂ.ನಾರಾಯಣಸ್ವಾಮಿ, ಡಾ.ತೇಜಸ್ವಿನಿಗೌಡ, ಗೋವಿಂದರಾಜು ಅವರ ಚುಕ್ಕೆಗುರುತಿನ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಆಚಾರ ಹಾಲಪ್ಪ ಅವರು 57,91,032 ಹಿರಿಯ ನಾಗರಿಕರಿದ್ದು,ಅವರಲ್ಲಿ ಬಡತನ ರೇಖೆಗಿಂತ ಕೆಳಗಿರುವ 42,35,609 ಹಿರಿಯ ನಾಗರಿಕರು ಮಾಸಾಶನ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ನಿಗದಿಪಡಿಸಿದ ಅವಧಿಯೊಳಗೆ ಮಾಸಾಶನ ತಲುಪುತ್ತಿಲ್ಲ; ಅಂಚೆ ಇಲಾಖೆಯವರು ಪಿಂಚಣಿ ನೀಡುವ ಸಂದರ್ಭದಲ್ಲಿ ಕಮಿಶನ್ ಪಡೆದುಕೊಂಡೇ ಮಾಸಾಶನ ನೀಡುತ್ತಾರೆ ಎಂಬ ದೂರುಗಳಿಗೆ ಕಡಿವಾಣ ಹಾಕಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
*ನಿಗದಿಪಡಿಸಿದ ಅವಧಿಯೊಳಗೆ ಹಿರಿಯ ನಾಗರಿಕರ ಪ್ರಕರಣಗಳು ಇತ್ಯರ್ಥ:ಕೇಂದ್ರ ಸರಕಾರವು ತಂದೆ- ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣಕ್ಕಾಗಿ ಅಧಿನಿಯಮ-2007ನ್ನು ರಾಜ್ಯದಲ್ಲಿ ಜಾರಿಗೊಳಿಸಿದೆ.
ದೌಜ್ಯನ್ಯ,ಶೋಷಣೆ,ವಂಚನೆಗೊಳಗಾದ ಹಾಗೂ ನಿರ್ವಹಣೆ ವೆಚ್ಚದ ಅಗತ್ಯವಿರುವ ಹಿರಿಯ ನಾಗರಿಕರು ನ್ಯಾಯಕ್ಕಾಗಿ ಈ ಅಧಿನಿಯಮದಡಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾದ ನಿರ್ವಹಣಾ ನ್ಯಾಯಮಂಡಳಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಗರಿಷ್ಠ 90 ದಿನದ ಒಳಗಾಗಿ ನ್ಯಾಯ ಪಡೆಯಬಹುದಾಗಿದೆ. ತಿಂಗಳಿಗೆ ಗರಿಷ್ಠ ರೂ.10 ಸಾವಿರಗಳ ಮಾಸಿಕ ಭತ್ಯೆ ಪಡೆಯಬಹುದಾಗಿದೆ ಎಂದು ಸಚಿವ ಆಚಾರ ಹಾಲಪ್ಪ ಅವರು ತಿಳಿಸಿದರು.
ನಿಗದಿಪಡಿಸಿದ ಅವಧಿಯೊಳಗೆ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಹಾಗೂ ಪೆಂಡಿಂಗ್ ಇರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಮತ್ತು ಈ ರೀತಿಯ ಪ್ರಕರಣಗಳ ಕುರಿತ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.
ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾದಂತವರಿಗೆ ಮಾರ್ಗದರ್ಶನ ನೀಡಲು ಹಾಗೂ ಕಾನೂನು ಸಲಹೆಗಳನ್ನು ಒದಗಿಸಲು 30 ಜಿಲ್ಲೆಗಳಲ್ಲಿ ಸ್ವಯಂಸೇವಾ ಸಂಸ್ಥೆಗಳ ಮುಖಾಂತರ ಎಸ್ಪಿ ಕಚೇರಿಗಳಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ(ಟೋಲ್ ಫ್ರೀ ಸಂ:1090) ಸ್ಥಾಪಿಸಿದ್ದು, 28 ಜಿಲ್ಲೆಗಳಲ್ಲಿ ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಕಳೆದ 2 ವರ್ಷಗಳಲ್ಲಿ ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಕೌಟುಂಬಿಕ ದೌರ್ಜನ್ಯಗಳ ಬಗ್ಗೆ ಸಹಾಯವಾಣಿಗಳಲ್ಲಿ 2193 ಪ್ರಕರಣಗಳು ದಾಖಲಾಗಿವೆ. 2020-21ನೇ ಸಾಲಿನಲ್ಲಿ 5774 ಹಿರಿಯ ನಾಗರಿಕರ ಮೇಲೆ ದೌರ್ಜನ್ಯಗಳಾಗಿರುವುದನ್ನು ಅವರು ಸದನಕ್ಕೆ ಬಿಚ್ಚಿಟ್ಟರು.
ರಾಜ್ಯದಲ್ಲಿ ಸರಕಾರದ ವೃದ್ಧಾಶ್ರಮಗಳು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಆಚಾರ ಹಾಲಪ್ಪ ಅವರು 35 ರಾಜ್ಯ ಸರಕಾರದ ಅನುದಾನಿತ ವೃದ್ಧಾಶ್ರಮಗಳು, 49 ಕೇಂದ್ರ ಸರಕಾರ ಅನುದಾನಿತ ವೃದ್ಧಾಶ್ರಮಗಳು, 150 ಖಾಸಗಿ ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ರಾಜ್ಯದಲ್ಲಿ 88ರಲ್ಲಿ 65 ಸಕ್ಕರೆ ಕಾರಖಾನೆಗಳು ಕಾರ್ಯನಿರತ
2018-19ನೇ ಹಂಗಾಮಿನಲ್ಲಿ 4 ಸಕ್ಕರೆ ಕಾರಖಾನೆಗಳು 8.93ಕೋಟಿ ರೂ.ಗಳ ಕಬ್ಬಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ. ಈ ಕಾರಖಾನೆಗಳು ಪ್ರಸ್ತುತ ನಿಷ್ಕ್ರಿಯವಾಗಿದ್ದು,ಬಾಕಿ ವಸೂಲಾತಿಗೆ ಎಲ್ಲ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. 2020-21ನೇ ಹಂಗಾಮಿನಲ್ಲಿ ಯಾವುದೇ ಕಾರಖಾನೆಗಳು ಬಾಕಿ ಉಳಿಸಿಕೊಂಡಿರುವುದಿಲ್ಲ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಮುನೇನಕೊಪ್ಪ ಅವರು ಸಕ್ಕರೆ ಕಾರಖಾನೆಗಳು 2016-17ನೇ ಹಂಗಾಮಿನಲ್ಲಿ 5,343.07 ಕೋಟಿ ಪಾವತಿಸಬೇಕಾಗಿತ್ತು;6,702.84 ಕೋಟಿ ರೂ.ಪಾವತಿಸಲಾಗಿದೆ. 2017-18ನೇ ಹಂಗಾಮಿನಲ್ಲಿ 9,851.83 ಕೋಟಿ ರೂ.ಪಾವತಿಸಬೇಕಾಗಿತ್ತು;10,605.12 ಕೋಟಿ ರೂ. ಪಾವತಿಸಲಾಗಿದೆ. 2018-19ನೇ ಸಾಲಿನಲ್ಲಿ 8.93 ಕೋಟಿ ರೂ. ಬಾಕಿ ಹೊರತುಪಡಿಸಿ 12,083.79ಕೋಟಿ ಪಾವತಿಸಲಾಗಿದೆ. 2019-20ನೇ ಸಾಲಿನಲ್ಲಿ 5.80 ಕೋಟಿ ರೂ.ಬಾಕಿ ಹೊರತುಪಡಿಸಿ 10,671.94 ಕೋಟಿ ರೂ. ಪಾವತಿಸಲಾಗಿದೆ. 2020-21ನೇ ಸಾಲಿನಲ್ಲಿ 13,324.49 ಕೋಟಿ ರೂ. ಪಾವತಿಸಬೇಕಾಗಿತ್ತು;13,533.08 ಕೋಟಿ ಪಾವತಿಸಲಾಗಿದ್ದು,ಯಾವುದೇ ರೀತಿಯ ಬಾಕಿ ಇರುವುದಿಲ್ಲ ಎಂದು ಅವರು ಸದನಕ್ಕೆ ತಿಳಿಸಿದರು.
ಕೆಲವು ಸಕ್ಕರೆ ಕಾರಖಾನೆಗಳು ಕೇಂದ್ರ ಸರಕಾರ ನಿಗದಿಪಡಿಸಿದ ಎಫ್‍ಆರ್‍ಪಿ ದರಕ್ಕಿಂತ ಹೆಚ್ಚಿಗೆ ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಿವೆ ಎಂದು ಅವರು ತಿಳಿಸಿದರು.
2019-20ನೇ ಸಾಲಿನಲ್ಲಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರಖಾನೆಯು 5.80 ಪಾವತಿಸಿರುವುದು ಬಾಕಿ ಉಳಿಸಿಕೊಂಡಿರುತ್ತದೆ;ಈ ಕುರಿತು ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.
*65 ಸಕ್ಕರೆ ಕಾರಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭ: 2021-22ನೇ ಹಂಗಾಮಿನಲ್ಲಿ ನವೆಂಬರ್ ತಿಂಗಳಿಂದ 65 ಸಕ್ಕರೆ ಕಾರಖಾನೆಗಳು ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಿವೆ. ಈ ಕಾರಖಾನೆಗಳು ನ.15ರವರೆಗೆ 112.39ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 9.60ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ ಶೇ.8.54ರಷ್ಟು ಇಳುವರಿ ಪಡೆದಿವೆ. ಈವರೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಾರಖಾನೆಗಳು 3457.53ಕೋಟಿ ರೂ.ಗಳಾಗಿದ್ದು, ಈ ಪೈಕಿ 1546.96 ಕೋಟಿ ರೂ.ಪಾವತಿಸಿವೆ. 1928.57 ಕೋಟಿ ಇನ್ನೂ ಪಾವತಿಸಬೇಕಿದೆ ಎಂದು ಸಚಿವ ಮುನೇನಕೊಪ್ಪ ಅವರು ವಿವರಿಸಿದರು.
ಕಾರಖಾನೆಗಳು ರೈತರ ಕಬ್ಬು ಬಿಲ್ಲನ್ನು ನಿಯಮಾನುಸಾರ ಪ್ರತಿ 14 ದಿನಗಳಿಗೊಮ್ಮೆ ಪಾವತಿಸಲು ಕ್ರಮಕೈಗೊಳ್ಳುತ್ತಿವೆ.ಪಾವತಿ ಮಾಡದಿದ್ದಲ್ಲಿ ಕಬ್ಬು(ನಿಯಂತ್ರಣ) ಆದೇಶ 1966 ಪ್ರಕಾರ ಶಾಸನಬದ್ಧ ನೋಟಿಸ್ ಜಾರಿಗೊಳಿಸಿ ಪಾವತಿಗೆ ಕ್ರಮಜರುಗಿಸಲಾಗುವುದು ಎಂದರು.
*08 ಸಕ್ಕರೆ ಕಾರಖಾನೆಗಳು ಖಾಸಗಿಯವರಿಗೆ ಗುತ್ತಿಗೆ: ದುಡಿಯುವ ಬಂಡವಾಳದ ಕೊರತೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ಒಟ್ಟು 08 ಸಕ್ಕರೆ ಕಾರಖಾನೆಗಳನ್ನು ಇದುವರೆಗೆ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಸಚಿವ ಮುನೇನಕೊಪ್ಪ ಅವರು ವಿವರಿಸಿದರು.
ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ಸಹಕಾರಿ ಸಕ್ಕರೆ ಕಾರಖಾನೆ, ಮುಧೋಳ ತಾಲೂಕಿನ ರನ್ನನಗರದ ರೈತರ ಸಹಕಾರಿ ಸಕ್ಕರೆ ಕಾರಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದ ಸಚಿವ ಶಂಕರ ಮುನೇನಕೊಪ್ಪ ಅವರು ಅನುತ್ಪಾದಿತ ಸಕ್ಕರೆ ಕಾರಖಾನೆಗಳನ್ನು ಬಲಪಡಿಸುವ ಸಲುವಾಗಿ ಕೇಂದ್ರದಿಂದ ಕಳೆದ ಐದು ವರ್ಷಗಳಲ್ಲಿ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 88 ನೋಂದಾಯಿತ ಸಕ್ಕರೆ ಕಾರಖಾನೆಗಳಿದ್ದು,ಇವುಗಳ ಪೈಕಿ 65 ಸಕ್ಕರೆ ಕಾರಖಾನೆಗಳು ಕಾರ್ಯನಿರತವಾಗಿವೆ. 18 ಸ್ಥಗಿತಗೊಂಡಿದ್ದು, 05 ಸಮಾಪನೆಗೊಂಡಿವೆ ಎಂದರು.
ಕಾರ್ಯನಿರತರಾಗಿರುವ 65 ಸಕ್ಕರೆ ಕಾರಖಾನೆಗಳಲ್ಲಿ 53 ಸಕ್ಕರೆ ಕಾರಖಾನೆಗಳಲ್ಲಿ ಸಹ ವಿದ್ಯುತ್ ಘಟಕಗಳನ್ನು ಹೊಂದಿದ್ದು,ಇವುಗಳ ಒಟ್ಟು ವಿದ್ಯುತ್ ಉತ್ಪಾದನಾ ಸಾಮಥ್ರ್ಯ 1516.22 ಮೆಘಾವ್ಯಾಟ್‍ಗಳಾಗಿವೆ ಎಂದು ಅವರು ವಿವರಿಸಿದ ಸಚಿವ ಮುನೇನಕೊಪ್ಪ ಅವರು 2016-17ನೇ ಸಾಲಿನಿಂದ 2020-21ರವರೆಗೆ 174828854 ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದ್ದು, 14035201 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ ಎಂದು ಅವರು ತಿಳಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಲಿಂಗಾನುಪಾತದಲ್ಲಿ ಸುಧಾರಣೆ: ಸಚಿವ ಆಚಾರ ಹಾಲಪ್ಪ
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಜಾಗೃತಿಯ ಪರಿಣಾಮ ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಸುಧಾರಣೆಯಾಗಿರುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಚಾರ ಹಾಲಪ್ಪ ಅವರು ತಿಳಿಸಿದರು.
ಸದಸ್ಯ ಎನ್.ರವಿಕುಮಾರ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನಡೆಸಿದ ಅಧ್ಯಯನದ ವರದಿ ಅನುಸಾರ 2015-16ರಲ್ಲಿ 1 ಸಾವಿರಕ್ಕೆ 941 ಇದ್ದ ಲಿಂಗಾನುಪಾತವು 2017-18ಕ್ಕೆ 984ಕ್ಕೇರಿದೆ ಎಂದರು.
ಈ ಯೋಜನೆಯು ಸಂಪೂರ್ಣ ಕೇಂದ್ರ ಸರಕಾರದ ಯೋಜನೆಯಾಗಿದ್ದು,2015 ಜ.22ರಿಂದ ಜಾರಿಗೆ ಬಂದಿದ್ದು, ಇದರಡಿ ಲಿಂಗಪಕ್ಷಪಾತ,ಲಿಂಗ ಆಯ್ಕೆ, ಹೆಣ್ಮಕ್ಕಳ ಉಳಿವು ಮತ್ತು ರಕ್ಷಣೆ ಹಾಗೂ ಹೆಣ್ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಗೊಳಿಸುವ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರದಿಂದಲೂ ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಸದಸ್ಯ ರವಿಕುಮಾರ ಅವರು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಲಿಂಗಾನುಪಾತದಲ್ಲಿ ಸುಧಾರಣೆಯಾಗುತ್ತಿದ್ದು,ವಿಶೇಷ ಒತ್ತು ನೀಡುವಂತೆ ಕೋರಿದರು.
95 ಬೃಹತ್ ಕೈಗಾರಿಕೆಗಳ ಅನುಷ್ಠಾನ ರೂ.25253.40 ಕೋಟಿ ಬಂಡವಾಳ ಹೂಡಿಕೆ: ಸಚಿವ ಮುರುಗೇಶ ನಿರಾಣಿ
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 95ಬೃಹತ್ ಕೈಗಾರಿಕೆಗಳು ಅನುಷ್ಠಾನಗೊಂಡಿದ್ದು,ಇವುಗಳಿಂದ ರೂ.25253.40 ಕೋಟಿ ಬಂಡವಾಳ ಹೂಡಿಕೆಯಾಗಿದೆ ಹಾಗೂ 1,16,151 ಜನರಿಗೆ ಉದ್ಯೋಗವಕಾಶ ದೊರೆತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಯು.ಬಿ.ವೆಂಕಟೇಶ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಇಲ್ಲಿಯವರೆಗೆ ರಾಜ್ಯ ಉನ್ನತಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ 876 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು,ಇವುಗಳಿಂದ 114250.9 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 288970 ಜನರಿಗೆ ಉದ್ಯೋಗ ಸೃಜನೆಯಾಗಲಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 2018-19 ನೇ ಸಾಲಿನಲ್ಲಿ 69278 ಘಟಕಗಳು ಸ್ಥಾಪನೆಯಾಗಿದ್ದು, 14877 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿವೆ;ಇದರಿಂದ 582943 ಜನರಿಗೆ ಉದ್ಯೋಗ ದೊರೆತಿದೆ. 2019-20ನೇ ಸಾಲಿನಲ್ಲಿ 97232 ಘಟಕಗಳು ಸ್ಥಾಪನೆಯಾಗಿದ್ದು 18598 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು 702325 ಜನರಿಗೆ ಉದ್ಯೋಗ ದೊರೆತಿದೆ. 2020-21ನೇ ಸಾಲಿನಲ್ಲಿ 82227 ಘಟಕಗಳು ಸ್ಥಾಪನೆಯಾಗಿದ್ದು,18085 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲಾಗಿದೆ ಮತ್ತು 542890 ಜನರಿಗೆ ಉದ್ಯೋಗ ದೊರೆತಿರುವ ಮಾಹಿತಿಯನ್ನು ಸದನಕ್ಕೆ ತಿಳಿಸಿದರು.
ಮೇಕ್ ಇನ್ ಇಂಡಿಯಾ ಎಂಬ ಯೋಜನೆಯು ಆತ್ಮನಿರ್ಭರ್ ಮತ್ತು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ.ಹೂಡಿಕೆಯನ್ನು ಸುಗಮಗೊಳಿಸಲು,ನಾವಿನ್ಯತೆಯನ್ನು ಪೋಷಿಸಲು,ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು ಮತ್ತು ಅತ್ಯುತ್ತಮ ದರ್ಜೆಯ ಉತ್ಪಾದನಾ ಮೂಲಸೌಕರ್ಯ ನಿರ್ಮಿಸುವ ಯೋಜನೆಯಾಗಿದೆ ಎಂದು ವಿವರಿಸಿದ ಸಚಿವ ನಿರಾಣಿ ಅವರು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಜಿಡಿಪಿಯಲ್ಲಿ ಉತ್ಪಾದನಾ ಪಾಲು 2014ನೇ ಸಾಲಿನಲ್ಲಿದ್ದ ಶೇ.16ರಿಂದ ಶೇ.25ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿತ್ತು ಹಾಗೂ ಹೆಚ್ಚುವರಿ ಉದ್ಯೋಗವಕಾಶಗಳನ್ನು ಸೃಜಿಸುವುದಾಗಿತ್ತು. ಕೋವಿಡ್ ಕಾರಣದಿಂದ ಆಗಿರುವುದಿಲ್ಲ. 2020-21ನೇ ಸಾಲಿನಲ್ಲಿ ಶೇ.17ರಷ್ಟು ಉತ್ಪಾದನಾ ಪಾಲು ಇರುತ್ತದೆ ಎಂದು ಅವರು ವಿವರಿಸಿದರು.
ಉದ್ಯಮಿಯಾಗಿ ಉದ್ಯೋಗ ನೀಡು ಎಂಬ ವಿನೂತನ ಕಾರ್ಯಕ್ರಮವನ್ನು ನಮ್ಮ ಸರಕಾರ ಜಾರಿಗೆ ತಂದಿದ್ದು, ಈ ಯೋಜನೆ ಅಡಿ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆ ಅಡಿ ಲಭ್ಯವಿರುವ ಸೌಲಭ್ಯಗಳು ಮತ್ತು ಸಹಾಯಧನದ ಕುರಿತು ತಿಳಿವಳಿಕೆ ನೀಡುವುದರ ಮೂಲಕ ಉದ್ಯಮಗಳನ್ನು ಸ್ಥಾಪಿಸಲು ಪ್ರೇರೆಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಗ್ರಾಪಂಗಳು ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದರ್ಜೆಗೇರಿಸುವಾಗ ಮೂಲಸೌಕರ್ಯ ಮತ್ತು ಅನುದಾನಕ್ಕೆ ಕ್ರಮ
ಗ್ರಾಪಂಗಳಿಂದ ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದೆರ್ಜೇಗೇರಿಸುವ ಸಂದರ್ಭದಲ್ಲಿ ಅವುಗಳಿಗೆ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಅಗತ್ಯ ಅನುದಾನ ಒದಗಿಸಲು ಕ್ರಮವಹಿಸಲಾಗುವುದು ಎಂದು ಪೌರಾಡಳಿತ,ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜು ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಆರ್.ದರ್ಮಸೇನ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಹೊಸದಾಗಿ ಮೇಲ್ದಜೇರ್ಗರುವ ಪಟ್ಟಣ ಪಂಚಾಯ್ತಿಗಳು,ಪುರಸಭೆ,ನಗರಸಭೆಗಳಿಗೆ ಅಗತ್ಯ ಮೂಲಸೌಕರ್ಯ ಮತ್ತು ಅನುದಾನ ಒದಗಿಸಲು ಸರಕಾರ ಬದ್ಧವಿದೆ ಎಂದು ಅವರು ಹೇಳಿದರು.
ಗ್ರಾಪಂಗಳು ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದರ್ಜೆಗೇರಿದ ಸಂದರ್ಭದಲ್ಲಿ ಪಿಡಿಒ ಹೊರತುಪಡಿಸಿ ಉಳಿದ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಯಾವುದೇ ಗ್ರಾಪಂಗಳು ಪಟ್ಟಣ ಪಂಚಾಯ್ತಿಗಳನ್ನಾಗಿ ಹಾಗೂ ಪುರಸಭೆ,ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರಕಾರದಲ್ಲಿ ಇರುವುದಿಲ್ಲ ಎಂದು ವಿವರಿಸಿದ ಸಚಿವ ಎಂ.ಟಿ.ಬಿ.ನಾಗರಾಜು ಅವರು ಪಟ್ಟಣ ಪಂಚಾಯ್ತಿ,ಪುರಸಭೆ,ನಗರಸಭೆಗೆ ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿರಬೇಕಾದ ಜನಸಂಖ್ಯೆ ಹಾಗೂ ಇನ್ನೀತ ನಿಯಮಗಳ ಕುರಿತು ಸದನಕ್ಕೆ ವಿವರಿಸಿದರು.
ವಿಕಲಚೇತನ ಇಲಾಖೆಯ ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ
ವಿಕಲಚೇತನರ ಇಲಾಖೆಯ ಶಿಕ್ಷಕರಿಗೆ ಹಾಗೂ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ನೀಡಲಾಗುತ್ತಿರುವ ವೇತನ ಶ್ರೇಣಿಯ ವ್ಯತ್ಯಾಸವು ಸರಕಾರದ ಗಮನಕ್ಕೆ ಬಂದಿದ್ದು, ವೇತನ ಶ್ರೇಣಿಯನ್ನು ಪರಿಷ್ಕರಿಸುವ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿದ್ದು, ಶೀಘ್ರ ನ್ಯಾಯ ಒದಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಶಶೀಲ್ ನಮೋಶಿ ಅವರು ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ವಿಕಲಚೇತನರ ಹಾಗೂ ಹಿರಿಯ ಸಬಲೀಕರಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಸರಕಾರಿ ಅಂಧ ಮತ್ತು ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿರುವ ಸಹಾಯಕ ಶಿಕ್ಷಕರಿಗೆ,ದೈಹಿಕ ಶಿಕ್ಷಣ ಶಿಕ್ಷಕರು,ಸಂಗೀತ ಶಿಕ್ಷಕರಿಗೆ ವೇತನ ಆಯೋಗದ ಶಿಫಾರಸ್ಸು ಸಂದರ್ಭದಲ್ಲಿ ವ್ಯತ್ಯಾಸವಾಗಿತ್ತು. ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ವ್ಯತ್ಯಾಸ ಸರಿಪಡಿಸಲಾಗಿದೆ;ಆದ್ರೇ ಈ ಶಿಕ್ಷಕರಿಗೆ ವ್ಯತ್ಯಾಸ ಸರಿಪಡಿಸದೇ ಅದೇ ರೀತಿಯಲ್ಲಿ ಮುಂದುವರಿದಿರುವುದರನ್ನು ಸಚಿವರು ಒಪ್ಪಿಕೊಂಡರು ಮತ್ತು ಇದು ಗಮನಕ್ಕೆ ಬಂದಿದ್ದು ಪರಿಷ್ಕರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.
ರಾಜ್ಯದಲ್ಲಿ 236561 ಬೀದಿ ಬದಿ ವ್ಯಾಪಾರಸ್ಥರು:ಸಚಿವ ಡಾ.ಅಶ್ವತ್‍ನಾರಾಯಣ
ಬೆಳಗಾವಿ ಸುವರ್ಣಸೌಧ,ಡಿ.21(ಕರ್ನಾಟಕ ವಾರ್ತೆ): ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಲು ರಾಜ್ಯ ಸರಕಾರದಿಂದ ಸರ್ವೆ ಕಾರ್ಯ ಮಾಡಲಾಗಿದ್ದು, 236561 ಬೀದಿ ಬದಿ ವ್ಯಾಪಾರಸ್ಥರನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೀದಿ ವ್ಯಾಪಾರಿಗಳ ಹಿತರಕ್ಷಣೆಗಾಗಿ ಸರಕಾರವು ಪ್ರಧಾನಮಂತ್ರಿ ಆತ್ಮನಿರ್ಭರ್ ನಿಧಿ ಯೋಜನೆ, ಮುಖ್ಯಮಂತ್ರಿಗಳ ವಿಶೇಷ ಪ್ಯಾಕೆಜ್ ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಧಾನಮಂತ್ರಿ ಆತ್ಮನಿರ್ಭರ್ ನಿಧಿ ಯೋಜನೆ ಅಡಿ ಕೋವಿಡ್ ನಿಮಿತ್ತ ಸಂಕಷ್ಟಕ್ಕಿಡಾದ ಪ್ರತಿ ಬೀದಿ ಬದಿ ವ್ಯಾಪಾರಿಗಳಿಗೆ ರೂ.10 ಸಾವಿರಗಳಿಂದ 20 ಸಾವಿರಗಳವರೆಗೆ ಬ್ಯಾಂಕಿನಿಂದ ಸಾಲಸೌಲಭ್ಯ ಕಲ್ಪಿಸಲಾಗುತ್ತಿದೆ ಹಾಗೂ ಬಡ್ಡಿ ಸಹಾಯಧನವನ್ನು ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಯೋಜನೆ ಅಡಿ ಲಾಕ್‍ಡೌನ್ ಅವಧಿಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಬೀದಿ ಬದಿ ವ್ಯಾಪಾರಿಗಳಿಗೆ ರೂ.2 ಸಾವಿರಗಳ ಸಹಾಯಧನವನ್ನು ಡಿಬಿಟಿ ವಿಧಾನದ ಮೂಲಕ ನೀಡಲಾಗಿರುತ್ತದೆ ಎಂದು ಅವರು ವಿವರಿಸಿದರು.
ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ 236561 ಫಲಾನುಭವಿಗಳು, ಪ್ರಧಾನಮಂತ್ರಿ ಆತ್ಮನಿರ್ಭರ್ ನಿಧಿ ಯೋಜನೆಯಡಿ 134526 ಮತ್ತು ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಯೋಜನೆಯಡಿ 162016 ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ವಿಪಕ್ಷಗಳ ವಿರೋಧದ ನಡುವೆ ಮತಾಂತರ ನಿಷೇಧ ಮಸೂದೆ ಮಂಡನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ