Kannada NewsLatestUncategorized

*ಶಾಸಕರಿಗೆ ಗೌರವ ಇಲ್ವಾ? ಸಚಿವರ ವರ್ತನೆ ಸರಿಯಿಲ್ಲ; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಂದು ವಿಧಾನಸಭೆಯಲ್ಲಿ ಸರ್ಕಾರಿ ಬಸ್ ಸಮಸ್ಯೆ ವಿಚಾರ ಸದನದಲ್ಲಿ ಪ್ರತಿಧ್ವನಿಸಿದ್ದು, ಬಸ್ ಇಲ್ಲದೇ ಶಾಲಾ ಮಕ್ಕಳು ಪರದಾಡುವ ಸ್ಥಿತಿ ಎದುರಾಗಿದೆ. ಬಸ್ ಸೌಲಭ್ಯ ಕಲ್ಪಿಸಲು ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಆಡಳಿತ ಪಕ್ಷದ ಸಚಿವರು ಹಾಗೂ ವಿಪಕ್ಷ ಶಾಸಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿ ಸದನದಲ್ಲಿ ಗದ್ದಲ-ಕೋಲಾಹಲವನ್ನೇ ಉಂಟುಮಾಡಿದ ಘಟನೆ ನಡೆದಿದೆ.

ಶಾಲಾ ಮಕ್ಕಳಿಗೆ ಬಸ್ ಸಮಸ್ಯೆ ಬಗ್ಗೆ ಶಾಸಕ ಸಿದ್ದು ಸವದಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ಶ್ರೀರಾಮುಲು ಕೋವಿಡ್ ಮೊದಲು ಬಸ್ ವ್ಯವಸ್ಥೆ ಸರಿಯಾಗಿತ್ತು. ಕೋವಿಡ್ ನಂತರ ಕೆಲವೆಡೆಗಳಲ್ಲಿ ಇನ್ನು ಬಸ್ ಗಳ ಓಡಾಟ ಪುನರಾರಂಭವಾಗಿಲ್ಲ. ರಸ್ತೆ ಮಾರ್ಗ ಸರಿಯಿಲ್ಲದ ಕಾರಣ ಬಸ್ ಸಮಸ್ಯೆಯಾಗಿದೆ ಎಂದು ಉಢಾಫೆ ಉತ್ತರ ನೀಡಿದ್ದಾರೆ. ಇದರಿಂದ ಕೆರಳಿದ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಬಸ್ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ ರಸ್ತೆ ಮಾರ್ಗ ಸರಿಯಿಲ್ಲ ಎಂದುಹೇಳುತ್ತಿದ್ದಾರೆ. ಬಸ್ ಹಾಗೂ ರಸ್ತೆ ಗುಂಡಿ ವಿಚಾರವನ್ನು ಚರ್ಚಿಸಲು ಅವಕಾಶ ಕೊಡಬೇಕು ಇಲ್ಲವಾದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದಾಗಿ ಗದ್ದಲ ಆರಂಭಿಸಿದರು. ಶಾಸಕ ರಂಗನಾಥ್, ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡುತ್ತಿದ್ದಂತೆ ಅವರನ್ನು ಸದನದಿಂದ ಆಚೆ ಹೋಗುವಂತೆ ಸಚಿವ ಗೋವಿಂದ ಕಾರಜೋಳ, ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ರಂಗನಾಥ್ ಅವರಿಗೆ ಸದನದಲ್ಲಿ ಮಾತನಾಡಲು ಬಿಡದೇ ಸಚಿವ ಗೋವಿಂದ ಕಾರಜೋಳ ಅವರು ಏಯ್ ಆಚೆ ಹೋಗು ಎಂದು ಏಕವಚನದಲ್ಲಿ ರೋಷಾವೇಷದಲ್ಲಿ ಮಾತನಾಡಿದ್ದಾರೆ. ಇನ್ನೊಂದೆಡೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಮಾರ್ಷಲ್ ಗಳು ಅವರನ್ನು ಆಚೆಗೆ ಕಳುಹಿಸಿ ಎಂದು ಸಚಿವ ಮಾಧುಸ್ವಾಮಿ ಗದರೊದ್ದಾರೆ. ಸಚಿವರುಗಳ ವರ್ತನೆಗೆ ಕೆಂಡಾಮಂಡಲರಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ಎಂದರೆ ಇದೇನಾ? ಶಾಸಕರಿಗೆ ಗೌರವ ಇಲ್ವಾ? ಸಚಿವರ ವರ್ತನೆ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರಜೋಳ ಅವರೇ, ನೀವು ಹೇಗೆ ಗೆದ್ದು ಬಂದಿದ್ದೀರಿ. ಹಾಗೇ ಅವರೂ ಗೆದ್ದು ಬಂದಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಹೇಳಲು ಅವಕಾಶ ನೀಡದೇ, ಶಾಸಕರಿಗೆ ಮಾತನಾಡಲು ಕೊಡದೇ ಏಯ್ ಆಚೆ ಹೋಗು ಎಂದು ಗದರಿದರೆ ಏನರ್ಥ? ಸದನದ ಒಳಗೆ ಗೌರವದಿಂದ ನಡೆದುಕೊಳ್ಳಿ. ಸಮಸ್ಯೆಗೆ ಪರಿಗಾರ ನೀಡಬೇಕಾದವರು, ನ್ಯಾಯವನ್ನು ಕೊಡಬೇಕಾದ ಸ್ಥಾನದಲ್ಲಿರುವವರು ಈ ರೀತಿ ವರ್ತಿಸಿದರೆ ಹೇಗೆ? ಏನು ದಬ್ಬಾಳಿಕೆ ಮಾಡುತ್ತಿದ್ದೀರಾ? ನಿಮ್ಮ ರೋಷಾವೇಷ, ಹಾವಭಾವ ನೋಡಿದರೆ ಯಾರಿಗಾದರೂ ಬೇಸರವಾಗುತ್ತೆ. ಮಾಧುಸ್ವಾಮಿಯವರೇ ನೀವು ಕೂಡ ಈ ರೀತಿ ವರ್ತಿಸುವುದು ಸರಿಯಲ್ಲ. ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕೊಡಿ. ಸಚಿವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂದು ಗುಡುಗಿದರು. ಇದು ಇನ್ನೊಮ್ಮೆ ಮರುಕಳಿಸಬಾರದು ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯರು ಗೂಂಡಾ ಮಂತ್ರಿಗಳು ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ-ಕೋಲಾಹಲ ಆರಂಭವಾಗುತ್ತಿದ್ದಂತೆ ಕಲಾಪವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು.

*ಮೀಸಲಾತಿ ಬಿಕ್ಕಟ್ಟು; ಕಾಂಗ್ರೆಸ್ ನಿಲುವಿನ ಬಗ್ಗೆ ಡಿ.ಕೆಶಿವಕುಮಾರ್ ಹೇಳಿದ್ದೇನು?*

 

https://pragati.taskdun.com/d-k-shivakumarpresseetbelagavicongress-ticket/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button