*ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಯುವಕ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
18 ವರ್ಷದ ವೆಂಕಪ್ಪ ಮೈಯೆಕರ್ ಮೃತ ಯುವಕ. ಖಾನಾಪುರ ಹೊರವಲಯದ ಸ್ವರಾಜ್ ಹೋಟೆಲ್ ನಲ್ಲಿ ಮೂರು ತಿಂಗಳಿಂದ ಯುವಕ ಕೆಲಸ ಮಾಡುತ್ತಿದ್ದ. ಆ.20ರಂದು ಯುವಕನ ಮೇಲೆ ಕಳ್ಳತನದ ಆರೋಪ ಹೋರಿಸಿ ಆತನನ್ನು ಹೋಟೆಲ್ ರೂಮ್ ನಲ್ಲಿ ಕೂಡಿ ಹಾಕಿರುವ ಹೋಟೆಲ್ ಮಾಲೀಕ ನಾಗೇಶ್ ಗುಂಡು ಹಾಗೂ ಸಹೋದರ ವಿಜಯ್, ಯುವಕನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇದನ್ನು ಪ್ರಶ್ನಿಸಲು ಹೋಟೆಲ್ ಗೆ ಹೋದ ಯುವಕನ ಪೋಷಕರಿಗೆ ಧಮ್ಕಿ ಹಾಕಿರುವ ಹೋಟೆಲ್ ಮಾಲೀಕ 10 ಸಾವಿರ ಹಣ ಕೊಟ್ಟು ವಿಷಯ ಬಾಯ್ಬಿಡದಂತೆ ಹೆದರಿಸಿ ಕಳುಹಿಸಿದ್ದಾನೆ. ಇದರಿಂದ ಪೋಷಕರು ದೂರು ನೀಡಲು ಹಿಂದೇಟು ಹಾಕುತ್ತಿದ್ದರು. ವಿಚಾರ ತಿಳಿದ ಗ್ರಾಮಸ್ಥರು ಮೃತ ಯುವಕನ ಪೋಷಕರ ಬೆನ್ನಿಗೆ ನಿಂತಿದ್ದಾರೆ. ಗ್ರಾಮಸ್ಥರ ಸಮೇತ ಪೋಷಕರು ಖಾನಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.